ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಣಗಲ್ಲು| ಎರಡು ಗುಂಪುಗಳ ನಡುವೆ ಮಾರಾಮಾರಿ: ವಿಡಿಯೊ ವೈರಲ್‌

ಜಮೀನು ವಿವಾದ, ಘರ್ಷಣೆ: 11 ಮಂದಿಗೆ ಗಾಯ
Last Updated 4 ನವೆಂಬರ್ 2019, 8:47 IST
ಅಕ್ಷರ ಗಾತ್ರ

ತೋರಣಗಲ್ಲು:ಜಮೀನು ವಿವಾದದ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಎಂ.ಗುಂಡ್ಲಹಳ್ಳಿಯಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆ, ಬೊಲೆರೋವನ್ನು ಬೈಕ್‌ನಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದು, ಬಳಿಕ ನಡೆದ ಮಾರಾಮಾರಿ ದೃಶ್ಯಾವಳಿಗಳು ಸೋಮವಾರ ವೈರಲ್‌ ಆಗಿವೆ.

ಈ ಘಟನೆ ಭಾನುವಾರ ಮಧ್ಯಾಹ್ನ ನಡೆದಿದ್ದು, 26 ಮಂದಿ ವಿರುದ್ಧ ಇಲ್ಲಿನ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಳ್ಳಾರಿಯಿಂದ ಕರೆಸಿದವರು ಎನ್ನಲಾದ ರೌಡಿಗಳು ಮತ್ತು ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ.

2–3 ಬೈಕ್‌ನಲ್ಲಿ ಮುನ್ನುಗ್ಗತ್ತಿರುವವರು ರಸ್ತೆಯಲ್ಲಿ ಓಡುತ್ತಿರುವ ತಮ್ಮವರನ್ನು ‘ಹೊಡೆಯೋ’ ಎಂದು ಉತ್ತೇಜಿಸುತ್ತಾ, ಅಶ್ಲೀಲ ಬೈಗುಳವಾಡುತ್ತಾ ತಮ್ಮ ಮುಂದಿರುವ ಬೊಲೆರೋವನ್ನು ಚೇಸ್‌ ಮಾಡುವ ದೃಶ್ಯ ವಿಡಿಯೊದಲ್ಲಿದೆ. ಕೆಲ ದೂರ ಕ್ರಮಿಸಿದ ಬಳಿಕ ರಸ್ತೆಯ ಬಲಭಾಗದಲ್ಲಿ ಸಂಚರಿಸುತ್ತಿರುವ ಬೊಲೆರೋ, ಅದನ್ನು ದಾಟಿ ಹೋಗುವ ಕಾರು, ಕಾರಿನ ಮುಂದೆ ಸ್ಕಾರ್ಪಿಯೋ ಕಂಡ ಕೂಡಲೇ ಬೈಕ್‌ನಲ್ಲಿದ್ದರಲ್ಲಿ ಆಕ್ರೋಶ ಹೆಚ್ಚಾಗುತ್ತದೆ. ಏಕಕಾಲಕ್ಕೆ ಮೂರು ವಾಹನ ಕಿರಿದಾದ ರಸ್ತೆಯಲ್ಲಿ ಸಂಚರಿಸಲಾಗದೆ ವೇಗ ತಗ್ಗಿದ ಕೂಡಲೇ, ಬೈಕ್‌ ಸವಾರರು ವಾಹನ ನಿಲ್ಲಿಸಿ ಮುಂದೋಡುತ್ತಾರೆ. ಬೊಲೆರೋ ಬಳಿಗೆ ಓಡುವವರ ಕಾಲು, ಚಪ್ಪಲಿ, ಕಿರುಚಾಟದೊಂದಿಗೆ, ವಾಹನದ ಗಾಜುಗಳನ್ನು ಒಡೆಯುವ ಸದ್ದಿನೊಂದಿಗೆ ದೃಶ್ಯ ಮುಂದುವರಿಯುತ್ತದೆ.

ಘಟನೆ ವಿವರ:ಪೊಲೀಸರು ತಿಳಿಸಿರುವ ಪ್ರಕಾರ, ಎಂ.ಗುಂಡ್ಲಹಳ್ಳಿ ಗ್ರಾಮ ಸಮೀಪದ ರಾಮಸಾಗರ ಗ್ರಾಮ ವ್ಯಾಪ್ತಿಯ ವಿವಾದಿತ ಸರ್ವೆ ನ.15ರ 4.93 ಎಕರೆ ಜಮೀನಿಗೆ ಸಂಬಂಧಿಸಿದಂತೆ ಘರ್ಷಣೆ ನಡೆದಿದೆ. ಆ ಜಮೀನಿನಲ್ಲಿ ಮಹೇಂದ್ರ ಎಂಬುವವರು ಹುಲ್ಲಿನ ಬಣವೆಯನ್ನು ಹಾಕಿಕೊಂಡಿದ್ದರು. ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾದ ಆರೋಪವುಳ್ಳ ಕೃಷ್ಣಮೂರ್ತಿ ಮತ್ತು ಗವಿಸಿದ್ಧ ಎಂಬುವವರು ಆ ಜಮೀನನ್ನು ಕಬಳಿಸುವ ಹುನ್ನಾರ ನಡೆಸಿದ್ದರು. ಅದರ ಸಲುವಾಗಿ ಬಳ್ಳಾರಿಯಿಂದ ರೌಡಿಗಳನ್ನು ಕರೆಸಿದ್ದರು. ಆ ರೌಡಿಗಳ ಮೇಲೆ ಮಹೇಂದ್ರ ಕಡೆಯವರು ಹಲ್ಲೆ ನಡೆಸಿದ್ದು ವಿಡಿಯೊದಲ್ಲಿ ದಾಖಲಾಗಿದೆ. ಅದಕ್ಕೆ ಕಾರಣವಾದ ರೌಡಿಗಳ ಕೃತ್ಯದ ಕುರಿತು ತನಿಖೆ ನಡೆಸುತ್ತಿದ್ದೇವೆ. ಎರಡೂ ಗುಂಪಿನ 11 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಪ್ರಕರಣ ಗೋಜಲಾಗಿದ್ದು ತನಿಖೆ ಬಳಿಕವೇ ಸ್ಪಷ್ಟವಾಗಲಿದೆ.

ಮಹೇಂದ್ರ ಅವರು ಗುಂಡ್ಲಹಳ್ಳಿಯ ರಾಮನಗೌಡ, ಪತ್ನಿ ಪಾರ್ವತಿ, ಸೋಮನಗೌಡ, ಶಿವು, ಸೋಮಶೇಖರ, ಕೃಷ್ಣಮೂರ್ತಿ, ಪತ್ನಿ ಜ್ಯೋತಿ , ತೋರಣಗಲ್ಲಿನ ಮಲಕಣ್ಣ, ಬಳ್ಳಾರಿಯ ಅವಂಬಾವಿಯ ಬೊಟ್ಟು ಯರಿಸ್ವಾಮಿ, ಗೋವಿಂದಪ್ಪ, ದೇವಿನಗರದ ಯಲ್ಲಪ್ಪ, ತಮ್ಮಪ್ಪ, ಬೇವಿನಹಾಳ್ ತಮ್ಮಪ್ಪ, ಕೊಕ್ಕರಚೇಡಿನ ನಾಗೇಶ್‌, ಗೋನಾಳು ಬಜ್ಜು ವಿರುದ್ಧ ದೂರು ನೀಡಿದ್ದಾರೆ. ರಾಮನಗೌಡರು ಗ್ರಾಮದ ಮಹೇಂದ್ರ, ರಾಮನಗೌಡ, ಕೂಡ್ಲೂರುಗೌಡ, ಕೀಲಾರಿಗೌಡ, ಶ್ರೀಕೃಷ್ಣ, ಮಧುಸೂದನ್‌, ಗವಿಸಿದ್ಧ, ರಾಘವೇಂದ್ರ, ನಾಗೇಂದ್ರ, ಎರ್ರಿಸ್ವಾಮಿ ಮತ್ತು ಕೃಷ್ಣಮೂರ್ತಿ ವಿರುದ್ಧ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT