ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಕ್ಕೆಮುನಿಯ ಗೂಡುಕಟ್ಟುವ ಪರಿ

Last Updated 25 ಜುಲೈ 2020, 7:44 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಮನೆ ಸಮೀಪದಲ್ಲೇ ಎರಡು ದಿನಗಳಿಂದ ಹಾರಾಟ ನಡೆಸುತ್ತಿದ್ದ ಜೋಡಿ ಪಕ್ಷಿಗಳು ಮೂರನೇ ದಿನದ ವೇಳೆಗೆ ಮನೆ ಮುಂದಿನ ಬಳ್ಳಿಯ ನಡುವೆ ಐದಾರು ಹುಲ್ಲಿನ ಗರಿಗಳನ್ನು ತಂದು ಸಣ್ಣದಾಗಿ ಗೂಡು ಕಟ್ಟಲು ಆರಂಭಿಸಿದ್ದವು. ನೋಡ ನೋಡುತ್ತಿದ್ದಂತೆ ಮೂರ್ನಾಲ್ಕು ದಿನಗಳಲ್ಲೇ ಗೂಡಿಗೆ ಒಂದು ಪುಟ್ಟದಾದ ಬಾಗಿಲು (ಒಳಗೆ ಪಕ್ಷಿ ಹೋಗಲು ರಂಧ್ರ) ನಿರ್ಮಾಣವಾಗಿಯೇ ಬಿಟ್ಟಿತ್ತು.

ಹೌದು, ಮುಂಗಾರು ಆರಂಭವಾಗಿ ಹೊಲಗಳಲ್ಲಿ, ಹೊಲದ ಬದುಗಳಲ್ಲಿ ಹಸಿರು ಹುಲ್ಲು ಬೆಳೆಯುತ್ತಿದ್ದಂತೆ ಸಣ್ಣ ಪುಟ್ಟ ಪಕ್ಷಿಗಳು ತಮಗೆ ಬೇಕಿರುವ ಆಹಾರ ದೊರೆಯುವ, ಪ್ರಾಣಿ, ಶತ್ರು ಪಕ್ಷಿ ಹಾಗೂ ಮನುಷ್ಯರಿಂದ ಅಪಾಯ ಇಲ್ಲದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಗೂಡು ನಿರ್ಮಿಸತೊಡಗುತ್ತವೆ. ಆಹಾರ ದೊರೆಯುವ ವೇಳೆಗೆ ಮೊಟ್ಟೆ ಇಟ್ಟು, ಮರಿಗಳನ್ನು ದೊಡ್ಡವು ಮಾಡಿಕೊಂಡು ತಮ್ಮ ವಂಶಾಭಿವೃದ್ಧಿ ಬೆಳೆಸಿಕೊಳ್ಳುತ್ತವೆ.

ಇಂತಹದೇ ಗುಂಪಿಗೆ ಸೇರಿರುವ ಪಕ್ಷಿ ಚುಕ್ಕೆಮುನಿಯ (ಸ್ಪಾಟೆಡ್ ಮುನಿಯ) ಮನೆ ಮುಂದಿನ ಬಳ್ಳಿ ಸಂದಿಯಲ್ಲಿ ಗೂಡು ಕಟ್ಟುವ ಕೆಲಸ ನೋಡುವುದೇ ಒಂದು ಕುತೂಹಲದ ಸಂಗತಿ.

ಆಹಾರ ಹುಡುಕಾಟ ನಡೆಸುವಾಗ ಈ ಪಕ್ಷಿಗಳು ಗುಂಪು ಗುಂಪಾಗಿ ಭತ್ತ ಸೇರಿದಂತೆ ಸಿರಿ ಧಾನ್ಯಗಳ ಹೊಲಕ್ಕೆ ಹಿಂಡು ಹಿಂಡಾಗಿ ಲಗ್ಗೆಯಿಡುತ್ತವೆ. ಆದರೆ, ಗೂಡು ಕಟ್ಟಿ ಮರಿಗಳನ್ನು ಬೆಳೆಸುವ ಸಂದರ್ಭದಲ್ಲಿ ಹತ್ತಿರದಲ್ಲೇ ಆಹಾರ, ಗೂಡಿಗೆ ಅಗತ್ಯ ಇರುವ ಹುಲ್ಲು ಹತ್ತಿರದಲ್ಲೇ ದೊರೆಯುವ ಸ್ಥಳ ಆಯ್ಕೆ ಮಾಡಿಕೊಳ್ಳುತ್ತವೆ.

ಹೆಣ್ಣು, ಗಂಡು ಎರಡೂ ಪಕ್ಷಿಗಳು ಗೂಡು ನಿರ್ಮಾಣ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತವೆ. ಹೊಲದ ಬದುಗಳಲ್ಲಿ ಬೆಳೆದಿರುವ ಮೃದುವಾದ ರಾಗಿ ಪೈರಿನ ಗರಿಗಳಂತೆ ಇರುವ ಹುಲ್ಲಿನಿಂದ ಗೂಡು ನಿರ್ಮಿಸುತ್ತವೆ. ಹುಲ್ಲಿನ ಗರಿ ಕೊಕ್ಕಿನಿಂದ ಕತ್ತರಿಸಿಕೊಂಡು ಹೊತ್ತು ತರುತ್ತದೆ. ಒಂದು ಪಕ್ಷಿ ಹುಲ್ಲಿನ ಗರಿಯೊಂದಿಗೆ ಗೂಡು ಕಟ್ಟುವ ಸಂದರ್ಭದಲ್ಲಿ, ಮತ್ತೊಂದು ಪಕ್ಷಿ ಯಾರಾದರೂ ಗೂಡಿನ ಬಳಿ ರಕ್ಷಣೆಗೆ ನಿಲ್ಲುತ್ತದೆ. ಒಂದರ ನಂತರ ಮತ್ತೊಂದು ಪಕ್ಷಿ ಪುರ್‌ ಎಂದು ಹಾರಿ ಹೋಗಿ ಹುಲ್ಲಿನ ಗರಿಗಳನ್ನು ಕೊಕ್ಕಿನಲ್ಲಿ ಎತ್ತಿಕೊಂಡು ಬರುತ್ತಲೇ ಇರುತ್ತವೆ.

ಗುಬ್ಬಚ್ಚಿಗಿಂತ ಕೊಂಚ ಚಿಕ್ಕದಾಗಿ ಈ ಹಕ್ಕಿ ಕಾಣಿಸುತ್ತದೆ. ಮರಿ ಮಾಡುವ ಸಮಯದಲ್ಲಿ ತಲೆ ಬೆನ್ನು ರೆಕ್ಕೆಗಳು ಚಾಕೊಲೇಟ್ ಬಣ್ಣ ಇರುತ್ತದೆ. ಎದೆ ಮತ್ತು ಹೊಟ್ಟೆಯ ಭಾಗ ಬೆಳ್ಳಗಿದ್ದು ಅರ್ಧಚಂದ್ರಾಕಾರವಾದ ಕಪ್ಪು ಗೀರುಗಳಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT