ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ತ್ರಿವೇಣಿ ಜಿಲ್ಲಾ ಕಾಂಗ್ರೆಸ್‌ ‘ಹರಕೆ ಕುರಿ’ಯಾದರೆ?

Published 21 ನವೆಂಬರ್ 2023, 4:12 IST
Last Updated 21 ನವೆಂಬರ್ 2023, 4:12 IST
ಅಕ್ಷರ ಗಾತ್ರ

ಬಳ್ಳಾರಿ: ಮಹಾನಗರಪಾಲಿಕೆ ಮೇಯರ್‌ ಆಗಿದ್ದ ಡಿ. ತ್ರಿವೇಣಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯೊಳಗಿರುವ ಗುಂಪುಗಾರಿಕೆಯ ‘ಹರಕೆಯ ಕುರಿ’ ಆದರೆ?

ಕೇವಲ ಆರು ತಿಂಗಳಷ್ಟೇ ಬಳ್ಳಾರಿ ನಗರದ ‘ಪ್ರಥಮ ಪ್ರಜೆ’ಯ ಗೌರವಕ್ಕೆ ಪಾತ್ರರಾಗಿದ್ದ ತ್ರಿವೇಣಿ ಈ ತಿಂಗಳ 4ರಂದು ಮೇಯರ್‌ ಸ್ಥಾನ ತ್ಯಜಿಸಿ ಹೊರ ನಡೆದ ಪರಿ ನೋಡಿದ ಯಾರಿಗಾದರೂ ಈ ಸಂಶಯ ಬರುವುದು ಸಹಜ.

ತ್ರಿವೇಣಿ ರಾಜೀನಾಮೆ ಪತ್ರವನ್ನು ಮಹಾನಗರಪಾಲಿಕೆ ಕಮಿಷನರ್‌ ಕಚೇರಿಯ ಟಪಾಲ್‌ನಲ್ಲಿ ಕೊಟ್ಟು ಹೋಗಿದ್ದರು. ಮೇಯರ್‌ ರಾಜೀನಾಮೆ ಪತ್ರ ಟಪಾಲ್‌ನಲ್ಲಿ ಬಂದಿದ್ದನ್ನು ಕಂಡು ಅನೇಕರು ಅಚ್ಚರಿಪಟ್ಟರು. ಪಕ್ಷದ ಅಧ್ಯಕ್ಷರು ಅಥವಾ ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ರಾಜೀನಾಮೆ ಸಲ್ಲಿಸುವುದು ರೂಢಿ. ಆದರೆ, ಟ‍ಪಾಲ್‌ನಲ್ಲಿ ರಾಜೀನಾಮೆ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಏಕೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

ಬಳ್ಳಾರಿ ನಗರದ ಮೇಯರ್‌ ಸ್ಥಾನಕ್ಕೆ ಅತೀ ಕಿರಿಯ ವಯಸ್ಸಿನ ತ್ರಿವೇಣಿ ಅವರನ್ನು ಆಯ್ಕೆ ಮಾಡುವಾಗ ಅಧಿಕಾರಾವಧಿ ಆರು ತಿಂಗಳು ಮಾತ್ರ ಎಂಬ ಷರತ್ತು ಹಾಕಲಾಗಿತ್ತು. ಆಗ ಉಮಾದೇವಿ ಮತ್ತು ಕುಬೇರ ಪ್ರಬಲ ಆಕಾಂಕ್ಷಿಗಳಾಗಿದ್ದರು. ಅವರನ್ನು ಸಮಾಧಾನಪಡಿಸಲು ತ್ರಿವೇಣಿ ಅವರಿಗೆ ಆರು ತಿಂಗಳ ಅವಧಿ ನಿಗದಿಪಡಿಸಲಾಗಿತ್ತು.

‘ಆರು ತಿಂಗಳ ಅವಧಿ ಮುಗಿದ ಬಳಿಕ ತ್ರಿವೇಣಿ ಅವರನ್ನು ಮೇಯರ್‌ ಸ್ಥಾನದಿಂದ ಕದಲಿಸಲು ಪಾಲಿಕೆಯ ಬಹಳಷ್ಟು ಕಾಂಗ್ರೆಸ್‌ ಸದಸ್ಯರಿಗೆ ಆಸಕ್ತಿ ಇರಲಿಲ್ಲ. ಅವರೇ ಮುಂದುವರಿಯಲಿ ಎನ್ನುವ ಅಭಿಪ್ರಾಯ ಅನೇಕರಲ್ಲಿತ್ತು. ಕೆಲವರು ಮಾತ್ರ ರಾಜೀನಾಮೆ ನೀಡಬೇಕೆಂದು ತೆರೆಮರೆಯಲ್ಲಿ ಒತ್ತಡ ಹಾಕುತ್ತಿದ್ದರು. ಈ ಒತ್ತಡದ ಹಿಂದೆ ಪ್ರಭಾವಿ ನಾಯಕರು ಕೆಲಸ ಮಾಡಿದ್ದಾರೆ. ಇದರಿಂದ ಬೇಸತ್ತು ಮೇಯರ್‌ ಟಪಾಲ್‌ನಲ್ಲಿ ರಾಜೀನಾಮೆ ಕೊಟ್ಟು ಹೋಗಿದ್ದಾರೆ’ ಎಂದು ಪಕ್ಷದೊಳಗೆ ಹೇಳಲಾಗುತ್ತಿದೆ. 

‘ಆರು ತಿಂಗಳಲ್ಲಿ ತ್ರಿವೇಣಿ ಏನಾದರೂ ಕೆಲಸ ಮಾಡಲು ಸಾಧ್ಯವಾಯಿತೇ?’ ಎಂದು ಯಾರಾದರೂ ಕೇಳಿದರೆ, ಉತ್ತರ ಕೊಡುವುದು ಕಷ್ಟ. ಕೆಲಸ ಮಾಡುವುದು ಹೋಗಲಿ, ಪಾಲಿಕೆ ಸಾಮಾನ್ಯ ಸಭೆಯಲ್ಲೂ ಅವರು ಒಂದೇ ಒಂದು ಮಾತು ಆಡಲಿಲ್ಲ. ಇವರ ಹಿಂದಿನವರ ಬಗ್ಗೆ ಪ್ರಸ್ತಾಪಿಸದಿರುವುದೇ ಒಳ್ಳೆಯದು.

‘ಮೇಯರ್‌ ಹುದ್ದೆಗೇರಿದವರು ಆರು ತಿಂಗಳು, ವರ್ಷದಲ್ಲಿ ಏನು ಮಾಡದಿದ್ದರೂ ಪರವಾಗಿಲ್ಲ; ಮೇಯರ್‌ ಅಧಿಕಾರ ವ್ಯಾಪ್ತಿ, ಮುನಿಸಿಪಲ್‌ ಕಾಯ್ದೆಗಳನ್ನು ಅರ್ಥಮಾಡಿಕೊಂಡರೆ ಸಾಕಿತ್ತು. ಅಧಿಕಾರಿಗಳಿಂದ ಕೆಲಸ ಮಾಡಿಸಬಹುದಿತ್ತು’ ಎಂಬುದು ಹೈದ್ರಾಬಾದ್‌–ಕರ್ನಾಟಕ ಹೋರಾಟ ಸಮಿತಿ ಮುಖಂಡ ಟಿ.ಜಿ ವಿಠಲ್‌ ಅಭಿಪ್ರಾಯ.

‘ಪದೇ ಪದೇ ಮೇಯರ್‌ ಬದಲಾವಣೆ ಒಳ್ಳೆ ಸಂಪ್ರದಾಯವಲ್ಲ. ಇದೊಂದು ರೀತಿ ಟೋಪಿ ಬದಲಾವಣೆ ಮಾಡಿದಂತೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ ’ ಎಂಬುದು ಅವರ ವಿಶ್ಲೇಷಣೆ. ಅನೇಕರು ಇದೇ ರೀತಿಯ ನಿಲುವು ಹೊಂದಿದ್ದಾರೆ.

ಅದೇನೆ ಇರಲಿ, ತ್ರಿವೇಣಿ ಅವರ ಎಂಟು ತಿಂಗಳ ಅಧ್ಯಾಯಕ್ಕೆ ತೆರೆಬಿದ್ದಿದೆ. ಹೊಸ ಮೇಯರ್‌ ಚುನಾವಣೆ ನವೆಂಬರ್‌ 28ಕ್ಕೆ ನಿಗದಿಯಾಗಿದೆ. ಬರಲಿರುವ ಮೇಯರ್‌ಗೆ ಉಳಿದಿರುವುದು ಬರೀ ಮೂರ್ನಾಲ್ಕು ತಿಂಗಳು. ಅಧಿಕಾರ ಸ್ವೀಕಾರ, ಸನ್ಮಾನ ಸಮಾರಂಭಗಳಲ್ಲಿ ಈ ಅವಧಿ ಮುಗಿದುಹೋಗಲಿದೆ. ಹೆಸರಿನ ಮುಂದೆ ಮಾಜಿ ಮೇಯರ್‌ ಎಂದು ಬರೆದುಕೊಳ್ಳುವ ಭಾಗ್ಯ ಅವರಿಗೆ ಸಿಗುತ್ತದೆ ಎಂಬುದೇ ಸಮಾಧಾನದ ವಿಷಯ.

7ನೇ ವಾರ್ಡ್‌ ಉಮಾದೇವಿ,  29ನೇ ವಾರ್ಡ್‌  ಶಿಲ್ಪಾ, 31ನೇ ವಾರ್ಡ್‌ ಶ್ವೇತಾ, 25ನೇ ವಾರ್ಡ್‌ನ ಮಿಂಚು ಶ್ರೀನಿವಾಸ್‌ ಮತ್ತು 38ನೇ ವಾರ್ಡ್‌ನ ಕುಬೇರ ಮೇಯರ್‌ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ಮಿಂಚು ಶ್ರೀನಿವಾಸ್‌ ಮತ್ತು ಕುಬೇರ ಸ್ವಂತ ಅಣ್ಣತಮ್ಮಂದಿರು. ಪಕ್ಷೇತರರಾಗಿ ಆಯ್ಕೆಯಾಗಿರುವ ಶ್ರೀನಿವಾಸ್‌ ಕಾಂಗ್ರೆಸ್‌ನಲ್ಲಿ ಅದರಲ್ಲೂ, ಶಾಸಕ ಭರತ್‌ ರೆಡ್ಡಿ ಅವರ ಕ್ಯಾಂಪ್‌ನಲ್ಲಿದ್ದಾರೆ. ಸಹಜವಾಗಿಯೇ ರೆಡ್ಡಿ ಅವರನ್ನು ಬೆಂಬಲಿಸುವ ಸಾಧ್ಯತೆಯಿದೆ. ಆದರೆ, ಪಕ್ಷದ ಉಳಿದ ಮುಖಂಡರು ಒಪ್ಪುವುದು ಕಷ್ಟ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಶ್ವೇತಾ ಅವರನ್ನು ಬೆಂಬಲಿಸುವ ಸಂಭವವಿದೆ. ಈಗಾಗಲೇ ಕೆಲವರ ಜತೆ ಅನೌಪಚಾರಿಕವಾಗಿ ಮಾತನಾಡಿದ್ದಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಬಳ್ಳಾರಿ ಪಾಲಿಕೆಯ ಒಟ್ಟು ಸದಸ್ಯರ ಬಲ 39. ಕಾಂಗ್ರೆಸ್‌ 21, ಬಿಜೆಪಿ 13, ಐವರು ಪಕ್ಷೇತರರು. ಐವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.

ತ್ರಿವೇಣಿ
ತ್ರಿವೇಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT