ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ‘ಫ್ರೂಟ್ಸ್’ ನೋಂದಣಿಗೆ ರೈತರ ನಿರಾಸಕ್ತಿ

ಹಲವು ಮಂದಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ
Published : 9 ನವೆಂಬರ್ 2023, 23:30 IST
Last Updated : 9 ನವೆಂಬರ್ 2023, 23:30 IST
ಫಾಲೋ ಮಾಡಿ
Comments

ಬಾಗಲಕೋಟೆ: ಬೆಳೆ ವಿಮೆ, ಬರ ಪರಿಹಾರ ಸೇರಿ ವಿವಿಧ ಸೌಲಭ್ಯಗಳನ್ನು ಪಡೆಯಲು ‘ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ’ (ಫ್ರೂಟ್ಸ್) ತಂತ್ರಾಂಶದಲ್ಲಿ ರೈತರು ಹೆಸರು ನೋಂದಾಯಿಸಬೇಕು. ಗುರುತಿನ ಸಂಖ್ಯೆ ಪಡೆಯಬೇಕು. ಆದರೆ, ನೋಂದಣಿಗೆ ಬಹುತೇಕ ಮಂದಿ ನಿರಾಸಕ್ತಿ ತೋರಿರುವ ಕಾರಣ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ.

ರಾಜ್ಯದಲ್ಲಿ 2.12 ಕೋಟಿ ಸರ್ವೆ ಸಂಖ್ಯೆಗಳಿವೆ (ಪ್ಲಾಟ್). ‘ಫ್ರೂಟ್ಸ್’ ತಂತ್ರಾಂಶದಲ್ಲಿ 1.30 ಕೋಟಿ ಸರ್ವೆ ನಂಬರ್ ನೋಂದಣಿಯಾಗಿವೆ.  ಶೇ 79.78ರಷ್ಟು ನೋಂದಣಿಯಾಗಿದ್ದು, ಗದಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಶೇ 42.46 ನೋಂದಾಯಿಸಿರುವ ಬೆಂಗಳೂರು ನಗರ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇನ್ನೂ 82 ಲಕ್ಷ ನೋಂದಣಿ ಆಗಬೇಕಿದೆ.

ಒಬ್ಬ ರೈತನಿಗೆ ಐದು ಎಕರೆವರೆಗೆ ಬರ ಪರಿಹಾರ ನೀಡಲು ಅವಕಾಶವಿದೆ. ಐದು ಎಕರೆ ಭೂಮಿಯನ್ನು ಎರಡು ಸರ್ವೆ ಸಂಖ್ಯೆಗಳಲ್ಲಿ ಹೊಂದಿರುವ ರೈತರು, ಎರಡು ಎಕರೆ ಭೂಮಿಯ ಒಂದು ಸರ್ವೆ ಸಂಖ್ಯೆ ನೀಡಿ ‘ಫ್ರೂಟ್ಸ್’ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿದ್ದಾರೆ. ಆದರೆ, ಇನ್ನೂ ಮೂರು ಎಕರೆ ಭೂಮಿಯ ಸರ್ವೆ ಸಂಖ್ಯೆ  ನೋಂದಾಯಿಸಿಲ್ಲ. ಇದರಿಂದ ಎರಡು ಎಕರೆ ಭೂಮಿಗೆ ಮಾತ್ರ ಪರಿಹಾರ ಸಿಗುತ್ತದೆಯೇ ಹೊರತು ಉಳಿದ ಮೂರು ಎಕರೆ ಭೂಮಿಗೆ ಸಿಗುವುದಿಲ್ಲ.

‘ಪ್ರತಿಯೊಬ್ಬ ರೈತ ತಾವು ಹೊಂದಿರುವ ಭೂಮಿಯ ಎಲ್ಲ ಸರ್ವೆ ಸಂಖ್ಯೆಗಳನ್ನು  ತಂತ್ರಾಂಶದಲ್ಲಿ ದಾಖಲಿಸಬೇಕು. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಸೌಲಭ್ಯ, ಬ್ಯಾಂಕ್‌ ಸಾಲ ಸೇರಿ ವಿವಿಧ ಸೌಲಭ್ಯಗಳನ್ನು ಪಡೆಯಲು ಇದೇ ಆಧಾರ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ತಿಳಿಸಿದರು.

‘ನಾಲ್ಕು ವರ್ಷಗಳಿಂದ ತಂತ್ರಾಂಶದಲ್ಲಿ ರೈತರ ಭೂ ದಾಖಲೆಗಳನ್ನು ನೋಂದಾಯಿಸುವ ಕಾರ್ಯ ನಡೆದಿದ್ದು, ರಾಜ್ಯದಲ್ಲಿ ಈವರೆಗೆ ಶೇ 61.34ರಷ್ಟು ದಾಖಲಿಸಲು ಸಾಧ್ಯವಾಗಿದೆ. ನೋಂದಣಿ ಆಗದಿದ್ದರೆ, ಪರಿಹಾರ ಸಿಗುವುದಿಲ್ಲ’ ಎಂದರು.

‘ಎಲ್ಲ ಹೊಲಗಳ ನೋಂದಣಿ ಮಾಡಬೇಕು ಎಂಬ ಮಾಹಿತಿ ರೈತರಿಗೆ ಗೊತ್ತಿಲ್ಲ. ಹಲವಾರು ರೈತರು ಒಂದೇ ಹೊಲ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ರೈತ ಮುಖಂಡ, ಬೀಳಗಿಯ ಸಿದ್ದಪ್ಪ ಬಳಗಾನೂರ ತಿಳಿಸಿದರು.

ಎಲ್ಲೆಲ್ಲಿ ನೋಂದಣಿ

ರೈತ ಸಂಪರ್ಕ ಕೇಂದ್ರ ತೋಟಗಾರಿಕೆ ಇಲಾಖೆ ಪಶುಸಂಗೋಪನೆ ರೇಷ್ಮೆ ಇಲಾಖೆ ಕಚೇರಿಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಬಳಿ ನೋಂದಣಿ ಮಾಡಿಸಬಹುದು.

ಪಹಣಿ ಆಧಾರ್‌ ಕಾರ್ಡ್‌ ಬ್ಯಾಂಕ್ ಪಾಸ್‌ಬುಕ್‌ ಒಂದು ಭಾವಚಿತ್ರ ಜಾತಿ ಪ್ರಮಾಣಪತ್ರ (ಪರಿಶಿಷ್ಟ ಜಾತಿ ಪಂಗಡದವರು) ಪ್ರತಿಗಳನ್ನು ನೀಡಿದರೆ ಹೆಸರು ನೋಂದಣಿ ಆಗುತ್ತದೆ. ದೊರೆಯುವ ಸೌಲಭ್ಯ ‘ಫ್ರೂಟ್ಸ್’ನಲ್ಲಿ ಭೂ ವಿವರ ನೋಂದಾಯಿಸಿಕೊಂಡು ಗುರುತಿನ ಸಂಖ್ಯೆ ಪಡೆದರೆ ಕೃಷಿ ತೋಟಗಾರಿಕೆ ರೇಷ್ಮೆ ಇಲಾಖೆಯಲ್ಲಿ ಸಿಗುವ ಬೀಜ ರಸಗೊಬ್ಬರ ಕೃಷಿ ಯಂತ್ರೋಪಕರಣ ಹನಿ ನೀರಾವರಿ ಸೇರಿದಂತೆ ವಿವಿಧ ಖರೀದಿಗಳ ಮೇಲೆ ಸಬ್ಸಿಡಿ ಪಡೆಯಬಹುದಾಗಿದೆ.

ಪಶು ಸಂಗೋಪನೆ ಮೀನುಗಾರಿಕೆ ಇಲಾಖೆಯ ಸೌಲಭ್ಯಗಳಿಗೂ ಅನ್ವಯವಾಗಲಿದೆ. ಹೊಲದಲ್ಲಿ ಬೆಳೆದಿರುವ ಮಾಹಿತಿ ಇದರಲ್ಲಿಯೇ ದೊರೆಯಲಿದ್ದು ಅದನ್ನು ಆಧರಿಸಿದ ಬೆಳೆ ವಿಮೆ ಪರಿಹಾರ ಬರ ಪರಿಹಾರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ರೈತರಿಗೆ ಬ್ಯಾಂಕ್‌ಗಳು ಸಾಲವನ್ನೂ ಇದೇ ಆಧಾರದ ಮೇಲೆ ನೀಡಲಿವೆ. ಬೆಂಬಲ ಬೆಲೆಯಡಿ ಮಾರಾಟಕ್ಕೂ ಬೇಕಾಗಲಿದೆ.

‘ಪ್ರೂಟ್ಸ್‘ ತಂತ್ರಾಂಶದ ನೋಂದಣಿಯಲ್ಲಿ ಬಾಗಲಕೋಟೆ ಜಿಲ್ಲೆ (ಶೇ 76.87) ರಾಜ್ಯಕ್ಕೆ ಎರಡನೇ ಸ್ಥಾನದಲ್ಲಿದೆ. ಸಮರೋಪಾದಿಯಲ್ಲಿ ನೋಂದಣಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ
-ಕೆ.ಎಂ. ಜಾನಕಿ, ಜಿಲ್ಲಾಧಿಕಾರಿ ಬಾಗಲಕೋಟೆ
ಬರ ಪರಿಹಾರ ಸಿಗದಿರುವ ಬಗ್ಗೆ ಹಲವು ದೂರುಗಳಿವೆ. ಇದನ್ನು ನಿವಾರಿಸಲು ‘ಫ್ರೂಟ್ಸ್ ತಂತ್ರಾಂಶ ಆಧರಿಸಿ ಪರಿಹಾರ ಬಿಡುಗಡೆ ಮಾಡುವ ಉದ್ದೇಶವಿದೆ. ಆದ್ದರಿಂದ ಅಧಿಕಾರಿಗಳು ರೈತರಿಂದ ನೋಂದಣಿ ಮಾಡಿಸಬೇಕು.
-ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT