ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ: ಕಸ ಮುಕ್ಕಿದ ಲಕ್ಕಣ್ಣನ ಗೋಕಟ್ಟೆ

ಸಮಾಧಿಯಾದ ಪೊಲೀಸನ ಗೋಪ್ರೀತಿ l ಕಟ್ಟೆಯಲ್ಲಿ ನಿಂತ ಕಲುಷಿತ ನೀರು
Last Updated 20 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ನನ್ನ ತಮ್ಮನಿಗೆ ದನ, ಕರು,ಪ್ರಾಣಿ ಪಕ್ಷಿಗಳೆಂದರೆ ತುಂಬಾ ಪ್ರೀತಿ. ಹೀಗಾಗಿಯೇ ಅವನ ಹೆಸರಿನಲ್ಲಿ ನಿರ್ಮಿಸಿದ್ದ ಗೋಕಟ್ಟೆ ಇಂದು ಬಿಬಿಎಂಪಿ ಕಸದಲ್ಲಿ ಮುಚ್ಚಿ ಹೋಗಿದೆ. ಇದು ಸಮಾಧಿಯಾಗಿರುವ ವಿಷಯ ಕೇಳಿದರೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ. ಆದರೆ ಏನು ಮಾಡುವುದು? ರೈತರ ಸಂಕಟಕ್ಕೆ, ಗೋಕಟ್ಟೆಯೊಂದಿಗಿನ ನಮ್ಮ ಭಾವನಾತ್ಮಕ ಸಂಬಂಧಕ್ಕೆ ಬೆಲೆ ಎಲ್ಲಿದೆ’ ಎನ್ನುವಾಗ ತಣ್ಣೀರನಹಳ್ಳಿ ಗ್ರಾಮದ ರೈತ ರಂಗಣ್ಣ ಅವರ ಕಣ್ಣುಗಳು ತೇವವಾದವು.

‘ದನ, ಕರುಗಳೆಂದರೆ ನನ್ನ ತಮ್ಮ ಲಕ್ಕಣ್ಣನಿಗೆ ತುಂಬಾ ಅಕ್ಕರೆ. ಮಳೆಗಾಲದಲ್ಲಿ ಶಾಲೆಗೆ ಹೋಗುವಷ್ಟರಲ್ಲಿಯೇ ಒಂದಿಷ್ಟು ಮೇವು ತಂದು ಹಾಕಿಯೇ ಹೋಗುತ್ತಿದ್ದ. ಹೊಲದ ಕೆಲಸ ಮಾಡುತ್ತಲೇ ಶಾಲೆ ಕಲಿತು ಪೊಲೀಸ್‌ ನೌಕರಿಗೆ ಸೇರಿದ್ದ. ಕೆಲಸದಲ್ಲಿ ಬಿಡುವು ದೊರೆತರೆ ಸಾಕು ಬೆಂಗಳೂರಿನಿಂದ ಊರ ಕಡೆಗೆ ಬಂದು ಬಿಡುತ್ತಿದ್ದ. ಹೊಲದಲ್ಲಿ ಕೆಲಸ ಮಾಡುತ್ತಿದ್ದ. ದನ ಕರುಗಳಿಗೆ ಮೇವು ತಂದು ಹಾಕುತಿದ್ದ. ಪೊಲೀಸ್‌ ಠಾಣೆಯಲ್ಲಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಹೋಗುವಾಗ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ. ಇದು ನಮ್ಮ ಇಡೀ ಕುಟುಂಬವನ್ನು ತೀವ್ರ ದುಃಖದಲ್ಲಿ ಮುಳುಗುವಂತೆ ಮಾಡಿತು’ ಎಂದರು.

ಗೋಕುಂಟೆ, ಕಟ್ಟೆಗಳ ನೀರೆ ಆಸರೆ: ‘ನಮ್ಮೂರಿನಲ್ಲಿ ಇಂದಿಗೂ ಸಾಕಷ್ಟು ಹಸುಗಳು ಇವೆ. ಬಿತ್ತನೆ ಆರಂಭವಾದ ನಂತರ ಮಳೆಗಾಲದಲ್ಲಿ ಮಾತ್ರ ಹಸುಗಳನ್ನು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿಕೊಂಡು ಮೇಯಿಸುತ್ತೇವೆ. ರಾಗಿ ಕೊಯ್ಲು ಮುಕ್ತಾಯವಾಗಿ ಹೊಲಗಳನ್ನು ಹುಡಿಬಿಟ್ಟ ನಂತರ ಬೇಸಿಗೆಯಲ್ಲಿ ಹಸುಗಳನ್ನು ಮನೆ ಅಥವಾ ಹಿತ್ತಲಿನಲ್ಲಿ ಕಟ್ಟಿ ಮೇಯಿಸುವುದು ಅಪರೂಪ. ಬೆಳಿಗ್ಗೆ ಹಗ್ಗ ಕಳಚಿ ಹೊಲಗಳ ಕಡೆಗೆ ಬಿಟ್ಟರೆ ಮತ್ತೆ ಸಂಜೆ ಅವುಗಳೆ ಮನೆ ಬಳಿಗೆ ಬರುತ್ತವೆ. ಮಧ್ಯಾಹ್ನದ ವೇಳೆಯಲ್ಲಿ ದಿನ್ನೆಗಳಲ್ಲಿನ ಕುಂಟೆ, ಹಳ್ಳದ ಸಾಲಿನಲ್ಲಿ ನಿಂತಿರುವ ನೀರು ಕುಡಿದು ಮರಗಳ ಕೆಳಗೆ ವಿಶ್ರಾಂತಿ ಪಡೆಯುತ್ತವೆ. ಹೀಗಾಗಿ ಲಕ್ಕಣ್ಣನ ಹೆಸರಿನಲ್ಲಿ ನಮ್ಮ ಹೊಲದ ಅಂಚಿನಲ್ಲಿ, ಮಳೆ ನೀರು ಹರಿದು ಬರುವ ಆಯಕಟ್ಟಿನ ಜಾಗದಲ್ಲಿ ಗೋಕಟ್ಟೆ ನಿರ್ಮಿಸಲಾಯಿತು. ಅಲ್ಲೊಂದು ಗೋಕಲ್ಲು ನೆಟ್ಟು ಅರಳಿಮರವನ್ನು ಬೆಳೆಸಿದ್ದೆವು’ ಎಂದು ಅವರು ವಿವರಿಸಿದರು.

‘ನಮ್ಮೂರಿನ ದನಗಳಷ್ಟೇ ಅಲ್ಲದೆ ಅಕ್ಕಪಕ್ಕದ ಗ್ರಾಮಗಳ ರೈತರ ಜಾನುವಾರುಗಳು ಲಕ್ಕಣ್ಣನ ಗೋಕಟ್ಟೆಗೆ ಬಂದು ನೀರು ಕುಡಿದು ಗೋ ಕಲ್ಲಿಗೆ ಮೈ ತಿಕ್ಕಿಕೊಂಡು ದಣಿವಾರಿಸಿಕೊಂಡು ಹೋಗುತ್ತಿದ್ದವು. ಆದರೆ, ಮೂರು ವರ್ಷಗಳ ಹಿಂದೆ ಇಲ್ಲಿಗೆ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕ ಬಂದ ನಂತರ ಬಿಬಿಎಂಪಿಯು ಕಸವನ್ನು ತಂದು ಬೆಟ್ಟದಂತೆ ಸುರಿಯುತ್ತ ಹೋಯಿತು. ಅದು ಗೋಕಟ್ಟೆ ಮುಚ್ಚಿತು. ಮಳೆ ನೀರು ನಿಂತುಕೊಳ್ಳುವ ಸ್ಥಳದಲ್ಲಿ ಇಂದು ಕಸದ ರಾಶಿಯಿಂದ ಹೊರ ಬರುವ ಕಲುಷಿತ ನೀರು ಬಂದು ನಿಂತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಈ ಕಲುಷಿತ ನೀರಿನಿಂದ ಅರಳಿ ಮರ ಒಣಗಿದೆ. ಕಸ ತುಂಬಿರುವ ಗೋಕಟ್ಟೆ ಕಡೆಗೆ ಹಸುಗಳು ಬರದಂತೆ ಎತ್ತರವಾಗಿ ಮಣ್ಣಿನ ಏರಿಯನ್ನು ಕಟ್ಟಿದ್ದಾರೆ. ನಮ್ಮ ಕಣ್ಣ ಮುಂದೆಯೇ ಲಕ್ಕಣನ ಗೋಕಟ್ಟೆ ಬಿಬಿಎಂಪಿ ಕಸದಲ್ಲಿ ಸಮಾಧಿಯಾಗಿದೆ. ಗೋಕಟ್ಟೆ ಇರುವ ಹೊಲದ ಕಡೆಗೆ ಈಗ ಹೋಗುವುದಕ್ಕೆ ಮನಸ್ಸಾಗುತ್ತಿಲ್ಲ. ಆ ಚೈತನ್ಯವೂ ಇಲ್ಲ. ಹೋಗಲು ಸಾಧ್ಯವಾಗದಷ್ಟು ಬೆನ್ನು ಬಾಗಿಹೋಗಿದೆ. ಆದರೆ ಗೋಕಟ್ಟೆಯ ದುಸ್ಥಿತಿಯ ಬಗ್ಗೆ ಜನರು ಹೇಳುವುದನ್ನು ಕೇಳಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದು ಹೇಳಿದ ರಂಗಣ್ಣ ಕ್ಷಣ ಕಾಲ ಮೌನಕ್ಕೆ ಜಾರಿದರು.

ಸಾಸಲು ಹೋಬಳಿಗೆ ಬರುತ್ತಿರುವ ಬಿಬಿಎಂಪಿ ಕಸ ಅದೆಷ್ಟು ಗೋಕಟ್ಟೆ, ಕೆರೆಕುಂಟೆಗಳನ್ನು ನುಂಗಿದೆಯೊ, ಅಲ್ಲಿನ ನೀರನ್ನು ಕಲುಷಿತಗೊಳಿಸಿದೆಯೋ? ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT