ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್, ಪ್ರವಾಹ: ನೆಲಕಚ್ಚಿದ ಬಾಗಲಕೋಟೆ ಪ್ರವಾಸೋದ್ಯಮ

ಪ್ರವಾಸಿ ತಾಣಗಳತ್ತ ತಲೆ ಹಾಕದ ಜನರು: ವ್ಯಾಪಾರ–ವಹಿವಾಟು ಸ್ತಬ್ಧ
Last Updated 7 ಆಗಸ್ಟ್ 2021, 8:15 IST
ಅಕ್ಷರ ಗಾತ್ರ

ಬಾಗಲಕೋಟೆ: ಚಾಲುಕ್ಯರ ನೆಲೆ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಬಸವಣ್ಣನ ಐಕ್ಯಸ್ಥಳ ಕೂಡಲಸಂಗಮದಂತಹ ವಿಶ್ವಮನ್ನಣೆಯ ಪ್ರವಾಸಿ ತಾಣಗಳು ಜಿಲ್ಲೆಯಲ್ಲಿವೆ. ಆದರೆ ಕೋವಿಡ್ ಸಂಕಷ್ಟ, ಜೊತೆ ಜೊತೆಗೆ ಸತತ ಮೂರು ವರ್ಷಗಳ ನೆರೆಯ ಕಾರಣ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಕ್ಷರಶಃ ನೆಲಕಚ್ಚಿದೆ.

ಕೋವಿಡ್ ಕಾರಣಕ್ಕೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸತತ 74 ದಿನಗಳ ಮುಚ್ಚಲಾಗಿತ್ತು. ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು. ಈಗ ನಿರ್ಬಂಧ ತೆರವುಗೊಳಿಸಿದ್ದರೂ ಪ್ರವಾಸಿಗರು ಉತ್ಸಾಹ ತೋರುತ್ತಿಲ್ಲ. ಬಾದಾಮಿ, ಪಟ್ಟದಕಲ್ಲು, ಐಹೊಳೆ ವಿಶ್ವದ ಪ್ರವಾಸೋದ್ಯಮ ನಕ್ಷೆಯಲ್ಲಿ ಸ್ಥಾನ ಪಡೆದಿದ್ದರೂ ವಿದೇಶಿಯರು ಈ ನೆಲೆಗಳಿಗೆ ಭೇಟಿ ನೀಡಿ ಎರಡು ವರ್ಷಗಳು ಕಳೆದಿದೆ.

ಪ್ರವಾಸಿಗರನ್ನೇ ನಂಬಿ ಬದುಕುವ ವ್ಯಾಪಾರಿಗಳು, ಪ್ರವಾಸಿ ಮಾರ್ಗದರ್ಶಿಗಳು, ಛಾಯಾಗ್ರಾಹಕರು ಆದಾಯವಿಲ್ಲದೇ ಬದುಕುವುದೇ ಕಷ್ಟವಾಗಿದೆ. ಈ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಈ ವಾರದ ’ನಮ್ಮ ಜನ, ನಮ್ಮ ಧ್ವನಿ‘ ಅಂಕಣದಲ್ಲಿ ಮಾಡಲಾಗಿದೆ.

ಕೋವಿಡ್ ನಿಯಮ ಪಾಲನೆ ಇಲ್ಲ..

ಕೂಡಲಸಂಗಮ : ಕೂಡಲಸಂಗಮದೇವಾಲಯ ಹೊರ ಆವರಣದ ಮಾರಾಟ ಮಳಿಗೆ, ಬೀದಿ ಬಳಿಯ ವ್ಯಾಪಾರಿಗಳು ನಿತ್ಯದ ದುಡಿಮೆಯಿಂದಲೇ ಜೀವನ ಸಾಗಿಸುತ್ತಿದ್ದರು. ಆದರೆ 2019ರ ಪ್ರವಾಹ, 2020ರ ಕೊವಿಡ್ ಅಲೆ, 2021ರ ಪ್ರವಾಹ ಮತ್ತು ಕೊವಿಡ್ ಅಲೆ ಬದುಕಿನ ಅವರ ಬಂಡಿಯನ್ನೇ ಅತಂತ್ರವಾಗಿಸಿದೆ. ಕೆಲವರು ವ್ಯಾಪಾರದಿಂದ ವಿಮುಖರಾದರೆ ಇನ್ನೂ ಕೆಲವರು ವಲಸೆ ಹೋಗಿದ್ದಾರೆ.

ಪ್ರವಾಹ ಹಾಗೂ ಕೋವಿಡ್ ಕಾರಣ ಕಳೆದೊಂದು ವರ್ಷದಲ್ಲಿ ದೇವಾಲಯ 3ರಿಂದ 4 ತಿಂಗಳು ಬಂದ್ ಆಗಿದೆ. ಅನ್‌ಲಾಕ್ ಬಳಿಕ ಆರಂಭವಾದರು ಪ್ರವಾಸಿಗರು ಬರುತ್ತಿಲ್ಲ. ದೇವರ ದರ್ಶನಕ್ಕೆ ಸುತ್ತಮುತ್ತಲಿನ ಗ್ರಾಮದವರೇ ಬರುತ್ತಾರೆ. ಅವರು ವ್ಯಾಪಾರ ಮಾಡುವುದಿಲ್ಲ.ಹೀಗಾಗಿ ಇಲ್ಲಿನ ವ್ಯಾಪಾರಿಗಳು ಉದ್ಯೋಗ ತೊರೆದು ಕೃಷಿ, ಕೂಲಿ ಕೆಲಸದಲ್ಲಿ ತೊಡಗಿದ್ದಾರೆ.

ಪ್ರವಾಸಿಗರನ್ನೇ ನಂಬಿ ಬದುಕುತ್ತಿದ್ದ 35ಕ್ಕೂ ಅಧಿಕ ಛಾಯಾಗ್ರಾಹಕರ ಬದುಕು ಛಿದ್ರಗೊಂಡಿದೆ. ಇಡೀ ದಿನ ದುಡಿದರೂ ನೂರು ರೂಪಾಯಿ ದಾಟುತ್ತಿಲ್ಲ. ಸದ್ಯ ನಾಲ್ಕೈದು ಜನ ಛಾಯಾಗ್ರಾಹಕರು ಇದ್ದು, ಉಳಿದವರು ಬೇರೆ ಕಡೆ ಉದ್ಯೋಗ ಅರಸಿ ಹೊಗಿದ್ದಾರೆ.

ನಿಯಮ ಪಾಲನೆ ಇಲ್ಲ : ಈಗ ದೇವರ ದರ್ಶನಕ್ಕೆ ಬರುವವರಿಗೆ ಕನಿಷ್ಟ ಪಕ್ಷ ಥರ್ಮಲ್ ಸ್ಕ್ಯಾನ್‌ಗೆ ಒಳಪಡಿಸುತ್ತಿಲ್ಲ. ಸ್ಯಾನಿಟೈಸರ್ ಹಾಕುತ್ತಿಲ್ಲ. ಮಾಸ್ಕ್ ಧರಿಸುವಂತೆ ಸೂಚಿಸುವುದಿಲ್ಲ. ನಿತ್ಯ ತಂಡೋಪ ತಂಡವಾಗಿ ಪ್ರವಾಸಿಗರು ದರ್ಶನ ಪಡೆಯುವರು. ದಾಖಲೆಗಳಲ್ಲಿ ಮಾತ್ರ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.ಸಂಗಮೇಶ್ವರ ದೇವಾಲಯದಲ್ಲಿ ಜಿಲ್ಲಾಧಿಕಾರಿ ಆದೇಶ ಧಿಕ್ಕರಿಸಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಪೂಜೆ, ಮಂಗಳಾರತಿ ಕಾರ್ಯದಲ್ಲಿ ತೊಡಗಿದ್ದಾರೆ.

ಕೂಡಲಸಂಗಮದಲ್ಲಿ ಮೂಲ ಸೌಲಭ್ಯಗಳಿಲ್ಲದೇ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ ಕಾರಣ ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡ ಯಾತ್ರಿ ನಿವಾಸ ಇನ್ನೂ ಆರಂಭವಾಗಿಲ್ಲ, ದರ್ಶನಕ್ಕೆ ಬಂದ ಪ್ರವಾಸಿಗರು ಬಸವ ಧರ್ಮ ಪೀಠದ ವಸತಿ ಗೃಹದಲ್ಲಿ ತಂಗುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಮಂಡಳಿ ಆರಂಭಿಸಿದ ದಾಸೋಹ ಸೇವೆ ಆರಂಭವಾಗುತ್ತಿಲ್ಲ. ಸ್ವಚ್ಚತೆ ಕೊರತೆ, ಸಮಪರ್ಕ ಶೌಚಾಲಯ ಇಲ್ಲದೇ ಪ್ರವಾಸಿಗರು ತೊಂದರೆ ಅನುಭವಿಸುತ್ತಾರೆ.

ಬೆರಳೆಣಿಕೆಯಷ್ಟು ಪ್ರವಾಸಿಗರು ಬರುತ್ತಿದ್ದಾರೆ

ಅಮೀನಗಡ: ಸಮೀಪದ ಐಹೊಳೆ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದೆ. ದಿನಕ್ಕೆ 20 ರಿಂದ 30 ಜನ ಬಂದರೆ ಅದೇ ಹೆಚ್ಚು. ಶನಿವಾರ ಮತ್ತು ಭಾನುವಾರ ಸ್ವಲ್ಪ ಮಟ್ಟಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.

ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಕೋವಿಡ್ ನಿಯಮ ಪಾಲನೆ ಮಾಡುತ್ತಿದ್ದು, ಪ್ರವಾಸಿಗರಿಗೆ ಉಷ್ಣತೆ ತಪಾಸಣೆ ಮತ್ತು ಮಾಸ್ಕ್ ಕಡ್ಡಾಯಗೊಳಿಸಿದೆ. ಐಹೊಳೆಯ ದುರ್ಗಾ ದೇವಾಲಯ ಪ್ರವೇಶಿಸುತ್ತಿದ್ದಂತೆಯೇ ಅಲ್ಲಿನ ಭದ್ರತಾ ಸಿಬ್ಬಂದಿ ಪ್ರವಾಸಿಗರ ಕೈಗೆ ಸಾನಿಟೈಸರ್ ಹಾಕುತ್ತಾರೆ. ಮಾಸ್ಕ್ ಇದ್ದವರಿಗೆ ಮಾತ್ರ ಒಳಗೆ ಪ್ರವೇಶ.

’ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆ ಆಗಿರುವುದರಿಂದ ವ್ಯಾಪಾರವಿಲ್ಲದೆ ಪರದಾಡುವಂತಾಗಿದೆ. ಪ್ರವಾಸಿಗರ ಬಂದರೆ ಮಾತ್ರ ನಮಗೆ ವ್ಯಾಪಾರ. ಇಲ್ದಿದ್ರೆ ಜೀವನ ತುಂಬಾ ಕಷ್ಟ‘ ಎಂದು ಐಹೊಳೆಯ ಸೋಡಾ ವ್ಯಾಪಾರಿ ಶಿವಪ್ರಕಾಶ ಅಳಲು ತೋಡಿಕೊಂಡರು.

’ಕಳೆದ ಎರಡು ವರ್ಷದಿಂದ ಹೋಟೆಲ್ ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗದ ಸ್ಥಿತಿ ಎದುರಿಸುತ್ತಿದ್ದೇವೆ. ಅದರೂ ಹೊಟೇಲ್ ಶುಚಿತ್ವ ಕಾಪಾಡಿದ್ದೇವೆ‘ ಎಂದು ಮಯೂರ ಹೊಟೇಲ್‌ನ ವ್ಯವಸ್ಥಾಪಕ ಮಂಜುನಾಥ ತಿಳಿಸಿದರು.

’ಮೊದಲು ನಿತ್ಯ ನೂರಾರು ಪ್ರವಾಸಿಗರು ಬರುತ್ತಿದ್ದರು. ಈಗ ಬೆರಳೆಣಿಕೆಯಷ್ಟು ಬರುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಅತೀ ಕಡಿಮೆಯಾಗಿದೆ‘ ಎಂದು ಎಎಸ್‌ಐನ ಕಿರಿಯ ಸಂರಕ್ಷಣಾ ಅಧಿಕಾರಿ ಬಿ.ಡಿ.ನಾಯ್ಕರ್ ಹೇಳಿದರು .

ಪ್ರವಾಸಿ ಮಾರ್ಗದರ್ಶಿ, ವ್ಯಾಪಾರಿಗಳ ಪರದಾಟ

ಬಾದಾಮಿ : ಲಾಕ್‌ಡೌನ್ ತೆರವು ಮಾಡಿದ ಆರಂಭದ ದಿನಗಳಲ್ಲಿ ಇಲ್ಲಿನ ಪುರಾತತ್ವ ಸ್ಮಾರಕಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಆಗಸ್ಟ್ ತಿಂಗಳಿನಿಂದ ಸ್ವಲ್ಪ ಹೆಚ್ಚಾಗತೊಡಗಿದೆ. ಈಗ ಮತ್ತೆ ಮೂರನೇ ಅಲೆ ಭೀತಿ ಎದುರಾಗಿದೆ.

ಬಾದಾಮಿ ಗುಹಾಂತರ ದೇವಾಲಯ ಮತ್ತು ಪಟ್ಟದಕಲ್ಲು ಸ್ಮಾರಕಗಳ ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆಯನ್ನು ಭಾರತೀಯ ಪುರಾತತ್ವ ಇಲಾಖೆ ಮಾಡಿದೆ.

ನಾಲ್ಕು ವರ್ಷಗಳಿಂದ ಮ್ಯೂಸಿಯಂ ರಸ್ತೆ ಗುಂಡಿ ಬಿದ್ದು ಸಂಪೂರ್ಣ ಹಾಳಾಗಿದೆ. ಅಗಸ್ತ್ಯತೀರ್ಥ ಹೊಂಡ, ಭೂತನಾಥ ದೇವಾಲಯ, ಕಪ್ಪೆ ಅರಭಟ್ಟನ ತ್ರಿಪದಿ ಶಾಸನದ ಉತ್ತರದ ಬೆಟ್ಟದ ಬಾವನ್ ಬಂಡೆ ಕೋಟೆಯ ಮೇಲಿರುವ ವಾತಾಪಿ, ವಿಷ್ಣು ದೇವಾಲಯಕ್ಕೆ ಇದೇ ಮಾರ್ಗದಿಂದ ಹೋಗಬೇಕಿದೆ. ಪ್ರವಾಸಿಗರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ರಸ್ತೆ ನಿರ್ಮಾಣ ಮಾಡುವಂತೆ ಶಾಸಕ ಸಿದ್ದರಾಮಯ್ಯ ಎರಡು ವರ್ಷಗಳ ಹಿಂದೆ ಹೇಳಿದರೂ ಅಧಿಕಾರಿಗಳು ಸೊಪ್ಪು ಹಾಕಿಲ್ಲ ಎಂದು ನಿವಾಸಿ ರಾಜು ಬೋಪರಡೆಕರ ಹೇಳುವರು.

‘ಮೇಣಬಸದಿ ರಸ್ತೆಯಲ್ಲಿ ಜಲ್ಲಿಕಲ್ಲು, ಮರಳು, ಕಲ್ಲು, ಮುಳ್ಳು, ಮರಳಿನಚೀಲ ಮತ್ತು ಇಟ್ಟಂಗಿ ಇಟ್ಟಿದ್ದಾರೆ. ಮ್ಯೂಸಿಯಂ ರಸ್ತೆ ಗುಂಡಿಗಳಾಗಿವೆ ವಾಹನಗಳು ಹೋಗಲು ರಸ್ತೆ ಇಲ್ಲದೇ ತೊಂದರೆಯಾಗಿದೆ‘ ಎಂದು ಸುರಪುರದ ಪ್ರವಾಸಿ ಪ್ರಭುಗೌಡ ಮಾಲಿಪಾಟೀಲ ಹೇಳಿದರು.

ಪ್ರವಾಸಿ ತಾಣಗಳು ಬಂದ್ ಆಗಿ ಇಲ್ಲಿನ ಗೈಡ್‌ಗಳು ಬದುಕು ಕಟ್ಟಿಕೊಳ್ಳಲು ಬೇರೆ ಉದ್ಯೋಗ ಮಾಡುತ್ತಿದ್ದಾರೆ. ಗೈಡ್‌ಗಳ ಸಂಘದ ಅಧ್ಯಕ್ಷ ರಾಜು ಕಲ್ಮಠ ಊದುಬತ್ತಿ ತಯಾರು ಮಾಡಿದರೆ, ಪಂಚಯ್ಯ ನಿಡೋಣಿ ಬೇಸಾಯ ಮಾಡುತ್ತಿದ್ದಾರೆ.

‘ಪ್ರವಾಸಿ ಮಾರ್ಗದರ್ಶಿಗಳಿಗೆ ₹5 ಸಾವಿರ ಪರಿಹಾರ ಕೊಡುವುದಾಗಿ ಹಿಂದಿನ ಸಚಿವ ಸಿ.ಪಿ.ಯೋಗೇಶ್ವರ ಹೇಳಿದ್ದರು. ಇರುವರೆಗೂ ಪರಿಹಾರ ಹಣ ಜಮೆ ಆಗಿಲ್ಲ ‘ ಎಂದು ಶಿವಾನಂದ ಹೂಗಾರ ಹೇಳಿದರು.

‘ಲಾಕ್‌ಡೌನ್ ತೆರವಾದ ನಂತರವೂ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಮನೆ ನಡೆಸುವುದೇ ಕಷ್ಟವಾಗಿದೆ. ನಮಗೆ ಸರ್ಕಾರ ಯಾವುದೇ ಪರಿಹಾರ ಕೊಟ್ಟಿಲ್ಲ‘ ಎಂದು ಪಟ್ಟದಕಲ್ಲಿನ ತಂಪು ಪಾನೀಯ ಮಾರಾಟಗಾರ ಸಿದ್ದಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT