ಬಳ್ಳಾರಿ: ನಗರದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ₹32.50 ಲಕ್ಷ ವಂಚನೆಯಾಗಿದ್ದು, ಸೈಬರ್–ಆರ್ಥಿಕ (ಸಿಇಎನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಶೃತಿ ಎಂಬಾಕೆ ವ್ಯಕ್ತಿಯ ವಾಟ್ಸ್‌ಆ್ಯಪ್‌ಗೆ ಲಿಂಕ್‌ವೊಂದನ್ನು ಕಳುಹಿಸಿ, ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ತಿಳಿಸಿಕೊಡುತ್ತೇನೆ ಎಂದು ಹೇಳಿದ್ದರು. ಬಳಿಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಂಬಿಸಿದ್ದರು ಎನ್ನಲಾಗಿದೆ.
ಇದನ್ನು ನಂಬಿದ್ದ ವ್ಯಕ್ತಿ ಶೃತಿ ಕಳುಹಿಸಿದ್ದ ಆ್ಯಪ್‌ವೊಂದನ್ನು ಡೌನ್‌ಲೋಡ್ ಮಾಡಿಕೊಂಡಿದ್ದೂ ಅಲ್ಲದೇ, ಅದರಲ್ಲಿ ಹಣ ಹೂಡಿಕೆ ಮಾಡಲಾರಂಭಿಸಿದ್ದರು. ಹೀಗೇ ₹32,50,000 ಹಣವನ್ನು ವ್ಯಕ್ತಿ ಸಂದಾಯ ಮಾಡಿದ್ದರು ಎನ್ನಲಾಗಿದೆ. ಬಳಿಕ ಇದು ವಂಚನೆಯ ಜಾಲ ಎಂದು ಅರಿತ ವ್ಯಕ್ತಿ ಠಾಣೆಗೆ ದೂರು ದಾಖಲಿಸಿದ್ದಾರೆ.
ಆನ್‌ಲೈನ್ ವಂಚನೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ, ಸುಶಿಕ್ಷಿತರೇ ಇಂಥ ಜಾಲಕ್ಕೆ ಸಿಲುಕುತ್ತಿರುವುದು ಬೇಸರದ ಸಂಗತಿ ಎಂದು ಪೊಲೀಸರು ಹೇಳಿದ್ದಾರೆ.