ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಕ್ಕಲಕೋಟೆ: ಮಳೆ ಕೊರತೆಯಲ್ಲೂ ಕೈ ಹಿಡಿದ ಕಲ್ಲಂಗಡಿ, ಬರದಲ್ಲೂ ಭರಪೂರ ಆದಾಯ

ಚಾಂದ್ ಬಾಷ
Published 24 ಮೇ 2024, 5:45 IST
Last Updated 24 ಮೇ 2024, 5:45 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಕಳೆದ ಬಾರಿ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ರೈತರು ಭೂಮಿಯನ್ನು ಪಾಳು ಬಿಟ್ಟು ಕೈಕಟ್ಟಿ ಕುಳಿತಿದ್ದರು. ಆದರೆ ಇಲ್ಲೊಬ್ಬ ರೈತ ಬರಡು ಭೂಮಿಯಲ್ಲಿ ಕಲ್ಲಂಗಡಿ ಬೆಳೆದು ಕೈ ತುಂಬ ಆದಾಯ ಗಳಿಸಿ ಕೃಷಿಯೂ ಲಾಭದಾಯಕ ಉದ್ಯೋಗ ಎಂದು ಸಾಬೀತು ಪಡಿಸಿದ್ದಾರೆ.

ಸಿರುಗುಪ್ಪ ತಾಲ್ಲೂಕಿನ ಕೂರಿಗನೂರು ಗ್ರಾಮದ ರೈತ ಶಿವಾರೆಡ್ಡಿ ತಮ್ಮ ನಾಲ್ಕು ಎಕರೆಯಲ್ಲಿ ಕಲ್ಲಂಗಡಿ ಕೃಷಿ ಕೈಗೊಂಡು ರೈತರಿಗೆ ಪ್ರೇರಣೆಯಾಗಿದ್ದಾರೆ.

ಜೋಳ ಮತ್ತು ಹತ್ತಿ ಬೆಳೆಯುತ್ತಿದ್ದ ಇವರು ಹಗರಿ ನದಿಯಲ್ಲಿ ಕೊರೆಯಲಾದ ಕೊಳವೆ ಬಾವಿಗಳನ್ನು ಅವಲಂಬಿಸಿ ಮಾರ್ಚ್ 18ರಂದು ಕಲ್ಲಂಗಡಿ ನಾಟಿ ಮಾಡಿದ್ದರು. ಅವರ ಜಮೀನಿನಲ್ಲಿ ಈಗ ಕಲ್ಲಂಗಡಿ ಬೆಳೆ ಹರವಿಕೊಂಡಿದೆ. 65 ದಿನದ ಬೆಳೆಯಾದ ‘ಮೆಲೋಡಿ’ ತಳಿ ಕಲ್ಲಂಗಡಿ ನಾಟಿ ಮಾಡಿ ಹನಿ ನೀರಾವರಿ ಮೂಲಕ ಫಸಲು ಬೆಳೆದಿದ್ದು, ಒಂದೊಂದು ಕಲ್ಲಂಗಡಿ 2–7 ಕೆ.ಜಿ. ವರೆಗೂ ತೂಗುತ್ತವೆ.

‘ಹೊಸದಾಗಿ ಕಲ್ಲಂಗಡಿ ಬೇಸಾಯಕ್ಕೆ ಕಾಲಿಟ್ಟಿದ್ದು, ಅನುಭವದ ಕೊರತೆಯಿಂದ ಕೆಲವು ಖರ್ಚು ಸ್ವಲ್ಪ ಜಾಸ್ತಿಯಾಗಿದೆ. ಎಕರೆಗೆ ₹1ಲಕ್ಷದಂತೆ ಸುಮಾರು ₹4 ಲಕ್ಷ ಖರ್ಚು ತಗುಲಿದ್ದು, ಎಕರೆಗೆ 10 ಟನ್ ಕಲ್ಲಂಗಡಿ ಬರುವ ನಿರೀಕ್ಷೆ ಇದೆ. ಖರ್ಚು ಕಳೆದು ₹1ಲಕ್ಷ ಆದಾಯ ಬರುವ ನಿರೀಕ್ಷೆಯಿದೆ’ ಎಂದು ತಮ್ಮ ಹೊಸ ಪ್ರಯೋಗದ ಅನುಭವವನ್ನು ತೆರೆದಿಡುತ್ತಾರೆ.

‘ಮೊದಲ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಿ ಪುನಃ ನಾಟಿ ಮಾಡಬೇಕು. ಬೇರೆ ಬೆಳೆಗಳಿಗೆ ಹೋಲಿಸಿದರೆ ಅಲ್ಪ ಕಾಲಾವಧಿಯ ಕಲ್ಲಂಗಡಿ ಉತ್ತಮ ಲಾಭ ತಂದು ಕೊಡುತ್ತದೆ’ ಎನ್ನುತ್ತಾರೆ ರೈತ ಶಿವಾರೆಡ್ಡಿ.

ಮಾರುಕಟ್ಟೆಯಲ್ಲಿ ಬೇಡಿಕೆ: ಬಳ್ಳಾರಿ, ಸಿರುಗುಪ್ಪ ಅಲ್ಲದೆ ಸೀಮಾಂಧ್ರದ ಆಲೂರು, ಆದೋನಿಯಿಂದಲೂ ಬೇಡಿಕೆ ಇದೆ. ಪ್ರಾರಂಭದಲ್ಲಿ ಕೆ.ಜಿಗೆ ₹14 ಸಿಗುತ್ತಿತ್ತು, ಈಗ ಧಾರಣೆ ಸ್ವಲ್ಪ ಕುಸಿತ ಕಂಡಿದೆ. ಮೊದಲ ಕಟಾವಿಗೆ ಸುಮಾರು ₹4 ಲಕ್ಷ ಬಂದಿದೆ. ಎರಡನೇ ಬಾರಿಯ ಕಟಾವು ಸಂಪೂರ್ಣ ಲಾಭವೇ ಆಗಿರಲಿದೆ’ ಎಂದು ವ್ಯವಹಾರದ ಮಾತು ಮುಂದಿಟ್ಟರು ಶಿವಾರೆಡ್ಡಿ.

ಶಿವಾರೆಡ್ಡಿ ಅವರು ತೊಟಗಾರಿಕೆ ಅಧಿಕಾರಿಗಳಿಂದ ಕಾಲ ಕಾಲಕ್ಕೆ ಮಾಹಿತಿ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಹೊಸ ತಂತ್ರಜ್ಞಾನಗಳಾದ ಏರುಮಡಿ, ಹನಿ ನೀರಾವರಿ, ಪ್ಲಾಸ್ಟಿಕ್ ಹೊದಿಕೆಗಳ ಬಳಕೆ ಮಾಡಿಕೊಂಡು ಸಮಗ್ರ ಕೀಟ ಹತೋಟಿ ಮಾಡಿ ಕಾಲಕಾಲಕ್ಕೆ ನೀರು ಒದಗಿಸಿದರೆ ಅತ್ಯಂತ ಕಡಿಮೆ ಅವಧಿ ಹಾಗೂ ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ ಪಡೆಯಬಹುದು ಎನ್ನುವುದಕ್ಕೆ ಕಲ್ಲಂಗಡಿ ಬೆಳೆದ ರೈತ ಉತ್ತಮ ಉದಾಹರಣೆಯಾಗಿದ್ದಾರೆ.

ಆಟೊ ಮೂಲಕ ಮಾರುಕಟ್ಟೆಗೆ ಸಾಗಿಸಲು ಸಿದ್ಧವಾಗಿರುವ ಕಲ್ಲಂಗಡಿ ಫಸಲು
ಆಟೊ ಮೂಲಕ ಮಾರುಕಟ್ಟೆಗೆ ಸಾಗಿಸಲು ಸಿದ್ಧವಾಗಿರುವ ಕಲ್ಲಂಗಡಿ ಫಸಲು
ವಾಣಿಜ್ಯ ಬೇಸಾಯ ಕೈಗೊಳ್ಳುವ ರೈತರಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲಾಗುತ್ತದೆ. ರೈತರು ಇಲಾಖೆಯನ್ನು ಸಂಪರ್ಕಿಸಿ ಪ್ರಯೋಜನ ಪಡೆಯಬಹುದು.
-ಖಾದರ್ ಬಾಷ, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ. ಸಿರುಗುಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT