ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಲಸಂಗಮ: ಶಿಕ್ಷಣದೊಂದಿಗೆ ಉದ್ಯೋಗ ಕಲ್ಪಿಸುವ ಜಿಟಿಟಿಸಿ

ಬಾಗಲಕೋಟೆ, ವಿಜಯಪುರ ಅವಳಿ ಜಿಲ್ಲೆಯ ಏಕೈಕ ಕೇಂದ್ರ; 22 ವರ್ಷಗಳಿಂದ ಕಾರ್ಯನಿರ್ವಹಣೆ
Last Updated 26 ಮೇ 2022, 6:08 IST
ಅಕ್ಷರ ಗಾತ್ರ

ಕೂಡಲಸಂಗಮ: ಕೆಳ ಹಾಗೂ ಮಧ್ಯಮ ವರ್ಗದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಕ್ಷಣದ ಜೊತೆಗೆ ಉದ್ಯೋಗವನ್ನು ಕೊಡುವಂತಹ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಬಾಗಲಕೋಟೆ, ವಿಜಯಪುರ ಅವಳಿ ಜಿಲ್ಲೆಯ ಏಕೈಕ ಕೇಂದ್ರವಾಗಿ ಕೂಡಲಸಂಗಮದಲ್ಲಿ ಕಳೆದ 22 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.

ಕೂಡಲಸಂಗಮ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ದೇಶ ವಿದೇಶ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವ ಎಸ್.ಎಸ್.ಎಲ್.ಸಿ ಪಾಸಾಗಿರುವ ವಿದ್ಯಾರ್ಥಿಗಳು ಜಿಟಿಟಿಸಿಯಲ್ಲಿ ಪ್ರವೇಶ ಪಡೆಯುವುದು ಉತ್ತಮ ಆಯ್ಕೆ.

ವೃತ್ತಿ ತರಬೇತಿ ಪಡೆಯುವವರಿಗಾಗಿ ರಾಜ್ಯ ಸರ್ಕಾರ 2000ನೇ ಇಸ್ವಿಯಲ್ಲಿ ಕೂಡಲಸಂಗಮದಲ್ಲಿ ಜಿಟಿಟಿಸಿ ಆರಂಭಿಸಿದೆ. ಇಲ್ಲಿ ತರಬೇತಿ ಪಡೆದವರು ನಿರುದ್ಯೋಗಿಯಾಗಿ ಉಳಿದಿಲ್ಲ. ಎಸ್.ಎಸ್.ಎಲ್.ಸಿ ಪಾಸಾಗಿರುವ ವಿದ್ಯಾರ್ಥಿಗಳಿಗೆ 4 ವರ್ಷದ ಡಿಪ್ಲೊಮಾ ಕೋರ್ಸ್‌ ಇಲ್ಲಿದೆ.

ಟೂಲ್ & ಡೈ ಮೇಕಿಂಗ್ ಮೂರು ವರ್ಷದ ವಿಷಯಾಧಾರಿತ ತರಬೇತಿ ಹಾಗೂ ಒಂದು ವರ್ಷದ ಕೈಗಾರಿಕೆಗಳಲ್ಲಿ ಉದ್ಯಮ ತರಬೇತಿ ಇರುತ್ತದೆ. ಈ ಒಂದು ವರ್ಷದ ಉದ್ಯಮ ತರಬೇತಿಯಲ್ಲಿ ಪ್ರತಿ ವಿದ್ಯಾರ್ಥಿಗೂ ಪ್ರತಿ ತಿಂಗಳು ₹10,000–₹15,000 ಗೌರವ ಧನವನ್ನು ಕಾರ್ಯನಿರ್ವಹಿಸುವ ಕಂಪನಿ ಕೊಡಲಿದೆ.

ಸೆಮಿಸ್ಟೆರ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತಿ ಸೆಮಿಸ್ಟರಗೆ ₹11,000 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ನಾಲ್ಕನೇ ವರ್ಷದಲ್ಲಿ ಒಂದು ವರ್ಷಕ್ಕೆ ₹11,000 ಶುಲ್ಕ ಭರಿಸಬೇಕಾಗುತ್ತದೆ.

ಜಿಟಿಟಿಸಿಯಲ್ಲಿ ನಾಲ್ಕು ವರ್ಷದ ಡಿಪ್ಲೊಮಾ ಓದಿದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮೂರನೇ ಸೆಮಿಸ್ಟರಗೆ ಪ್ರವೇಶ ಹೊಂದಲು ಅವಕಾಶವಿದೆ.

ಜಿಟಿಟಿಸಿಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ತರಬೇತಿ ನೀಡಲು 11 ಉಪನ್ಯಾಸಕರು, 6 ಶಿಕ್ಷಕೇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನ ನಡೆಯುವುದು. ಒನ್ ರೂಫ್ ಕ್ಯಾಂಪಸ್ ಆಗಿರುವ ಈ ಶಿಕ್ಷಣ ಕೇಂದ್ರ 10 ಎಕರೆ ವಿಶಾಲವಾದ ಜಾಗದಲ್ಲಿ ಇದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ನಿಲಯ ಇವೆ.

‘ಬ್ಯಾಂಕಾಕ್, ಥಾಯ್ಲೆಂಡ್‌ನ ಹಾನಿವೊಲ್ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಜಿಟಿಟಿಸಿ ಮುಗಿಸಿದ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ವಿಪುಲ ಅವಕಾಶಗಳು ಇವೆ’ ಎಂದು ಕೂಡಲಸಂಗಮ ಜಿಟಿಟಿಸಿಯಲ್ಲಿ ತರಬೇತಿ ಪಡೆದ ಶಾಹಿದ್ ಡೊನೂರ ಹೇಳಿದರು.

ಸಂಪರ್ಕ ವಿಳಾಸ: ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೂಡಲಸಂಗಮ. ದೂರವಾಣಿ: 08351–268048 ಮೊಬೈಲ್‌ ಫೋನ್‌:
7411811916.

*
ಗ್ರಾಮೀಣ, ನಗರ ಪ್ರದೇಶದ ಬಡ, ಮಧ್ಯಮ ವರ್ಗದ ಮಕ್ಕಳು ನಿಶ್ಚಿತವಾಗಿ ಬಹುಬೇಗ ಉದ್ಯೋಗ ಹೊಂದಲು ಜಿಟಿಟಿಸಿ ಉತ್ತಮ ಆಯ್ಕೆ. ಇಲ್ಲಿ ಶಿಕ್ಷಣ ಪಡೆದು ವಿದ್ಯಾರ್ಥಿಗಳು ನಿಶ್ಚಿತವಾಗಿ ಉದ್ಯೋಗಕ್ಕೆ ಸೇರುವರು.
-ನಿರಂಜನ ಎನ್, ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT