ಗುರುವಾರ , ಅಕ್ಟೋಬರ್ 6, 2022
26 °C
ಅಪೂರ್ಣ ಹಾದಿಯಲ್ಲೇ ರೈಲ್ವೆಯ ವಾಣಿಜ್ಯ ಯಾದಿ!

PV Web Exclusive: ಬಾಗಲಕೋಟೆ–ಕುಡಚಿ ರೈಲು ಮಾರ್ಗ- 30ವರ್ಷ, 30 ಕಿ.ಮೀ ಪೂರ್ಣ!

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಿಂದ ಪುಣೆಯ ಸಾಸವಾಡ ರಸ್ತೆಗೆ ಜುಲೈ 25ರಂದು ದಾಲ್ಮಿಯಾ ಸಿಮೆಂಟ್ಸ್ ಕಂಪನಿಗೆ ಸೇರಿದ 1,365 ಟನ್ ಸಿಮೆಂಟ್ ಚೀಲಗಳನ್ನು ಗೂಡ್ಸ್ ರೈಲು ಹೊತ್ತು ಸಾಗಿತು. ಇದರಿಂದ ₹ 9.65 ಲಕ್ಷ ಆದಾಯ ನೈರುತ್ಯ ರೈಲ್ವೆ ಜೇಬು ಸೇರಿತು. ಬಾಗಲಕೋಟೆ–ಕುಡಚಿ ನಡುವೆ ಕಳೆದ ಮೂರು ವರ್ಷಗಳಿಂದ ಹಾಳು ಬಿದ್ದಿದ್ದ ಹೀಗೊಂದು ಅಪೂರ್ಣ ರೈಲು ಮಾರ್ಗಕ್ಕೆ ಜೀವ ನೀಡಿದ ರೈಲ್ವೆ, ಅಲ್ಲಿ ವಾಣಿಜ್ಯ ಚಟುವಟಿಕೆ ಆರಂಭಿಸಿತು.

ಕೃಷ್ಣಾ ತೀರ ಬಾಗಲಕೋಟೆಯಿಂದ ಬೆಳಗಾವಿ ಜಿಲ್ಲೆ ಕುಡಚಿ ಮಾರ್ಗವಾಗಿ ಗೋವಾ ಬಂದರು ಹಾಗೂ ಮುಂಬೈಗೆ ನೇರ ರೈಲು ಮಾರ್ಗದ ಪ್ರಸ್ತಾವಕ್ಕೆ ಜೀವ ದೊರೆತು ಬರೋಬ್ಬರಿ ಮೂರು ದಶಕ (1990) ಕಳೆದಿವೆ. ಅಚ್ಚರಿಯೆಂದರೆ ಈ 30 ವರ್ಷಗಳಲ್ಲಿ 30 ಕಿ.ಮೀ ಮಾತ್ರ (ಬಾಗಲಕೋಟೆ–ಖಜ್ಜಿಡೋಣಿ) ರೈಲು ಮಾರ್ಗ ನಿರ್ಮಾಣಗೊಂಡಿದೆ. ಇನ್ನೂ 112 ಕಿ.ಮೀ ಮಾರ್ಗ ಪೂರ್ಣಗೊಂಡರೆ ಮಾತ್ರ ಕುಡಚಿವರೆಗೆ ರೈಲು ತಲುಪಲಿದೆ.

ಬಾಗಲಕೋಟೆ–ಖಜ್ಜಿಡೋಣಿ ರೈಲು ಮಾರ್ಗ ಉದ್ಘಾಟನೆಗೊಂಡು ಮೂರು ವರ್ಷ ಕಳೆದಿತ್ತು. ಮುಂದಿನ ಹಾದಿ ಸಾಗದೇ ರೈಲುಗಳ ಓಡಾಟವೂ ಇರಲಿಲ್ಲ. ಈ ಮಾರ್ಗದ 12 ನಿಲ್ದಾಣಗಳು ಬಹುತೇಕ ಹಾಳು ಬಿದ್ದಿದ್ದವು. ಅವುಗಳಿಗೆ ಮರುಜೀವ ನೀಡಿ ಈಗ ಲಭ್ಯವಿರುವ ಮಾರ್ಗವನ್ನು ಬಳಸಿಕೊಳ್ಳಲು ನೈರುತ್ಯ ರೈಲ್ವೆ ಮುಂದಾಗಿದೆ.

ಈ ವಾಣಿಜ್ಯ ಚಟುವಟಿಕೆ ನಿರಂತರವಾಗಿ ಮುಂದುವರೆಸಲು ನೈರುತ್ಯ ರೈಲ್ವೆಯ ವ್ಯವಹಾರ ಅಭಿವೃದ್ಧಿ ಘಟಕವು ಖಜ್ಜಿಡೋಣಿ ಬಳಿ ಸರಕು ಸಂಗ್ರಹ, ಸಾಗಣೆಗೆ ನೆರವಾಗಲು ಗೂಡ್ಸ್‌ಶೆಡ್ ನಿರ್ಮಿಸಿದೆ. ಗೂಡ್ಸ್ ರೈಲುಗಳ ನಿರ್ವಹಣೆಗಾಗಿಯೇ ಹೊಸ ಲೈನ್-ರೋಡ್ ನಿರ್ಮಿಸಿದೆ. ಅದಕ್ಕೆ ಪೂರಕವಾಗಿ ಹೊಸ ಪ್ಲಾಟ್‌ಫಾರ್ಮ್, ಕೂಡು ರಸ್ತೆಗಳ ಸಿದ್ಧಪಡಿಸಿದೆ. ಹಳಿ ಉನ್ನತೀಕರಣ, ನವೀಕರಣ ಕಾರ್ಯ ಕೈಗೊಂಡಿದೆ.

ಇಲ್ಲಿನ ಕೈಗಾರಿಕೆಗಳಿಗೆ ಉತ್ಪಾದನೆಗಾಗಿ ಕಲ್ಲಿದ್ದಲು, ಕ್ಲಿಂಕರ್ ಮೊದಲಾದ ಕಚ್ಚಾವಸ್ತುಗಳ ಆಮದು, ಇಲ್ಲಿಂದ ಸಿಮೆಂಟ್, ಸುಣ್ಣದಕಲ್ಲು, ವ್ಯವಸಾಯೋತ್ಪನ್ನಗಳನ್ನು ಬೇರೆಡೆಗೆ ಸಾಗಣೆಗೆ ನೆರವಾಗಲು ಈ ಭಾಗದ ವರ್ತಕರು, ರೈತರೊಂದಿಗೆ ರೈಲ್ವೆ ಸಂವಾದ ಕೂಡ ಆರಂಭಿಸಿದೆ.

ಕುಂಟುತ್ತಾ ಸಾಗಿದೆ ರೈಲು ಹಾದಿ..

ಈ ರೈಲು ಮಾರ್ಗ ಬಾಗಲಕೋಟೆ, ಮುಧೋಳ, ಜಮಖಂಡಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ಹಾಗೂ ರಾಯಭಾಗ ತಾಲ್ಲೂಕುಗಳಲ್ಲಿ ಹಾದು ಹೋಗುತ್ತದೆ. ಬಾಗಲಕೋಟೆಯಿಂದ ಖಜ್ಜಿಡೋಣಿವರೆಗೆ 632 ಎಕರೆ ಪೈಕಿ 615 ಎಕರೆ ಭೂಮಿ ಸ್ವಾಧೀನಗೊಂಡಿದೆ. ಖಜ್ಜಿಡೋಣಿಯಿಂದ ರಬಕವಿ–ಬನಹಟ್ಟಿ ತಾಲ್ಲೂಕಿನ ತೇರದಾಳವರೆಗೆ 1349 ಎಕರೆ ಪೈಕಿ 454 ಎಕರೆ ಮಾತ್ರ ಸ್ವಾಧೀನಗೊಂಡಿದೆ. ತೇರದಾಳದಿಂದ ಕುಡಚಿವರೆಗೆ 467 ಎಕರೆ ಪೈಕಿ 236 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳವುದು ಬಾಕಿ ಇದೆ.

’ಯೋಜನೆ ಅನುಷ್ಠಾನಕ್ಕೆ ರೈಲ್ವೆ ಆರಂಭದಲ್ಲಿ ಉತ್ಸಾಹ ತೋರಿರಲಿಲ್ಲ. 2013ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೊಂಡು, ಹೆಚ್ಚಿನ ಪರಿಹಾರ ಕೋರಿ ರೈತರು ನ್ಯಾಯಾಲಯದ ಬಾಗಿಲು ತಟ್ಟತೊಡಗಿದ ಪರಿಣಾಮ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಯಿತು‘ ಎಂಬುದು ಭೂಸ್ವಾಧೀನ ಅಧಿಕಾರಿಗಳ ವಿವರಣೆ. 

’ಬಾಗಲಕೋಟೆ ಉಪವಿಭಾಗದ ವ್ಯಾಪ್ತಿಯಲ್ಲಿ ಬಹುತೇಕ ಭೂಮಿ ಸ್ವಾಧೀನಪಡಿಸಿಕೊಂಡು ಈಗಾಗಲೇ ರೈಲ್ವೆಗೆ ಹಸ್ತಾಂತರಿಸಲಾಗಿದೆ. ಅಲ್ಪ–ಸ್ವಲ್ಪ ಬಾಕಿ ಉಳಿದಿದೆ. ಈಗ ಹಸ್ತಾಂತರಗೊಂಡ ಜಾಗದಲ್ಲಿ ಅವರು (ರೈಲ್ವೆ) ಕಾಮಗಾರಿ ಆರಂಭಿಸಲಿ‘ ಎಂದು ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಹೇಳುತ್ತಾರೆ. ಜಮಖಂಡಿ ಉಪವಿಭಾಗದ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲಳ್ಳಿ ಅವರ ಪ್ರತಿಕ್ರಿಯೆಗೆ ’ಪ್ರಜಾವಾಣಿ‘ ಪ್ರಯತ್ನಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

’ಜಿಲ್ಲಾಡಳಿತದಿಂದ ಸ್ವಾಧೀನಗೊಂಡ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಮಾತ್ರ ಕಾಮಗಾರಿ ಆರಂಭಿಸಲು ಸಾಧ್ಯ‘ ಎಂಬುದು ರೈಲ್ವೆ ಇಲಾಖೆ ಮೂಲಗಳ ಅಭಿಮತ. 

’ಯೋಜನೆ ಕಾರ್ಯಗತಗೊಳ್ಳದಿರಲು ರಾಜ್ಯ ಸರ್ಕಾರವೇ ಕಾರಣ. ಭೂಸ್ವಾಧೀನದ ತೊಂದರೆಯ ನೆಪ ಹೇಳುತ್ತಾ ಸಾಗಿದೆ. ಇದಕ್ಕೆ ಬಾಗಲಕೋಟೆ, ಬೆಳಗಾವಿ ಜಿಲ್ಲಾಡಳಿತಗಳೆರಡೂ ಭಾದ್ಯಸ್ಥವಾಗಿವೆ. ಸರ್ಕಾರ ಇಚ್ಛಾಶಕ್ತಿ ತೋರಿದ್ದರೆ ಈ ವೇಳೆಗೆ ಕುಡಚಿವರೆಗೂ ರೈಲುಗಳ ಓಡಾಟ ಕಾಣಬಹುದಿತ್ತು‘ ಎಂದು ಬಾಗಲಕೋಟೆಯ ರೈಲ್ವೆ ಹೋರಾಟಗಾರ ಕುತ್ಬುದ್ದೀನ್ ಖಾಜಿ ಆರೋಪಿಸುತ್ತಾರೆ. ಈ ಆರೋಪ–ಪ್ರತ್ಯಾರೋಪದ ನಡುವೆಯೇ ಯೋಜನೆ ಮಾತ್ರ ಕುಂಟುತ್ತಾ ಸಾಗಿದೆ.

ಶತಮಾನದ ಹಿಂದಿನ ಕನಸು

ಬಳ್ಳಾರಿ ಜಿಲ್ಲೆ ಸಂಡೂರಿನಿಂದ ಕಬ್ಬಿಣದ ಅದಿರನ್ನು ಗೋವಾದ ಬಂದರಿಗೆ ಸಾಗಿಸಲು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ 1894ರಲ್ಲಿ ಮೊದಲ ಬಾರಿಗೆ ಬಾಗಲಕೋಟೆ–ಕುಡಚಿ ನಡುವೆ ರೈಲು ಮಾರ್ಗದ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ 1912 ಹಾಗೂ 1920ರಲ್ಲಿ ಎರಡು ಬಾರಿ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ಕೂಡ ನಡೆದಿತ್ತು. ಕಾರಣಾಂತರದಿಂದ ಆಗ ಯೋಜನೆ ಕಾರ್ಯಗತಗೊಂಡಿರಲಿಲ್ಲ.

1990ರಲ್ಲಿ ಜಮಖಂಡಿಯ ಸಿದ್ದು ನ್ಯಾಮಗೌಡ ಕೇಂದ್ರ ಸಚಿವರಾದಾಗ ಯೋಜನೆ ಮರು ಜೀವ ಪಡೆದಿತ್ತು. 1993ರಲ್ಲಿ ಮೂರನೇ ಬಾರಿಗೆ ಸಮೀಕ್ಷೆ ನಡೆದರೂ ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ನಿರಾಸಕ್ತಿ ತೋರಿತ್ತು. ಆದರೆ ಈ ಭಾಗದ ಜನರ ಹೋರಾಟ–ಒತ್ತಾಸೆಯ ಫಲವಾಗಿ 2007ರಲ್ಲಿ ಮತ್ತೊಮ್ಮೆ ಸಮೀಕ್ಷೆ ಕಾರ್ಯ ನಡೆದಿತ್ತು. ಅಂತಿಮವಾಗಿ 2010ರಲ್ಲಿ ₹986.30 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ ದೊರಕಿತು. ಇದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ 50ರಷ್ಟು ವೆಚ್ಚ ಭರಿಸುವುದು ಹಾಗೂ ರಾಜ್ಯ ಸರ್ಕಾರ ಉಚಿತವಾಗಿ ಭೂಮಿ ಕೊಡುವ ಷರತ್ತು ಒಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು