ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಪಟ್ಟಣಕ್ಕೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು

Published 23 ಮೇ 2024, 13:59 IST
Last Updated 23 ಮೇ 2024, 13:59 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಪುರಸಭೆಯಿಂದ ಗುರುವಾರ 14 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮಾತನಾಡಿ, ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಜಾಸ್ತಿಯಾಗುತ್ತಿದೆ. ಅಲ್ಲದೆ, ಸರ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕುವುದು, ರಾತ್ರಿ ವೇಳೆ ತಡವಾಗಿ ಪಟ್ಟಣಕ್ಕೆ ಬಸ್‌ಗಳಲ್ಲಿ ಬರುವ ಪ್ರಯಾಣಿಕರ ಸುರಕ್ಷತೆ ಕುರಿತು ಸಾರ್ವಜನಿಕರಿಂದ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ 14ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇವು 360 ಡಿಗ್ರಿ ಸುತ್ತಳತೆಯಲ್ಲಿ ಕೆಲಸ ಮಾಡುತ್ತವೆ.

ಕ್ಯಾಮೆರಾಗಳಿರುವ ಪ್ರದೇಶದಲ್ಲಿ ಧ್ವನಿಯೂ ಸೆರೆಯಾಗಲಿದೆ. ಎಲ್ಲ ಕ್ಯಾಮೆರಾಗಳ ನೇರ ಪ್ರಸಾರ ವೀಕ್ಷಣೆ ಮಾಡಲು ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿಗೂ ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರ ಮೇಲೆ ನಿಗಾವಹಿಸಲು ಅನುಕೂಲವಾಗಲಿದೆ. ಸೌರಶಕ್ತಿ ಸಹಾಯದಿಂದ ಕೆಲಸ ಮಾಡುವುದರಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ನೇರ ಪ್ರಸಾರ ಪುರಸಭೆಯಲ್ಲಿ ವೀಕ್ಷಣೆ ಮಾಡಲಾಗುತ್ತದೆ ಎಂದರು.

ಪುರಸಭೆ ಸದಸ್ಯ ಎ.ಆರ್.ಹನೀಪುಲ್ಲಾ ಮಾತನಾಡಿ, ಪಟ್ಟಣ ಸೇರಿದಂತೆ ಹೊರಗಿನಿಂದ ಪಟ್ಟಣಕ್ಕೆ ಬಂದು ಹೋಗುವ ನಾಗರಿಕರ ಸುರಕ್ಷತೆ ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಸಾರ್ವಜನಿಕರು, ಕ್ಯಾಮೆರಾ ಕಣ್ಣಿನ ವೀಕ್ಷಣೆಯಲ್ಲಿದ್ದೇವೆ ಎನ್ನುವ ಎಚ್ಚರಿಕೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರು, ಮೂತ್ರ ವಿಸರ್ಜನೆ ಮಾಡಿ ಜನರಿಗೆ ಮುಜುಗರವನ್ನುಂಟು ಮಾಡುವವರ ಮೇಲೆ ಕ್ರಮ ಕೈಗೊಳ್ಳುವುದ‌ಕ್ಕೆ ಸಹಕಾರಿಯಾಗಲಿದೆ ಎಂದರು.

ಪುರಸಭೆ ಸದಸ್ಯರಾದ ಸಿ.ಎಂ.ರಾಮು, ಎಂ.ರಾಜಣ್ಣ, ಪರಿಸರ ಎಂಜಿನಿಯರ್ ಶೇಖರ್, ಹಾಗೂ ಪೌರಕಾರ್ಮಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT