ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

14 ತಿಂಗಳಾದರೂ ಪುಸ್ತಕಗಳೇ ಪ್ರಕಟವಾಗಿಲ್ಲ

ಈ ವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಮತ್ತೆ 10 ಪುಸ್ತಕ ಪ್ರಕಟಣೆ ಘೋಷಣೆ
Published 20 ಜೂನ್ 2024, 6:55 IST
Last Updated 20 ಜೂನ್ 2024, 6:55 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 29 ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಈ ಬಾರಿ ಹತ್ತು ಪುಸ್ತಕಗಳ ಪ್ರಕಟಣೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮುಂದಾಗಿದೆ. ಆದರೆ, 16 ತಿಂಗಳ ಹಿಂದೆ ನಡೆದಿದ್ದ ಸಮ್ಮೇಳನದಲ್ಲಿ ಘೋಷಿಸಿದ್ದ ಪುಸ್ತಕಗಳೇ ಹೊರ ಬಂದಿಲ್ಲ.

ಬೀಳಗಿಯಲ್ಲಿ ಅದ್ದೂರಿಯಾಗಿ ಸಮ್ಮೇಳನ ನಡೆದಿತ್ತು. ಸಮ್ಮೇಳನದಲ್ಲಿ ಪುಸ್ತಕಗಳ ಬಿಡುಗಡೆಯೂ ನಡೆದಿತ್ತು. ಬಿಡುಗಡೆಗಾಗಿ ಕೇವಲ ಐದು ಪ್ರತಿಗಳನ್ನು ತರಲಾಗಿತ್ತು. ನಂತರ ಅವುಗಳ ಪ್ರಕಟಣೆಗೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಸಕ್ತಿ ವಹಿಸಲಿಲ್ಲ.

ಬೀಳಗಿ ಸಮ್ಮೇಳನದಲ್ಲಿ ತಾಲ್ಲೂಕು ಮತ್ತು ಜಿಲ್ಲೆಯ ಸಮ್ಮೇಳನ ಅಧ್ಯಕ್ಷರ ಭಾಷಣ, ಜಿಲ್ಲೆಯ ಜನಪದ ಕತೆಗಳು, ಜಿಲ್ಲೆಯ ಮಕ್ಕಳ ಸಾಹಿತ್ಯದ ಪರಿಚಯ, ಜಿಲ್ಲೆಯ ರಂಗ ಪರಂಪರೆ, ಜಿಲ್ಲೆಯ ಆಯ್ದ ಕತೆಗಾರರ ಕತೆಗಳ, ತಿಂಗಳ ಅತಿಥಿ ಕಾರ್ಯಕ್ರಮ, ಮಹಿಳಾ ಸಾಹಿತ್ಯ ಅವಲೋಕನ, ಸಮ್ಮೇಳನದ ಸ್ಮರಣ ಸಂಚಿಕೆ ಸೇರಿದಂತೆ 10 ಪುಸ್ತಕಗಳ ಘೋಷಣೆ ಮಾಡಲಾಗಿತ್ತು.

ಬೀಳಗಿಯಲ್ಲಿ 2023ರ ಫೆ.23ರಂದು ಸಮ್ಮೇಳನ ನಡೆದಿತ್ತು. ಸಮ್ಮೇಳನ ನಡೆದು ಹದಿನಾಲ್ಕು ತಿಂಗಳುಗಳಾಗಿವೆ. ಆದರೆ, ಪುಸ್ತಕಗಳು ಮಾತ್ರ ಸಾಹಿತಿಗಳ, ಸಾಹಿತ್ಯಾಭಿಮಾನಿಗಳ ಕೈ ಸೇರಿಲ್ಲ. ಪುಸ್ತಕ ಕೇಳಲು ಹೋದವರಿಗೆ, ಇಂದು, ನಾಳೆ ಎಂದು ಕಳುಹಿಸುವ ಕೆಲಸ ನಡೆದುಕೊಂಡೇ ಬಂದಿದೆ.

ಕೆಲ ಪುಸ್ತಕಗಳ ಸಂಪಾದಕರು ನಿಗದಿತ ಸಮಯದಲ್ಲಿ ಲೇಖನಗಳನ್ನು ಸಂಗ್ರಹಿಸಿ ನೀಡದಿರುವುದು, ಅವುಗಳ ಪ್ರೂಫ್‌ ತಿದ್ದಲು ನೀಡಿದವರು ಕಳೆದೇ ಹೋಗಿದೆ ಎಂದು ಹೇಳಿದ್ದರಿಂದ ಪುಸ್ತಕಗಳ ಪ್ರಕಟಣೆ ವಿಳಂಬವಾಗಿದೆ. ಒಗ್ಗೂಡಿಸಿಕೊಂಡು ಕೆಲಸ ಮಾಡದೇ ಕೆಲವರಷ್ಟೇ ಮಾಡುತ್ತಿರುವುದೂ ವಿಳಂಬಕ್ಕೆ ಕಾರಣ ಎನ್ನುವ ಮಾತುಗಳು ಕಸಾಪ ಪಡಸಾಲೆಯಲ್ಲಿ ಕೇಳಿ ಬರುತ್ತವೆ.

ಈ ಬಾರಿ ಸಮ್ಮೇಳನದಲ್ಲಿ 10 ಪುಸ್ತಕಗಳ ಘೋಷಣೆಯಾಗಿದೆ. ಅದರಲ್ಲಿ ಅರ್ಧದಷ್ಟು ಪುಸ್ತಕಗಳು ಸಿದ್ಧವಾಗಿವೆ. ಉಳಿದ ಪುಸ್ತಕಗಳು ಇನ್ನಷ್ಟೇ ಸಿದ್ಧವಾಗಬೇಕಿದೆ. ಸಮ್ಮೇಳನದ ದಿನ ಬಿಡುಗಡೆಗಾಗಿ ಐದು ಪ್ರತಿಗಳಿಗೆ ಪುಸ್ತಕಗಳು ಸೀಮಿತವಾಗದೇ ಓದುಗರನ್ನೂ ತಲುಪುವಂತಾಗಲಿ ಎಂಬುದು ಸಾಹಿತ್ಯ ಪ್ರೇಮಿಗಳ ಆಶಯವಾಗಿದೆ.

ಹಿಂದಿನ ಸಮ್ಮೇಳನದ ಪುಸ್ತಕಗಳು ಇತ್ತೀಚೆಗೆ ‍ಪ್ರಿಂಟ್‌ಗೆ ಹೋಗಿವೆ. ಜೂನ್ 25ರ ವೇಳೆಗೆ ಪ್ರಿಂಟ್‌ ಆಗಿ ಬರಲಿವೆ
ಶಿವಾನಂದ ಶೆಲ್ಲಿಕೇರಿ, ಅಧ್ಯಕ್ಷ ಜಿಲ್ಲಾ ಘಟಕ ಕಸಾಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT