ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತುಗಳ ಭರ್ಜರಿ ವ್ಯಾಪಾರ ನಿರೀಕ್ಷೆ

ಐತಿಹಾಸಿಕ ಘಾಟಿ ಸುಬ್ರಹ್ಮಣ್ಯಸ್ವಾಮಿ ಎತ್ತುಗಳ ಜಾತ್ರೆ ಆರಂಭ
Last Updated 3 ಜನವರಿ 2021, 4:06 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೊರೊನಾ ಹಿನ್ನೆಲೆಯಲ್ಲಿ ಹಲವು ಅಡೆತಡೆಗಳ ನಡುವೆ ತಾಲ್ಲೂಕಿನ ಐತಿಹಾಸಿಕ ಘಾಟಿ ಸುಬ್ರಹ್ಮಣ್ಯಸ್ವಾಮಿ ಎತ್ತುಗಳ ಜಾತ್ರೆ ಎರಡು ದಿನಗಳಿಂದ ಆರಂಭವಾಗಿದ್ದು ಶುಕ್ರವಾರ ತುಂಬು ಪರುಷೆ ಸೇರಿದೆ.

ಎತ್ತುಗಳ ಜಾತ್ರೆ ಇನ್ನು ಮೂರು ದಿನಗಳ ಕಾಲ ಇರಲಿದೆ. ಶನಿವಾರಷ್ಟೇ ಎತ್ತುಗಳನ್ನು ಖರೀದಿಸಲು ಹೊರ ರಾಜ್ಯದ ಹಾಗೂ ಉತ್ತರ ಕರ್ನಾಟಕದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಹೀಗಾಗಿ ಭಾನುವಾರ ಎತ್ತಿಗಳ ಭರ್ಜರಿ ವ್ಯಾಪಾರ ನಡೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ಜಾತ್ರೆಗೆ ಎತ್ತುಗಳೊಂದಿಗೆ ಆಗಮಿಸಿರುವ ರೈತರು.

ಸಂಭ್ರಮದ ಮೆರವಣಿಗೆ: ಘಾಟಿ ಜಾತ್ರೆಗೆ ಆಗಮಿಸುವ ಕೆಲ ಶ್ರೀಮಂತ ರೈತರು ಎತ್ತುಗಳನ್ನು ಹೂವುಗಳಿಂದ ಶೃಂಗರಿಸಿಕೊಂಡು ಮನೆ ಮಂದಿಯಲ್ಲ ಸೇರಿ ಮಂಗಳ ವಾದ್ಯಗಳೊಂದಿಗೆ ದೇವಾಲಯದವರೆಗೂ ಮೆರವಣಿಗೆಯಲ್ಲಿ ಹೋಗಿ ಸುಬ್ರಹ್ಮಣ್ಯಸ್ವಾಮಿಗೆ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಹಲವಾರು ಜನ ರೈತರು ಇಂದಿಗೂ ಪಾಲಿಸುತ್ತ ಬರುತ್ತಿದ್ದಾರೆ. ಇದೇ ರೀತಿ ಶನಿವಾರು ಹಲವಾರು ಜನ ರೈತರು ಎತ್ತುಗಳ ಮೆರವಣಿಗೆ ನಡೆಸಿದರು.

ದುಬಾರಿ ಬೆಲೆ ಎತ್ತುಗಳು: ಪ್ರತಿ ಬಾರಿಯು ಘಾಟಿ ಜಾತ್ರೆಗೆ ದುಬಾರಿ ಬೆಲೆ ಎತ್ತುಗಳ ಮಾರಾಟಕ್ಕೆ ಬರುತ್ತವೆ. ಈ ಎತ್ತುಗಳನ್ನು ಜಾತ್ರೆಯಲ್ಲಿ ಕಟ್ಟುವ ಸ್ಥಳ ಒಂದು ವಾರಗಳ ಕಾಲ ಸಿದ್ಧಪಡಿಸಿದ ಭತ್ತದ ಹುಲ್ಲಿನಿಂದ ಮೆತ್ತನೆ ಹಾಸಿಗೆ ನಿರ್ಮಿಸಲಾಗುತ್ತದೆ.

ದುಬಾರಿ ಬೆಲೆ ಎತ್ತುಗಳನ್ನು ಕಟ್ಟಲು ಹೈಟೆಕ್‌ ಮಾದರಿಯ ಪೆಂಡಾಲ್‌ ಹಾಕಲಾಗಿದೆ. ಈ ಬಾರಿ ಜಾತ್ರೆಗೆ ಬಂದಿರುವ ಒಂದು ಜೋಡಿ ಎತ್ತುಗಳ ಬೆಲೆ ₹80 ರಿಂದ ₹1.20 ಲಕ್ಷ ಬೆಲೆ ಬಾಳುತ್ತಿವೆ. ಬೇಸಾಯದ ಕೆಲಸಗಳಲ್ಲಿ ಬಳಸುವ ಒಂದು ಜೋಡಿ ಎತ್ತುಗಳ ಬೆಲೆ ಈ ಬಾರಿ ₹50 ರಿಂದ 70 ಸಾವಿರದವರೆಗೂ ಇವೆ.

ಪ್ರತಿ ವರ್ಷದಂತೆ ನಿಗದಿತ ಸಮಯಕ್ಕೆ ಜಾತ್ರೆ ನಡೆದಿದ್ದರೆ ಸಾವಿರಾರು ಜೋಡಿ ಎತ್ತುಗಳು ಬರುತ್ತಿದ್ದವು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಹಲವು ಬಾರಿ ಎತ್ತುಗಳ ಜಾತ್ರೆ ನಡೆಯುವ ದಿನಾಂಕ ಬದಲಾಗಿದ್ದರಿಂದ ಜಾತ್ರೆಗೆ ಬಂದಿರುವ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ, ಬೆಲೆ ಮಾತ್ರ ಕಡಿಮೆಯಾಗಿಲ್ಲ. ಖರೀದಿಗೆ ಹೊರಗಿನವರು ಸಹ ಬಂದಿದ್ದಾರೆ.

ನೋಡುಗರ ಸಂಖ್ಯೆ ಹೆಚ್ಚು: ಬೆಂಗಳೂರಿಗೆ ಸಮೀಪ ಹಾಗೂ ರಾಗಿ ಹೊಲಗಳ ಕೊಯ್ಲಾಗುತ್ತಿದ್ದಂತೆ ಪ್ರಥಮ ಬಾರಿಗೆ ನಡೆಯುವ ಅತಿದೊಡ್ಡ ಎತ್ತುಗಳ ಜಾತ್ರೆ ಎಂದೇ ಹೆಸರಾಗುವ ಸುಬ್ರಾಯನ ಜಾತ್ರೆಗೆ (ಸ್ಥಳೀಯ ಭಾಷೆಯಲ್ಲಿ ಘಾಟಿ ಸುಬ್ರಹ್ಮಣ್ಯಸ್ವಾಮಿ ಜಾತ್ರೆಯನ್ನು ಸುಬ್ರಾಯನ ಜಾತ್ರೆ ಎಂದು ಕೆರೆಯುವ ವಾಡಿಕೆ) ನೋಡುಗರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಲೇ ಇದೆ.

ಶನಿವಾರ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯಲ್ಲಿ ಜಾತ್ರೆ ನೋಡಲು ಜನರು ಕಾರುಗಳಲ್ಲಿ ಬಂದಿದ್ದರು. ಹೀಗಾಗಿ ದೇವಾಲಯ ಹಾಗೂ ಜಾತ್ರೆ ಸೇರಿರುವ ಸಮೀಪಕ್ಕೆ ಕಾರುಗಳನ್ನು ಬಿಡದಂತೆ ದೂರದಲ್ಲೇ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು.

ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ಜನರು ದೇವಾಲಯದ ಸಮೀಪಕ್ಕೆ ನಡೆದುಕೊಂಡು ಹೋಗಲು ಪರದಾಡುವಂತಾಗಿತ್ತು.

ಜ.19 ರಂದು ರಥೋತ್ಸವ: ಘಾಟಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ ಜನವರಿ 19 ರಂದು ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ದೇವಾಲಯದ ಮುಂದಿನ ಬಯಲಿನಲ್ಲಿ ನಡೆಸದೆ ದೇವಾಲಯದ ಆವರಣದಲ್ಲಿ ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT