ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ: ಭಾವೈಕ್ಯದ ಕೇಂದ್ರ ಯಡಹಳ್ಳಿ ಗೈಬುಸಾಹೇಬ್ ದರ್ಗಾ

ಕೆ.ಎಸ್. ಸೋಮನಕಟ್ಟಿ
Published 12 ಏಪ್ರಿಲ್ 2024, 4:55 IST
Last Updated 12 ಏಪ್ರಿಲ್ 2024, 4:55 IST
ಅಕ್ಷರ ಗಾತ್ರ

ಬೀಳಗಿ: ಈ ನಾಡು ವಿವಿಧತೆಯಲ್ಲಿ ಏಕತೆಗೆ ಹೆಸರುವಾಸಿ. ವಿವಿಧ ಮತ- ಧರ್ಮಗಳನ್ನು ಸೇರಿಸಿಕೊಂಡು ಹಲವು ಪವಾಡಗಳ ಮೂಲಕ ಈ ನಾಡಿನ ಸಾಂಸ್ಕೃತಿಕ ಸಂಪತ್ತನು ಹೆಚ್ಚಿಸುವ ಮಠ ಮಂದಿರಗಳ ಸಾಲಿನಲ್ಲಿ ತಾಲ್ಲೂಕಿನ ಯಡಹಳ್ಳಿ ಹಜರತ್ ಪೀರ್ ಗೈಬುಸಾಬ್ ದರ್ಗಾ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ.

ಇದು ಹಿಂದೂ-ಮುಸ್ಲಿಮರ ಶ್ರದ್ಧಾ ಕೇಂದ್ರವಾಗಿದೆ. ಈ ದರ್ಗಾಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಅನೇಕ ಪವಾಡಗಳ ಧಾರ್ಮಿಕ ಕೇಂದ್ರವಾಗಿರುವ ಈ ದರ್ಗಾ ಮನುಷ್ಯತ್ವದ ಧರ್ಮವನ್ನು ಪ್ರತಿನಿಧಿಸುವ ಭಾವೈಕ್ಯ ತಾಣವಾಗಿದೆ.

ಸುಮಾರು ಒಂಭತ್ತು ಶತಮಾನಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ದರ್ಗಾದ ಗರ್ಭದಲ್ಲಿ ಅನೇಕ ಪವಾಡಗಳು, ದಂತಕಥೆಗಳು ಅಡಗಿಕೊಂಡಿವೆ. ಸೂಫಿ ಸಂತರಾದ ಗೈಬಿ ಸಾಹೇಬರು ಮಾನವ ಧರ್ಮದ ಉದ್ಧಾರಕ್ಕಾಗಿ ದೇಶ ಸಂಚಾರ ಮಾಡುತ್ತ ಯಡಹಳ್ಳಿ ಗ್ರಾಮದ ಕೃಷ್ಣಾತೀರಕ್ಕೆ ಬಂದು ನೆಲೆಸಿದರು. ಅಲ್ಲಿ ಒಂಟಿನವರ ಮನೆತನದ ಒಬ್ಬ ಮುದುಕ ಭೇಟಿಯಾದ. ದಾಹದಿಂದ ಬಳಲುತ್ತಿದ್ದ ಗೈಬುಸಾಹೇಬರು, ಅವನ ಬಳಿಯಿರುವ ತತ್ರಾಣಿಗೆ (ಮಣ್ಣಿನ ಪಾತ್ರೆ) ಯಲ್ಲಿನ ನೀರನ್ನು ಕುಡಿಯಲು ಕೇಳಿದರು. ಮಹಾನ್ ಸಂತನಂತೆ ಕಾಣುವ ಇವರಿಗೆ ತನ್ನ ಎಂಜಲು ನೀರು ಕೊಡುವುದು ಸರಿಯಲ್ಲ ಎಂದು ಭಾವಿಸಿದ ಮುದುಕ ನದಿಯಿಂದ ಬೇರೇ ನೀರು ತರಲು ತೆರಳಿದ. ಮರಳಿ ಆ ಮುದುಕ ನೀರು ತರುವುದರೊಳಗೆ ಸೂಫಿ ಸಂತರು ತಾವು ನಿಂತ ಸ್ಥಳದಲ್ಲಿಯೇ ಕುದುರೆ ಸಮೇತ ನೆಲದಲ್ಲಿ ಹುದುಗಿ ಹೋಗಿ ಕೇವಲ ಕೈ ಮಾತ್ರ ಕಾಣುತ್ತಿರುತ್ತದೆ. ಇದನ್ನು ಕಂಡು ಗಾಬರಿಯಾದ ಮುದುಕ ಗ್ರಾಮದ ದೇಸಾಯಿ ಅವರಿಗೆ ವಿಷಯ ತಿಳಿಸಿದ. ದೇಸಾಯಿ ಅವರು ಗ್ರಾಮಸ್ಥರೊಂದಿಗೆ ಪವಾಡ ನಡೆದ ಸ್ಥಳ ವೀಕ್ಷಿಸಿ ಅಲ್ಲೊಂದು ಗದ್ದುಗೆ ಕಟ್ಟಿಸಿದರು. ಅಲ್ಲದೇ ಗದ್ದುಗೆಯ ಪೂಜೆ ಹಾಗೂ ವಿಧಿ–ವಿಧಾನ ನೆರವೇರಿಸಿಕೊಂಡು ಹೋಗಲು ಗಲಗಲಿ ಗ್ರಾಮದ ಮುಲ್ಲಾ ಮನೆತನದವರಿಗೆ 12 ಎಕರೆ ಜಮೀನು ನೀಡಿದರು.

ಅಂದಿನಿಂದ ದೇಸಾಯಿ ಮನೆತನದ ಗಲೀಪ್ ಹಾಗೂ ನೈವೇದ್ಯ ಮೊದಲು ಅರ್ಪಿಸಿದ ಮೇಲೆಯೇ ದರ್ಗಾದ ಉರುಸು ಆರಂಭವಾಗುತ್ತದೆ. ಸುತ್ತಮುತ್ತಲಿನ ವಿವಿಧ ಗ್ರಾಮಗಳ ಜನರು ಜಾತಿ ಭೇದವಿಲ್ಲದೇ ಎಲ್ಲರೂ ಮನೆಗಳನ್ನು ಸಿಂಗಾರ ಮಾಡುವ ಮೂಲಕ ಹಿಂದೂ-ಮುಸ್ಲಿಂ ಸಮುದಾಯದವರು ಒಟ್ಟಾಗಿ ಉರುಸು ಸಂಭ್ರಮದಲ್ಲಿ ಭಾಗಿಯಾಗುತ್ತಿರುವುದು ಇಲ್ಲಿನ ವೈಶಿಷ್ಟ್ಯ. ಪ್ರತಿವರ್ಷ ಈದ್‌ ಉಲ್‌ ಫಿತ್ರ್‌ ದಿನ ಗಂಧ ಹಾಗೂ ಮರುದಿನ ಉರುಸು ನಡೆಯುತ್ತದೆ. ಪ್ರತಿ ಸಲದಂತೆ ಈ ಬಾರಿಯೂ ಮೂರು ದಿನಗಳ ಕಾಲ ಬಹು ವಿಜೃಂಭಣೆಯಿಂದ ಉರುಸು ನಡೆಯಲಿದೆ.

ಸಾಮಾಜಿಕ ನಾಟಕ ಪ್ರದರ್ಶನ

ಇದರ ನಿಮಿತ್ತ ಅನೇಕ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ. ಏ. 12ರಂದು ಉರುಸಿನ ದಿವಸ ಯಡಹಳ್ಳಿಯ ಮಹರ್ಷಿ ವಾಲ್ಮೀಕಿ ನಾಟ್ಯ ಸಂಘದಿಂದ ‘ಧರ್ಮದ ನುಡಿ ಬೆಂಕಿಯ ಕಿಡಿ’ ಎಂಬ ಸಾಮಾಜಿಕ ನಾಟಕ ನಡೆಯಲಿದೆ ಎಂದು ದರ್ಗಾ ಕಮಿಟಿ ಅಧ್ಯಕ್ಷ ಮೌಲಾಸಾಬ್ ಜಮಾದಾರ ಹಾಗೂ ಕಾರ್ಯದರ್ಶಿ ಬಾಷಾಸಾಹೇಬ್ ಚಿಕ್ಕಗಲಗಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT