ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಯಾರಿಗೆ ನಿಗಮ, ಮಂಡಳಿ ಪಟ್ಟ?

Published 23 ನವೆಂಬರ್ 2023, 4:25 IST
Last Updated 23 ನವೆಂಬರ್ 2023, 4:25 IST
ಅಕ್ಷರ ಗಾತ್ರ

ಬಾಗಲಕೋಟೆ: ನಿಗಮ, ಮಂಡಳಿಗಳ ನೇಮಕದ ಬಗ್ಗೆ ಬೆಂಗಳೂರಿನಲ್ಲಿ ಸಭೆಗಳ ಮೇಲೆ ಸಭೆಗಳು ನಡೆಯುತ್ತಿರುವುದರಿಂದ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಜಿಲ್ಲೆಯ ಆಕಾಂಕ್ಷಿಗಳ ತೆರೆಮರೆ ಯತ್ನವೂ ಜೋರಾಗಿದೆ.

ಜಿಲ್ಲೆಯ ಏಳು ಶಾಸಕ ಸ್ಥಾನಗಳ ಪೈಕಿ ಐವರು ಶಾಸಕರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದಾರೆ. ಇಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೊನೆಯಲ್ಲಿ ಆರ್‌.ಬಿ. ತಿಮ್ಮಾಪುರ ಅವರೊಬ್ಬರೇ ಸಚಿವರಾದರು. ಉಳಿದಂತೆ ನಾಲ್ವರು ಶಾಸಕರಿದ್ದಾರೆ.

ಶಾಸಕರಾದ ಜೆ.ಟಿ. ಪಾಟೀಲ, ಎಚ್‌.ವೈ. ಮೇಟಿ ಹಿರಿಯರಾಗಿದ್ದರೆ, ಶಾಸಕ ವಿಜಯಾನಂದ ಕಾಶಪ್ಪನವರ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

ಮಾಜಿ ಸಚಿವರಾಗಿರುವ ಎಚ್‌.ವೈ. ಮೇಟಿ ಅವರಿಗೆ ಸಚಿವ ಸ್ಥಾನ ಲಭಿಸಲಿಲ್ಲ. ಈಗ ಅವರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಅದೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರು ಯತ್ನ ನಡೆಸುತ್ತಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ ಅವರ ಹೆಸರೂ ಕೇಳಿ ಬರುತ್ತಿವೆ. ಎರಡೂವರೆ ವರ್ಷದ ನಂತರ ಸಂಪುಟದಲ್ಲಿ ಅವಕಾಶ ಸಿಗಲಿದೆಯಾ ಎನ್ನುವ ಲೆಕ್ಕದ ಮೇಲೆ ಇವರು ನಿಗಮ, ಮಂಡಳಿಗೆ ಆಸಕ್ತಿ ತೋರಬಹುದು.

ಮಾಜಿ ಶಾಸಕ, ಈ ಹಿಂದೆ ಹೌಸಿಂಗ್‌ ಬೋರ್ಡ್‌ ಅಧ್ಯಕ್ಷರಾಗಿದ್ದ ಎಸ್‌.ಜಿ. ನಂಜಯ್ಯನಮಠ ಅವರೂ ಆಕಾಂಕ್ಷಿಯಾಗಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿಧಾನಸಭಾ ಚುನಾವಣೆಯಲ್ಲಿ ಸಮನ್ವಯ ಸಾಧಿಸಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಹಾಗಾಗಿ, ಅವರ ಹೆಸರೂ ಕೇಳಿ ಬರುತ್ತಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರನ್ನು ಕರೆ ತರಲಾಗಿತ್ತು. ಅವರೂ ಬಿಟಿಡಿಎ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಬಿ. ಸೌದಾಗರ ಸಹ ಅಲ್ಪಸಂಖ್ಯಾತರ ಕೋಟಾದಲ್ಲಿ ಯತ್ನಿಸುತ್ತಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ನಾಗರಾಜ ಹದ್ಲಿ, ರವೀಂದ್ರ ಕಲಬುರ್ಗಿ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದಾರೆ. ಎಲ್ಲರೂ ತಮ್ಮ ರಾಜಕೀಯ ನಾಯಕರ ಮೂಲಕ ಅಧ್ಯಕ್ಷ ಸ್ಥಾನ ಗಿಟ್ಟಿಸುವ ಯತ್ನ ಮುಂದುವರೆಸಿದ್ದಾರೆ. ಬೆಂಗಳೂರು, ದೆಹಲಿಗೂ ಹೋಗಿ, ಬಂದಿದ್ದಾರೆ.

ಸಚಿವ ಸ್ಥಾನ ಸಿಗದ, ವಿವಿಧ ಕಾರಣಕ್ಕೆ ಅಸಮಾಧಾನಿತರಾಗಿರುವ ಶಾಸಕರಿಗೆ ಒಂದಷ್ಟು ಸ್ಥಾನಗಳನ್ನು ನೀಡಿದರೆ, ಮುಖಂಡರಿಗೆ ಒಂದಷ್ಟು ಸ್ಥಾನ ನೀಡಲು ಉದ್ದೇಶಿಸಲಾಗಿದೆ. ಒಟ್ಟಾರೆ ಎಷ್ಟು ನಿಗಮಗಳಿಗೆ ನೇಮಕ ಮಾಡಲಾಗುತ್ತಿದೆ ಎನ್ನುವುದರ ಮೇಲೆ ಜಿಲ್ಲೆಗೆ ಎಷ್ಟು ಸ್ಥಾನ ಸಿಗಲಿವೆ ಎಂಬುದು ನಿರ್ಧಾರವಾಗಲಿದೆ.

ಪಕ್ಷವನ್ನು ಅಧಿಕಾರಕ್ಕೆ ತರಲು, ಶಾಸಕರ ಆಯ್ಕೆಗೆ ಮುಖಂಡರು, ಕಾರ್ಯಕರ್ತರು ಶ್ರಮಿಸಿದ್ದಾರೆ. ನಿಗಮ, ಮಂಡಳಿಗಳ ಮೂಲಕ ತಮ್ಮ ಗೆಲುವಿಗೆ ದುಡಿದಿರುವ ಮುಖಂಡರಿಗೆ ಅಧಿಕಾರ ಕೊಡುವ ಕೆಲಸವನ್ನು ಶೀಘ್ರವೇ ಮಾಡಬೇಕು ಎನ್ನುವುದು ಮುಖಂಡರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT