ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ವರ್ಗಾವಣೆ: ತೆರೆಮರೆಯಲ್ಲಿ ಒತ್ತಡ, ಬೆದರಿಕೆ...!

ಬಸವರಾಜ ಹವಾಲ್ದಾರ‌
Published : 11 ಸೆಪ್ಟೆಂಬರ್ 2024, 4:25 IST
Last Updated : 11 ಸೆಪ್ಟೆಂಬರ್ 2024, 4:25 IST
ಫಾಲೋ ಮಾಡಿ
Comments

ಬಾಗಲಕೋಟೆ: ವರ್ಗಾವಣೆಯಾದ ನಂತರ ಹೋಗದೆ ಉಳಿಯುವವರಿಗೆ, ವರ್ಗಾವಣೆಗೊಂಡು ಜಿಲ್ಲೆಗೆ ಬರುವ ಅಧಿಕಾರಿಗಳಿಗೆ ತೆರೆಮರೆಯಲ್ಲಿ ರಾಜಕೀಯ ಶಕ್ತಿ ಒತ್ತಡ ಹಾಕುವ, ತಡೆಯೊಡ್ಡುವ ಕೆಲಸ ಮಾಡುತ್ತಿದೆ. ಪರಿಣಾಮ ಅಧಿಕಾರಿಗಳು ಬಾಗಲಕೋಟೆ ಜಿಲ್ಲೆಗೆ ಎಂದರೆ ಬರಲು ಹೆದರುವಂತಾಗಿದೆ.

ಬಾಗಲಕೋಟೆಯ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ), ನಗರಸಭೆ ಕಚೇರಿಯ ಒಂದೇ ಕೊಠಡಿಯಲ್ಲಿ ಇಬ್ಬರು ಅಧಿಕಾರಿಗಳು ಕುಳಿತುಕೊಂಡು ಕಿತ್ತಾಡಿದ್ದು, ಮಾಸುವ ಮುನ್ನವೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಉಪನಿರ್ದೇಶಕರಾಗಿ ವರ್ಗಾವಣೆಯಾಗಿ ಬಂದಿದ್ದ ಅಧಿಕಾರಿಯೊಬ್ಬರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡದ ಘಟನೆ ನಡೆದಿದೆ.

ಮೈಸೂರು ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಎಂ. ವಿವೇಕಾನಂದ ಅವರಿಗೆ ಹಲವಾರು ತಿಂಗಳುಗಳಿಂದ ಬಾಗಲಕೋಟೆಯಲ್ಲಿ ಖಾಲಿ ಇರುವ ಉಪನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲಾಗಿದೆ. ಸೋಮವಾರ ಅವರು ಹಾಜರಾಗಲು ಬಂದಿದ್ದರು. ಕಚೇರಿಯ ಮುಂದೆ ಸ್ವಾಗತ ಬ್ಯಾನರ್ ಹಾಕಿ ಹಲವು ಶಿಕ್ಷಕರು ಕಾಯ್ದುಕೊಂಡು ನಿಂತಿದ್ದರು. ಜನಪ್ರತಿನಿಧಿಗಳ ಒತ್ತಡದಿಂದಾಗಿ ಅವರಿಗೆ ಒಂದೆರಡು ದಿನ ಕಾಯುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

ಇಳಕಲ್‌ ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿರುವ ಬಿ.ಕೆ. ನಂದನೂರ ಪ್ರಭಾರ ನಿರ್ವಹಿಸುತ್ತಿದ್ದರು. ಈಗ ಕೆಲ ಜನಪ್ರತಿನಿಧಿಗಳು ನಂದನೂರ ಪರವಾಗಿದ್ದರೆ, ಇನ್ನು ಕೆಲವರು ವಿವೇಕಾನಂದ ಅವರು ನಮ್ಮನ್ನು ಸಂಪರ್ಕಿಸದೆ ಬಂದಿದ್ದಾರೆ ಎಂದು ಆಕ್ಷೇಪ ಎತ್ತಿದ್ದಾರೆ ಎಂದು ತಿಳಿದು ಬಂದಿದೆ.

ಡಾ.ಜಯಶ್ರೀ ಎಮ್ಮಿ ಎನ್ನುವವರು ಜಿಲ್ಲಾ ಆರೋಗ್ಯಾಧಿಕಾರಿಯಾಗಿದ್ದರು. ಅವರ ಜಾಗಕ್ಕೆ ಶಾಸಕ ಎಚ್‌.ವೈ. ಮೇಟಿ ಅವರ ಅಳಿಯ ಡಾ.ರಾಜಕುಮಾರ ಯರಗಲ್‌ ಅವರನ್ನು ನೇಮಿಸಲಾಗಿತ್ತು. ಎಮ್ಮಿ ಅವರು ರಜೆ ಇರುವಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ಮಾಹಿತಿ ನೀಡದೇ ಅಧಿಕಾರ ವಹಿಸಿಕೊಂಡಿದ್ದರು. ಕುರ್ಚಿಗಾಗಿ ಇಬ್ಬರೂ ಪರಸ್ಪರ ಬೈ ದಾಡಿಕೊಂಡಿದ್ದು ಸುದ್ದಿಯಾಗಿತ್ತು. ಡಾ.ಜಯಶ್ರೀ ಕೆಎಟಿ ಮೊರೆ ಹೋಗಿ ಮತ್ತೆ ಡಿಎಚ್‌ಒ ಆಗಿ ಮತ್ತೆ ಬಂದಿದ್ದರು.

ಪರಶುರಾಮ ಶಿನ್ನಾಳಕರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿದ್ದರು. ಕೆಲ ಜನಪ್ರತಿನಿಧಿಗಳು ಅವರ ಜಾಗಕ್ಕೆ ಅಶೋಕ ತೇಲಿ ಎನ್ನುವವರನ್ನು ವರ್ಗ ಮಾಡಿಸಿಕೊಂಡು ಬಂದಿದ್ದರು. ಕೆಎಟಿ ಮೊರೆ ಹೋದ ಶಿನ್ನಾಳಕರ ತಡೆಯಾಜ್ಞೆ ತಂದಿದ್ದರು. ಆದರೆ, ಅವರಿಗೆ ಅಧಿಕಾರ ವಹಿಸಿಕೊಳ್ಳದಂತೆ ಕೆಲ ಜನಪ್ರತಿನಿಧಿಗಳು ಒತ್ತಡ ಹಾಕಿದ್ದರು. ಆರೋಗ್ಯ ಕಾರಣ ಹೇಳಿ ಕೆಲ ದಿನ ರಜೆ ಹೋಗಿದ್ದ ಅವರು, ಈಗ ಮತ್ತೆ ಹಾಜರಾಗಿದ್ದಾರೆ.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದ ಶಂಕರಲಿಂಗ ಗೋಗಿ ಅವರನ್ನು ಏಕಾಏಕಿ ಬಿಡುಗಡೆ ಮಾಡಲಾಗಿತ್ತು. ಅವರು ಕೆಎಟಿಗೆ ಹೋಗಿ ತಡೆಯಾಜ್ಞೆ ತಂದಿದ್ದರು. ನಂತರ ಅದೇಗೆ ಇಲ್ಲಿ ಕೆಲಸ ಮಾಡುವಿರಿ ಎಂದು ರಾಜಕೀಯ ನಾಯಕರ ಹಿಂಬಾಲಕರು ಬೆದರಿಸಿದ ಮೇಲೆ ಬೇರೆಡೆ ಹೋಗಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT