ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕಟ್ಟಿಹಾಕಿದ ಸಸಾಲಟ್ಟಿ ಗ್ರಾಮಸ್ಥರು

ಸಸಾಲಟ್ಟಿಯಲ್ಲಿ ಹೀಗೊಂದು ಯಶೋಗಾಥೆ: ಅಂಗನವಾಡಿ ಅವ್ವಂದಿರ ಸಾಥ್
Last Updated 25 ಮೇ 2021, 16:46 IST
ಅಕ್ಷರ ಗಾತ್ರ

ತೇರದಾಳ: ಕೋವಿಡ್ ಎರಡನೇ ಅಲೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚು ಹರಡಿದ್ದರ ಪರಿಣಾಮ ಹಲವು ಗ್ರಾಮಗಳು ತತ್ತರಿಸಿವೆ. ಸಮೀಪದ ಸಸಾಲಟ್ಟಿಯಲ್ಲೂ ಕೊರೊನಾ ಹಾಗೂ ಬೇರೆ ಕಾರಣಗಳಿಂದ ಮೃತರ ಸಂಖ್ಯೆ 30 ದಾಟಿದ್ದು ಇಡೀ ಗ್ರಾಮವೇ ನಡುಗಿ ಹೋಗಿತ್ತು.

ಕೋವಿಡ್ ನಿಗ್ರಹಕ್ಕೆ ಗ್ರಾಮ ಪಂಚಾಯ್ತಿ ತನ್ನ ಸಿಬ್ಬಂದಿಯ ನ್ನೊಳಗೊಂಡ ಇಲ್ಲಿನ ಎಂಟು ಆಶಾ ಹಾಗೂ ಎಂಟು ಅಂಗನವಾಡಿ ಕಾರ್ಯಕರ್ತೆಯರ ತಂಡ ರಚಿಸಿತು. ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದೇ ಅನಾವಶ್ಯಕವಾಗಿ ಅಡ್ಡಾಡುವವರಿಗೆ ದಂಡ ವಿಧಿಸಲಾಯಿತು. ಪಡಿತರ ವಿತರಣೆಯಲ್ಲಿ ನೂಕಾಟ ತಡೆಯಲು ಕ್ರಮ ಕೈಗೊಳ್ಳಲಾಯಿತು. ಪರಿಣಾಮ ಗ್ರಾಮದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಗೆ ಶ್ರಮಿಸಲಾಯಿತು.

ಕ್ಷೇತ್ರದ ಹಲವು ಗ್ರಾಮಗಳ ಪರಿಸ್ಥಿತಿಯನ್ನು ಕಂಡ ಕ್ಷೇತ್ರದ ಶಾಸಕ ಸಿದ್ದು ಸವದಿ, ತಹಶೀಲ್ದಾರ್ ಎಸ್.ಬಿ.ಇಂಗಳೆ ಹಾಗೂ ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಾಯಿಲೆಗಳಾದ ಜ್ವರ, ನೆಗಡಿ ಹಾಗೂ ಕೆಮ್ಮು ಇವುಗಳಿಗೆ ಐದು ದಿನಗಳು ಸೇವಿಸುವ ಮಾತ್ರೆಗಳ ಕಿಟ್ ವಿತರಿಸುವ ಕಾರ್ಯಕ್ಕೆ ಮುಂದಾದರು.

ಮೃತರ ಸಂಖ್ಯೆ ಹೆಚ್ಚಿದ್ದರಿಂದ ಸಸಾಲಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಸಭೆ ನಡೆಸಿ, ಮನೆಮನೆಗೆ ತೆರಳಿ ಸಮೀಕ್ಷೆ ಕಾರ್ಯ ನಡೆಸಿ, ಜ್ವರ, ನೆಗಡಿಯಂತಹ ರೋಗಗಳಿದ್ದವರಿಗೆ ಮಾತ್ರೆ ಕಿಟ್ ವಿತರಿಸಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಿದರು. ಇದಲ್ಲದೆ ಐದು ದಿನಗಳ ಕಾಲ ನಿರಂತರವಾಗಿ ಅವರೊಂದಿಗೆ ಫೋನ್ ಸಂಪರ್ಕದಲ್ಲಿದ್ದು ರೋಗ ಉಲ್ಬಣ, ಕಡಿಮೆಯಾಗಿದ್ದನ್ನು ಗಮನಿಸಿ ಗ್ರಾಮ ಪಂಚಾಯ್ತಿಗೆ ವರದಿ ಸಲ್ಲಿಸುವ ಕೆಲಸ ಅವರಿಗೆ ವಹಿಸಲಾಯಿತು.

ಇದಲ್ಲದೆ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಅಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ಹಲವು ಬಾರಿ ಸ್ಯಾನಿಟೈಸರ್ ಸಿಂಪಡಣೆ ಮಾಡಿಸಿದರು. ಚಿಕಿತ್ಸೆ ನೀಡಲು ಇಲ್ಲಿನ ಖಾಸಗಿ ವೈದ್ಯರಿಗೆ ಅನುಮತಿ ನೀಡಿದರು. ಇದರಿಂದ ಗ್ರಾಮದಲ್ಲಿ ಸೋಂಕಿನ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಪರಿಣಾಮವೆಂಬಂತೆ ಖಾಸಗಿ ಹಾಗೂ ಸರ್ಕಾರಿ ಕೋವಿಡ್ ಆರೈಕೆ ಕೇಂದ್ರಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗಿ, ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಮನೆ ಸೇರಿದರು.

ಗ್ರಾಮದಲ್ಲಿ ಮೇ 12ರಿಂದ ಮೇ 24ರವರೆಗೆ 160 ಉಚಿತ ಮಾತ್ರೆಗಳ ಕಿಟ್ ವಿತರಿಸಲಾಗಿದೆ. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡು ಸೇರಿ 819 ಡೋಸ್ ಲಸಿಕೆ ಹಾಕಲಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT