ಶುಕ್ರವಾರ, ಜೂಲೈ 10, 2020
22 °C
ಪುರಸಭೆ ಅಧಿಕಾರಿಗಳ ನಿರ್ಲಕ್ಷ: ಸ್ಥಳೀಯರ ಆರೋಪ

ಚರಂಡಿಗೆ ಬಿದ್ದು ಮಗುವಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಇಲ್ಲಿನ ಮಂಡಿಬೆಲೆ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಐದು ವರ್ಷದ ಮಗುವೊಂದು ಚರಂಡಿಗೆ ಬಿದ್ದು ಗಾಯಗೊಂಡಿದೆ. ಗುತ್ತಿಗೆದಾರರು ಮುನ್ನೆಚ್ಚರಿಕೆ ವಹಿಸದ ಕಾರಣ ಘಟನೆ ಸಂಭವಿಸಿದೆ ಎಂದು ಆರೋಪಿಸಿದ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  

‘ಶ್ರೀಗಂಧ ಇಂಟರ್ ನ್ಯಾಷನಲ್ ಶಾಲೆ’ ಮುಂಭಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ಜಯಕೃಷ್ಣ ಎಂಬುವರ ಮಗು ಶಾಲೆಗೆ ಹೋಗುವ ಧಾವಂತದಲ್ಲಿ ಸಿಮೆಂಟ್ ಕಾಂಕ್ರೀಟ್ ಚರಂಡಿಗೆ ಬಿದ್ದು ಗಾಯಗೊಂಡಿತ್ತು. ಹಣೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ತಕ್ಷಣ ಮಗುವನ್ನು ಕೋಲಾರ ರಸ್ತೆಯಲ್ಲಿರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಯಿತು. 

‘ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಗುತ್ತಿಗೆದಾರರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಲ್ಲ, ಪರ್ಯಾಯ ರಸ್ತೆಯನ್ನೂ ಕಲ್ಪಿಸಿಲ್ಲ. ಇದರಿಂದ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ತೊಂದರೆಯಾಗುತ್ತಿದೆ. ಕಾಮಗಾರಿ ನಡೆಯುವಾಗ ಪುರಸಭೆಯ ಅಧಿಕಾರಿಗಳು ಆಗಾಗ ಸ್ಥಳಕ್ಕೆ ಬಂದು ಕಾಮಗಾರಿಯನ್ನು ಪರಿಶೀಲಿಸುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅನಾಹುತ ಸಂಭವಿಸಿದೆ’ ಎಂದು ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳೀಯರ ಆರೋಪಗಳಿಂದ ಕೆರಳಿದ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ‘ಸಮಸ್ಯೆ ಏನಾಗಿದೆ ಅದರ ಬಗ್ಗೆ ಮಾತನಾಡಿ, ವಿನಾಕಾರಣ ಬೇರೆ ಬೇರೆ ಸಮಸ್ಯೆಗಳನ್ನು ಇಲ್ಲಿ ತರುವುದು ಬೇಡ. ಕೂಡಲೇ ಗುತ್ತಿಗೆದಾರರ ವಿರುದ್ಧ  ಕ್ರಮ ಜರುಗಿಸಲಾಗುವುದು’ ಎಂದರು. ಇದು ಮಾತಿನ ಚಕಮಕಿಗೆ ಕಾರಣವಾಯಿತು. 

‘ಈ ಭಾಗದಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಪುರಸಭೆಯಿಂದ ಅನುಮತಿ ನೀಡಿಲ್ಲ. ಕಂದಾಯ ಇಲಾಖೆಯಲ್ಲಿರುವ ಕಟ್ಟಡಗಳಿಗೆ ಸೌಲಭ್ಯ ಕೊಡಲಿಕ್ಕೆ ನಮಗೆ ಅವಕಾಶವಿಲ್ಲ. ಆದರೂ, ಮಾನವೀಯತೆ ದೃಷ್ಟಿಯಿಂದ ಸೌಲಭ್ಯ ಕಲ್ಪಿಸುತ್ತಿದ್ದೇವೆ. ನೀವು ಯಾರ ಬಳಿಯಲ್ಲಿ ನಿವೇಶನ ಖರೀದಿ ಮಾಡಿದ್ದೀರೋ ಅವರ ಬಳಿ ರಸ್ತೆಯನ್ನು ಕೇಳಿ’ ಎಂದು ಪ್ರತಿಕ್ರಿಯಿಸಿದರು. 

ಪುರಸಭಾ ವ್ಯವಸ್ಥಾಪಕ ಆಂಜನೇಯಲು, ಎಂಜಿನಿಯರ್ ಸುಪ್ರಿಯಾ, ಕರವೇ ಮುಖಂಡರಾದ ಮಹೇಶ್ ಕುಮಾರ್, ಅಣ್ಣಮ್ಮತಾಯಿ ಸುರೇಶ್, ಕೇಶವ, ಮಂಜುನಾಥ್, ಬಂಗಾರಪ್ಪ, ಪುರ ಪ್ರಕಾಶ್, ವರ್ಣಬೆನಕ ಮಂಜುನಾಥ್ ಮತ್ತಿತರರು ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು