ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ: ಪ್ರವಾಹದಿಂದಾಗಿ ಹಳಿ ತಪ್ಪಿದ ಬದುಕು

ಮೂವರ ಬಲಿ, ಹತ್ತಾರು ಗ್ರಾಮಗಳಿಗೆ ನುಗ್ಗಿದ ನೀರು
Published : 5 ಆಗಸ್ಟ್ 2024, 4:52 IST
Last Updated : 5 ಆಗಸ್ಟ್ 2024, 6:57 IST
ಫಾಲೋ ಮಾಡಿ
Comments

ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ನದಿಗಳ ಪ್ರವಾಹದಿಂದಾಗಿ ನದಿ ತೀರದ ಜನರ ಬದುಕು ಹಳಿ ತಪ್ಪಿದೆ. ಮನೆ ಸೇರಬೇಕಾಗಿದ್ದ ಬೆಳೆಯ ಫಸಲು ನೀರು ಪಾಲಾಗಿದೆ.

ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಕಾಳು ಕಡಿಗಳು ನೀರು ಪಾಲಾಗಿವೆ. ವಿವಿಧ ಸಾಮಗ್ರಿಗಳು ಹಾಳಾಗಿವೆ. ಮನೆಯಿಂದ ಬದುಕು ಶಾಲೆಗಳಿಗೆ ಸ್ಥಳಾಂತರಗೊಂಡಿದೆ. ಜನರು ಹಾಸಿಗೆ, ಮನೆಯಲ್ಲಿದ್ದ ವಿವಿಧ ಸಾಮಗ್ರಿಗಳೊಂದಿಗೆ ವಾರದಿಂದ ಶಾಲೆಯಲ್ಲಿಯೇ ವಾಸಿಸುತ್ತಿದ್ದಾರೆ.

ಮನೆಗಳು ನೀರಿನಲ್ಲಿ ಮುಳುಗಿರುವುದರಿಂದ ಕೆಲವರು ಸ್ನೇಹಿತರ, ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಇನ್ನೂ ಕೆಲವರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸಾಮಗ್ರಿಗಳ ಸಾಗಾಟಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಮರಳಿ ಅವುಗಳನ್ನು ಮನೆಗೆ ತರಲೂ ಮತ್ತೆ ಖರ್ಚು ಮಾಡಬೇಕಿದೆ. ಇದೇ ಕಾರಣಕ್ಕೆ ಕೆಲವರು ಮನೆ ಬಿಡಲು ಒಪ್ಪುತ್ತಿಲ್ಲ.

ಮಳಲಿ, ಬದ್ನಿ, ಜಾಲಿಬೇರಿ, ಮುಧೋಳ ನಗರ ಸೇರಿದಂತೆ ಹಲವೆಡೆ ಜನರು ಸಾಮಗ್ರಿಗಳನ್ನು ಬೇರೆಡೆ ಸಾಗಿಸಿ, ನೀರಿನ ಮಧ್ಯೆಯೇ ಜೀವನ ಸಾಗಿಸುತ್ತಿದ್ದಾರೆ. 

ಗರ್ಭಿಣಿಯರು, ಬಾಣಂತಿಯರು, ವಯಸ್ಸಾದವರ ಸಂಕಷ್ಟ ಹೇಳತೀರದಾಗಿದೆ. ಶಾಲೆಗಳಲ್ಲಿ ತೆರೆದಿರುವ ಕಾಳಜಿ ಕೇಂದ್ರಗಳಿಗೆ ಹೋದರೂ, ಕೊಠಡಿಯಲ್ಲಿ ಬಹಳ ಮಂದಿಯೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ. ಮನೆಯಲ್ಲಿದ್ದರೂ ಆರೈಕೆ ಕಷ್ಟವಾಗಿದೆ. ಚಿಕಿತ್ಸೆಗೆ ಆಸ್ಪತ್ರೆಗಳಿಗೆ ತೆರಳಲೂ ಪರದಾಡುವಂತಾಗಿದೆ.

23 ಕಾಳಜಿ ಕೇಂದ್ರ: ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ 23 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 2,503 ಮಂದಿ ಆಶ್ರಯ ಪಡೆದಿದ್ದಾರೆ.

ಮುಧೋಳ ತಾಲ್ಲೂಕು ಹೆಚ್ಚಿನ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. 14 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 1,591 ಮಂದಿ, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 7 ಕಾಳಜಿ ಕೇಂದ್ರದಲ್ಲಿ 883 ಮಂದಿ, ಬಾಗಲಕೋಟೆಯ ಒಂದು ಕೇಂದ್ರದಲ್ಲಿ 25 ಜನರು, ಬೀಳಗಿ ತಾಲ್ಲೂಕಿನ ಒಂದು ಕೇಂದ್ರದಲ್ಲಿ ಎಂಟು ಮಂದಿ ಆಶ್ರಯ ಪಡೆದಿದ್ದಾರೆ.

2 ಸಾವಿರಕ್ಕೂ ಹೆಚ್ಚು ಜಾನುವಾರುಗಳೂ ಕಾಳಜಿ ಕೇಂದ್ರಗಳಲ್ಲಿವೆ. ಅವುಗಳಿಗೆ ಮೇವು ಒದಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಪ್ರತಿ ಟನ್‌ ಮೇವಿಗೆ ಸರ್ಕಾರ ₹3 ಸಾವಿರ ನೀಡುತ್ತಿದ್ದು, ಆ ಮೊತ್ತದಲ್ಲಿ ಮೇವು ಖರೀದಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ.

ಮುಧೋಳ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನೀರಿನಿಂದ ಸುತ್ತುವರೆದಿರುವ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರಾಷ್ಟ್ರಧ್ವಜ ಹಾರಿಸಿರುವ ಪಂಚಾಯಿತಿ ಸಿಬ್ಬಂದಿ
ಮುಧೋಳ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನೀರಿನಿಂದ ಸುತ್ತುವರೆದಿರುವ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರಾಷ್ಟ್ರಧ್ವಜ ಹಾರಿಸಿರುವ ಪಂಚಾಯಿತಿ ಸಿಬ್ಬಂದಿ

ಮೂವರ ಸಾವು

ಜಿಲ್ಲೆಯಲ್ಲಿ ಸುರಿಯುವ ಮಳೆ ಪ್ರವಾಹಕ್ಕೆ ಪ್ರತಿ ವರ್ಷ ಹಲವಾರು ಜನರು ಜೀವ ಕಳೆದುಕೊಳ್ಳುತ್ತಾರೆ. ಜಮಖಂಡಿಯಲ್ಲೊಬ್ಬರು ಮನೆ ಬಿದ್ದು ಮೃತರಾಗಿದ್ದರೆ ಜಮಖಂಡಿ ತಾಲ್ಲೂಕಿನ ಇಬ್ಬರು ನದಿ ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ.

ಧರೆಗುರುಳಿದ ಕಂಬಗಳು

ನದಿಗಳು ಗ್ರಾಮ ರಸ್ತೆ ಹೊಲಗಳಿಗೆ ನುಗ್ಗಿರುವುದರಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದರೆ ವಿದ್ಯುತ್ ಪರಿವರ್ತಕಗಳು ನೀರು ಪಾಲಾಗಿವೆ. ಜಿಲ್ಲೆಯಲ್ಲಿ 451 ವಿದ್ಯುತ್ ಕಂಬಗಳು ಧರೆಗುರುಳಿದ್ದರೆ 90 ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. 9 ಕಿ.ಮೀ ರಸ್ತೆ ಸೇತುವೆಗಳು ಹಾಳಾಗಿರುವುದರ ಬಗ್ಗೆ ಸಮೀಕ್ಷೆ ನಡೆಯಬೇಕಿದೆ.

16 ಸಾವಿರ ಹೆಕ್ಟೇರ್ ಬೆಳೆ ನಾಶ

ಬಾಗಲಕೋಟೆ ಜಿಲ್ಲೆಯ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಪ್ರವಾಹದಿಂದ ಹಾಳಾಗಿವೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಮುಧೋಳ ಜಮಖಂಡಿ ತಾಲ್ಲೂಕಿನ 10 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶ ನೀರಿನಲ್ಲಿ ಮುಳುಗಿದೆ. ಕಬ್ಬು ಉಳ್ಳಾಗಡ್ಡಿ ಹೆಸರು ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿವೆ. ಮಲಪ್ರಭಾ ನದಿಯಲ್ಲಿ ನೀರು ಹೆಚ್ಚಾಗಿದ್ದು ಆ ಭಾಗದ ಬೆಳೆಯೂ ನೀರು ಪಾಲಾಗಿದೆ. ಮುಂದಿನ ದಿನಗಳಲ್ಲಿ ಬೆಳೆಯ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಇದರಿಂದಾಗಿ ಸಾವಿರಾರು ರೈತ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿವೆ.

Pavitra Bhat
Pavitra Bhat

ಪ್ರವಾಹದಿಂದ ಉಂಟಾದ ಬೆಳೆ ಮನೆಗಳ ಹಾನಿ

ವಿವರ ತಾಲ್ಲೂಕು; ಮನೆಗಳು: ಬೆಳೆ (ಹೆಕ್ಟೇರ್‌ನಲ್ಲಿ) ಬಾಗಲಕೋಟೆ;137;314 ಜಮಖಂಡಿ;16;2401 ರಬಕವಿ–ಬನಹಟ್ಟಿ;15;2744 ಮುಧೋಳ;33;10076 ಬೀಳಗಿ;44;340 ಬಾದಾಮಿ;73;00 ಗುಳೇದಗುಡ್ಡ;44;00 ಹುನಗುಂದ;43;00 ಇಳಕಲ್‌;51;00

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT