ಕೃಷಿ, ಹೈನುಗಾರಿಕೆ; ದೇಸಿತನದ ಸೊಗಡು

ಶನಿವಾರ, ಜೂಲೈ 20, 2019
25 °C
ರಾಜುಗೌಡ ಪಾಟೀಲಗೆ 100 ಆಕಳು ಸಾಕಣೆ ಗುರಿ

ಕೃಷಿ, ಹೈನುಗಾರಿಕೆ; ದೇಸಿತನದ ಸೊಗಡು

Published:
Updated:
Prajavani

ಮುಧೋಳ: ತಾಲ್ಲೂಕಿನ ಜುನ್ನೂರಿನ ರಾಜುಗೌಡ (ವಿವೇಕಾನಂದಗೌಡ) ಪಾಟೀಲ ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಅದರಲ್ಲಿ ಯಶಸ್ಸು ಪಡೆದಿದ್ದಾರೆ.

ರಾಜುಗೌಡರ ತೋಟದ ಗೋಶಾಲೆಯಲ್ಲಿ ಸದ್ಯ 35 ಆಕಳು ಇವೆ. ಅದರಲ್ಲಿ ಖಿಲಾರಿ ಹಾಗೂ ಜವಾರಿ ತಳಿ ಹಸುಗಳು ಮಾತ್ರ ಇವೆ. ಆಕಳ ಹಾಲನ್ನು ಮಾರುವುದಿಲ್ಲ. ಹಾಲನ್ನು ಸಮೀಪದ ವೃಂದಾರಣ್ಯ ಗುರುಕುಲಕ್ಕೆ ಉಚಿತವಾಗಿ ಕೊಡುತ್ತಾರೆ. ಆಕಳನ್ನು ಮಾರಾಟ ಮಾಡುವುದಿಲ್ಲ. ಹಿಂದೆ ನಮ್ಮ ಮನೆಯಲ್ಲಿ ನೂರು ಆಕಳು ಇರುತ್ತಿದ್ದವು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಾಗಾಗಿ ನಮ್ಮಲ್ಲಿನ ದೇಸಿ ಆಕಳ ಸಂಖ್ಯೆ 100 ಆಗುವವರೆಗೆ ನಾನು ವಿಶ್ರಮಿಸುವುದಿಲ್ಲ ಎನ್ನುತ್ತಾರೆ. ಈಗಿರುವ 35 ಆಕಳು ನಿರ್ವಹಿಸಲು ಪ್ರತಿ ವರ್ಷ ಕನಿಷ್ಠ ₹5 ಲಕ್ಷ ಖರ್ಚಾಗುತ್ತಿದೆ ಎಂದು ರಾಜುಗೌಡ ಹೇಳುತ್ತಾರೆ.

‘ಇಸ್ಕಾನ್ ನನ್ನ ಮೇಲೆ ಆಗಾಧವಾದ ಪ್ರಭಾವ ಬೀರಿದೆ. ಭಾರತೀಯ ಪರಂಪರೆಗೆ ಮಾರು ಹೋಗಿದ್ದೇನೆ. ಸಾವಯವ ಕೃಷಿಯೇ ನನ್ನ ಉಸಿರು ಎಂದು ಹೇಳುವ ರಾಜುಗೌಡ ಪ್ರತಿ ವರ್ಷ ಒಂದು ಎಕರೆ ಜಮೀನನ್ನು ಸಾವಯವ ಕೃಷಿಯ ನೆಲೆಯಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಈಗ ಏಳು ಎಕರೆಯಲ್ಲಿ ಸಂಪೂರ್ಣ ಸಾವಯವ ಕೃಷಿ ಮಾಡುತ್ತಿದ್ದಾರೆ. ಹೊಲದ ಕೆಲಸಕ್ಕೆ ಟ್ರ್ಯಾಕ್ಟರ್ ಬಳಸುವುದಿಲ್ಲ. ಕೇವಲ ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಮಾತ್ರ ಉಪಯೋಗಿಸುತ್ತಾರೆ. ಉಳಿದೆಲ್ಲ ಕೆಲಸಗಳಿಗೆ ಎತ್ತುಗಳ ನೆರವು ಪಡೆಯಲಾಗುತ್ತಿದೆ. ಕುಟುಂಬದ ಒಡೆತನದಲ್ಲಿರುವ 80 ಎಕರೆ ತೋಟಕ್ಕೆ ಕೊಳವೆ ಬಾವಿಯ ಮೂಲಕ ಸಂಪೂರ್ಣ ನೀರಾವರಿ ಮಾಡಲಾಗಿದೆ. ತೋಟದಲ್ಲಿ ಕಬ್ಬು, ಸದಕ, ಗೋವಿನ ಜೋಳ ಬೆಳೆಯಲಾಗುತ್ತಿದೆ. ಪ್ರತಿ ವರ್ಷ 200 ಟನ್ ಕಬ್ಬು ಬೆಳೆಯಲಾಗುತ್ತಿದೆ. 150 ಕ್ವಿಂಟಲ್ ಸದಕ, 200 ಕ್ವಿಂಟಲ್ ಗೋವಿನಜೋಳ ಬೆಳೆಯುತ್ತಾರೆ.

ಪ್ರತಿವರ್ಷ 10 ರಿಂದ 12 ಕ್ವಿಂಟಲ್ ಸಾವಯವ ಬೆಲ್ಲ ತಯಾರಿಸಲಾಗುತ್ತದೆ. ಪ್ರತಿ ಕೆ.ಜಿ ಗೆ ₹ 60 ರಂತೆ ಇಸ್ಕಾನ್ ಸಂಸ್ಥೆಗೆ ಮಾರಾಟ ಮಾಡುತ್ತಾರೆ. ನನ್ನ ಈ ಪ್ರಯತ್ನಕ್ಕೆ ತಂದೆ ಶಿವನಗೌಡ ಪಾಟೀಲ ಹಾಗೂ ವಿಜ್ಞಾನಿ ಆಗಿರುವ ಸಹೋದರ ಡಾ.ವಿಕ್ರಮ್ ಪಾಟೀಲ, ಇಸ್ಕಾನ್‌ಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಕಿರಿಯ ಸಹೋದರ ವಸುದೇವಸುತದಾಸ್ (ವಿನೋದ) ಸಂಪೂರ್ಣ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳುತ್ತಾರೆ.

ಹೆಚ್ಚಿನ ಮಾಹಿತಿಗೆ ರಾಜುಗೌಡ ಪಾಟೀಲ ಮೊಬೈಲ್ ಸಂಖ್ಯೆ: 9482458758

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !