ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಮನೆ ಬಾಗಿಲಿಗೆ ಬ್ಯಾಂಕ್ ಸೇವೆ

ಅಂಚೆ ಪಾವತಿ ಬ್ಯಾಂಕ್ ಸೇವೆಗೆ ಚಾಲನೆ, ಹಗರಣ ರಹಿತ ಜನಸೇವೆ
Last Updated 1 ಸೆಪ್ಟೆಂಬರ್ 2018, 12:20 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಅಂಚೆ ಕಚೇರಿ ಬ್ಯಾಂಕಿಂಗ್ ಸೇವೆ ಮನೆ ಬಾಗಿಲಿನಲ್ಲೇ ದೊರೆಯುವುದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ನಗರ ಕನ್ನಡ ಜಾಗೃತಿ ಭವನದಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಚೆ ಇಲಾಖೆ ಇತಿಹಾಸದಲ್ಲೇ ಹಗರಣ ರಹಿತವಾಗಿ ಜನಸೇವೆ ಸಲ್ಲಿಸುತ್ತ ಬಂದಿದೆ. ಬ್ಯಾಂಕಿಂಗ್ ಸೇವೆಯೂ ಇದೇ ರೀತಿ ಮುಂದುವರಿಸಿ ಅಂಚೆ ಇಲಾಖೆ ಜನರ ವಿಶ್ವಾಸ ಗಳಿಸಬೇಕು ಎಂದರು.

ಬ್ಯಾಂಕಿಂಗ್ ಸೇವೆ ಇಲ್ಲದ ಗ್ರಾಮೀಣ ಭಾಗಕ್ಕೆ ವರದಾನವಾಗಲಿದೆ. ಸಾರ್ವಜನಿಕರು ಖಾಸಗಿ ಹಣಕಾಸು ಸಂಸ್ಥೆಗಳನ್ನು ನಂಬಿ ಮೋಸಕ್ಕೆ ಒಳಗಾಗದೆ ಸಮೀಪದಲ್ಲೇ ಇರುವ ಅಂಚೆ ಕಚೇರಿಗಳಲ್ಲಿಯೇ ಖಾತೆ ತೆರೆದು ಎಲ್ಲ ರೀತಿಯ ಹಣಕಾಸು ವಹಿವಾಟು ನಡೆಸಬೇಕು ಎಂದರು.

ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ದೊರೆಯಲಿರುವ ಪಿಂಚಣಿ ಹಣ ಇನ್ನು ಮುಂದೆ ನೇರವಾಗಿ ಖಾತೆಗಳಿಗೆ ಜಮೆ ಆಗಲಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಮಾಹಿತಿ ನೀಡಿದರು.

ನಗರಸಭೆ ಸದಸ್ಯ ವಡ್ಡರಹಳ್ಳಿರವಿ ಮಾತನಾಡಿ, ದೇಶದ ಜನರ ಬದುಕಿನಲ್ಲಿ ಅಂಚೆ ಇಲಾಖೆ ಸೇವೆ ಬೆರೆತು ಹೋಗಿದೆ. ಗ್ರಾಮೀಣ ಭಾಗದ ನೂರಾರು ಜನರಿಗೆ ಉದ್ಯೋಗವನ್ನು ಅಂಚೆ ಇಲಾಖೆ ಕಲ್ಪಿಸಿದೆ ಎಂದರು.

ಬದಲಾಗಿರುವ ಕಾಲಘಟ್ಟದಲ್ಲಿನ ಎಲ್ಲ ತಾಂತ್ರಿಕತೆ ಸಮರ್ಥವಾಗಿ ಅಳವಡಿಸಿಕೊಂಡಿರುವ ಅಂಚೆ ಇಲಾಖೆ ಸಾರ್ವಜನಿಕರ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದೆ. ಈಗ ಹಣಕಾಸು ಸೇವೆ ಜನರಿಗೆ ತಲುಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಅಂಚೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಲ್.ನಟರಾಜ್ ಮಾತನಾಡಿ, ಗ್ರಾಮೀಣ ಅಂಚೆ ಸೇವಕರು ಮತ್ತು ಪೋಸ್ಟ್ ಮ್ಯಾನ್‌ಗಳಿಗೆ ಪೇಮೆಂಟ್ಸ್ ಸೇವೆ ನೀಡುವ ಸಾಧನ ವಿತರಿಸಲಾಗಿದೆ ಎಂದರು.

ಮನೆ ಬಾಗಿಲಿಗೆ ಬ್ಯಾಂಕ್ ಸೇವೆ, ಡಿಜಿಟಲ್ ಪಾವತಿ ವ್ಯವಸ್ಥೆ ಲಭ್ಯವಾಗಲಿದೆ. ಪೇಮೆಂಟ್ಸ್ ಬ್ಯಾಂಕ್ ಮೂಲಕ 1ಲಕ್ಷ ಪ್ರತಿ ಖಾತೆಯಂತೆ ವೈಯಕ್ತಿಕ ಹಾಗೂ ಸಣ್ಣ ಉದ್ದಿಮೆದಾರರು ಠೇವಣಿ ಇಡಬಹುದಾಗಿದೆ ಎಂದರು.

ಎನ್‍ಇಎಫ್‍ಟಿ, ಆರ್‍ಟಿಜಿಎಸ್, ಯುಪಿಐ ಮತ್ತು ಬಿಲ್ ಪಾವತಿ ಸೇವೆಗಳು ಖಾತೆ ಬಳಕೆದಾರರಿಗೆ ಲಭ್ಯವಾಗಲಿದೆ. ಅಂಚೆ ಇಲಾಖೆ ಪೇಮೆಂಟ್ಸ್ ಬ್ಯಾಂಕ್ ತನ್ನ ಹೊಸ ಚಿಂತನೆಯೊಂದಿಗೆ ಗ್ರಾಹಕರಿಗೆ ತನ್ನ ಸೇವೆ ನೀಡಲು ಮುಂದಾಗಿದೆ ಎಂದು ತಿಳಿಸಿದರು.

ದೇಶದಾದ್ಯಂತ ಜಿಲ್ಲೆಗೆ ಒಂದರಂತೆ 650 ಭಾರತೀಯ ಅಂಚೆ ಪಾವತಿ ಬ್ಯಾಂಕ್ ಶಾಖೆಗಳು ಹಾಗೂ 3,250 ಅಂಚೆ ಕಚೇರಿಗಳಿಗೆ ವಿಸ್ತರಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಅಂಚೆ ಇಲಾಖೆ ವತಿಯಿಂದ ಹೊರ ತರಲಾಗಿರುವ ಕ್ಯೂಆರ್ ಸ್ಮಾರ್ಟ್ ಕಾರ್ಡ್‌ಗಳನ್ನು ಹೊಸ ಖಾತೆದಾರರಿಗೆ ವಿತರಣೆ ಮಾಡಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಹಸನ್ಘಟ್ಟರವಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ಜಿ.ಹೇಮಂತರಾಜ್, ಅಂಜನಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT