ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಗಣಿಬಾಧಿತ ನಗರ ಬಳ್ಳಾರಿ: ಸೋಮಶೇಖರರೆಡ್ಡಿ

Last Updated 11 ಮಾರ್ಚ್ 2023, 14:25 IST
ಅಕ್ಷರ ಗಾತ್ರ

ಬಳ್ಳಾರಿ: ಗಣಿಗಾರಿಕೆಯಿಂದ ಬಳ್ಳಾರಿ ನಗರ ಅತೀ ಹೆಚ್ಚು ಬಾಧಿತವಾಗಿದ್ದು, ಯಾವುದೇ ಕಾರಣಕ್ಕೂ ‘ಗಣಿ ಬಾಧಿತ ಪ್ರದೇಶ ಸಮಗ್ರ ಪರಿಸರ ಯೋಜನೆ’ಯಿಂದ (ಸಿಇಪಿಎಂಐಝಡ್‌) ಕೈಬಿಡಬಾರದು ಎಂದು ಬಿಜೆಪಿ ಶಾಸಕ ಜಿ. ಸೋಮಶೇಖರರೆಡ್ಡಿ ಆಗ್ರಹಿಸಿದರು.

‘ಬಳ್ಳಾರಿ ಪತ್ರಕರ್ತರ ಒಕ್ಕೂಟ’ ಶನಿವಾರ ಮರ್ಚೇಡ್‌ ರೆಸಿಡೆನ್ಸಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ‘ಅದಿರು ತುಂಬಿದ ಲಾರಿಗಳು ಹೈದರಾಬಾದ್‌ ಮತ್ತು ಕರ್ನೂಲ್‌ ಮತ್ತಿತರ ಸ್ಥಳಗಳಿಗೆ ಹೋಗಿದ್ದು ಬಳ್ಳಾರಿ ನಗರದ ಮೂಲಕವೇ. ಆಗ ವರ್ತುಲ ರಸ್ತೆ ಇರಲಿಲ್ಲ. ಈಗಲೂ ಇಲ್ಲ. ಗಣಿ ಲಾರಿಗಳು ಇಲ್ಲೇ ಬರುತ್ತಿವೆ. ಇದರಿಂದ ರಸ್ತೆ, ನೀರಿನ ಪೈಪ್‌ಗಳು ಹಾನಿ ಆಗುತ್ತಿವೆ. ಹೀಗಾಗಿ, ಕೆಎಂಇಆರ್‌ಸಿ ಹಣ ಕೇಳುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಸಮಾಜ ಪರಿವರ್ತನಾ ಸಮುದಾಯ (ಎಸ್‌ಪಿಎಸ್‌) ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್. ಹಿರೇಮಠ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸಿಇಪಿಎಂಐಝಡ್‌ ಅಡಿ ಕೈಗೊಂಡಿರುವ ಯೋಜನೆಗಳ ಪುನರ್‌ಪರಿಶೀಲನೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ ನೇಮಿಸಿರುವ ಬಿ. ಸುದರ್ಶನ ರೆಡ್ಡಿ ಅಧ್ಯಕ್ಷತೆಯ ‘ಓವರ್‌ಸೈಟ್‌ ಅಥಾರಿಟಿ‘ಗೆ ಬರೆದಿರುವ ಪತ್ರಗಳಿಗೆ ಪ್ರತಿಕ್ರಿಯಿಸಿದರು.

ಸಿಇಪಿಎಂಐಝಡ್‌ ಯೋಜನೆಗಳ ಮಂಜೂರಾತಿ ಅಧಿಕಾರವನ್ನು ರಾಜ್ಯ ಸಚಿವ ಸಂಪುಟವು ಕರ್ನಾಟಕ ಗಣಿ ಪರಿಸರ ಪುನಶ್ಚೇತನಾ ನಿಗಮಕ್ಕೆ (ಕೆಎಂಇಆರ್‌ಸಿ) ನೀಡಿರುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ನಮಗೆ ಬೇಕಿರುವುದು ಜನರ ಕೆಲಸವಾಗುವುದು ಅಷ್ಟೇ. ಅದನ್ನು ಯಾರು ಮಾಡಿದರೇನು? ಜನರಿಗೆ ಅನಾನುಕೂಲ ಆಗುತ್ತಿದೆ. ಅನುಕೂಲವಾಗಬೇಕು ಎಂದು ಸೋಮಶೇಖರರೆಡ್ಡಿ ಹೇಳಿದರು.

‘ಕೆಎಂಇಆರ್‌ಸಿಯಲ್ಲಿ ಹಣ ಸಾಕಷ್ಟ ಇದೆ. ಗಣಿ ಬಾಧಿತ ಪ್ರದೇಶಗಳಿಗೆ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಹಣ ಬಿಡುಗಡೆ ಆಗುತ್ತಿಲ್ಲ ಎಂಬ ಕೊರಗಿದೆ’ ಎಂದು ಸೋಮಶೇಖರ ರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕೆಎಂಇಆರ್‌ಸಿ ನಿಗಮದಲ್ಲಿ ಈಗ ₹ 24 ಸಾವಿರ ಕೋಟಿಗೂ ಹೆಚ್ಚಿನ ಹಣ ಸಂಗ್ರಹವಾಗಿದೆ.

ಪಿಪಿಪಿ ಮಾದರಿ ಬೇಡ: ಚಾಗನೂರಿನಲ್ಲಿ ವಶಪಡಿಸಿಕೊಂಡಿರುವ ಜಮೀನಿನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಒಡೆತನದಲ್ಲಿ (ಪಿಪಿಪಿ ಮಾದರಿ) ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಮತ್ತು ಆಲದಹಳ್ಳಿಯಲ್ಲಿ 23.25 ಎಕರೆ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಣಸಿನಕಾಯಿ ಮಾರುಕಟ್ಟೆಯನ್ನು ರಾಜ್ಯ ಸರ್ಕಾರವೇ ಖುದ್ದು ನಿರ್ಮಿಸಬೇಕೆಂದು ಅವರು ಒತ್ತಾಯಿಸಿದರು.

ವಿಮಾನ ನಿಲ್ದಾಣವನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಅದು ಕಾರ್ಯಸಾಧುವಾಗಲಿಲ್ಲ. ಪುನಃ ಪಿಪಿಪಿ ಮಾದರಿ ಎಂದರೆ ಯೋಜನೆ ವಿಳಂಬವಾಗಲಿದೆ. ಒಣ ಮೆಣಸಿನಕಾಯಿ ಮಾರುಕಟ್ಟೆಗೆ ಎರಡು ಸಲ ಟೆಂಡರ್‌ ಕರೆದರೂ ಖಾಸಗಿಯವರು ಯಾರೂ ಮುಂದೆ ಬರಲಿಲ್ಲ. ಹೀಗಾಗಿ, ರಾಜ್ಯ ಸರ್ಕಾರವೇ ಯೋಜನೆ ಜಾರಿಗೊಳಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡುವುದಾಗಿ ತಿಳಿಸಿದರು.

ಐದು ವರ್ಷದಲ್ಲಿ ಸಾಕಷ್ಟು ಜನರ ಕೆಲಸ ಮಾಡಿದ್ದೇನೆ. ಮತದಾರರ ಭಾವನೆಗಳಿಗೆ ಸ್ಪಂದಿಸಿದ್ದೇನೆ. ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು, ಕೃಷಿ, ತೋಟಗಾರಿಕೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ಸೋಮಶೇಖರ ರೆಡ್ಡಿ ಸಮಗ್ರವಾದ ಪ್ರೋಗ್ರೆಸ್‌ ಕಾರ್ಡ್‌ ಅನ್ನು ಮಾಧ್ಯಮದವರ ಮುಂದಿಟ್ಟರು.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಪ್ರಸಾದ್‌, ಪಾಲಿಕೆ ಬಿಜೆಪಿ ನಾಯಕ ಇಬ್ರಾಹಿಂ ಬಾಬು, ಕೆಎಂಎಫ್‌ ನಿರ್ದೇಶಕ ವೀರಶೇಖರರೆಡ್ಡಿ ಹಾಗೂ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್‌ ಮತ್ತು ಮಾಜಿ ಸದಸ್ಯ ಬಿಜೆಪಿ ಮುಖಂಡ ಮಲ್ಲನಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT