ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿ: ಯಂತ್ರೋಪಕರಣ ಕೊರತೆ; ವ್ಯವಸಾಯಕ್ಕೆ ಅಡ್ಡಿ

Published 27 ಮೇ 2024, 5:16 IST
Last Updated 27 ಮೇ 2024, 5:16 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಮುಂಗಾರು ಪೂರ್ವದ ಹದ ಮಳೆಗೆ ದೇವನಹಳ್ಳಿ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗೆ ಗರಿಗೆದರಲು ಕೃಷಿ ಯಂತ್ರೋಪಕರಣ ಕೊರತೆ ಅಡ್ಡಿಯಾಗಿದೆ.

ತಾಲ್ಲೂಕಿನ ರೈತರ ಬೇಡಿಕೆಗೆ ತಕ್ಕಂತೆ ಯಂತ್ರೋಪಕರಣಗಳು ಲಭ್ಯ ಇಲ್ಲ. ಇರುವ ಯಂತ್ರಗಳ ವಿತರಣೆಗೆ ಕೃಷಿ ಇಲಾಖೆಯಿಂದ ಸಿದ್ಧತೆ ನಡೆದಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗೆ ಅಡಚಣೆಯಾಗಿದೆ.

ರೈತರಿಗೆ ಯಂತ್ರೋಕರಣ ವಿತರಿಸಲು ಕೃಷಿ ಇಲಾಖೆಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಗುತ್ತಿಗೆ ಪಡೆದುಕೊಂಡಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ಯಂತ್ರೋಪಕರಣ ಒದಗಿಸುತ್ತಿದೆ. ಆದರೆ ಇವೆರ ಬಳಿ ರೈತರ ಬೇಡಿಕೆಗೆ ತಕ್ಕಷ್ಟು ಯಂತ್ರೋಪಕರಣ ಇಲ್ಲ.

ರೋಟಾವೇಟರ್-4, ಕಲ್ಟಿವೇಟರ್–8, ಎಂಬಿ ಫಲಗು-8, ಟ್ರ್ಯಾಕ್ಟರ್‌-4 ಮಾತ್ರ ಲಭ್ಯವಿದ್ದು, ತಾಲ್ಲೂಕಿನ ರೈತರ ಲಭ್ಯತೆ ತಕ್ಕಂತೆ ಸಿಗದೆ ಭೂಮಿ ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾಲ್ಲೂಕಿನಲ್ಲಿ ರೈತರ ಸಂಖ್ಯೆಗೆ ಅನುಗುಣವಾಗಿ ಯಂತ್ರೋಕರಣಗಳನ್ನು ಒದಗಿಸಲು ಕೃಷಿ ಇಲಾಖೆ ಕ್ರಮ  ಕೈಗೊಳ್ಳಬೇಕು. ಉಚಿತವಾಗಿ ಯಂತ್ರಗಳನ್ನು ಪೂರೈಸಬೇಕೆಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೃಷಿ ಯಂತ್ರೋಪಕರಣ ಬಾಡಿಗೆಯೂ ಹೆಚ್ಚಾಗಿದ್ದು, ಒಂದು ಎಕರೆಗೆ ನೇಗಿಲು ಹಾಕಲು ₹10 ಸಾವಿರ, ಕಲ್ಟಿವೇಟರ್ ₹2,500, ಡಬಲ್ ನೇಗಿಲು ಹಾಕಲು ₹6 ಸಾವಿರ ಖರ್ಚು ಬರುತ್ತದೆ. ಬಿತ್ತನೆ ಮಾಡುವಷ್ಟರಲ್ಲಿ ಮೂರು ಬಾರಿ ಉಳುಮೆ ಮಾಡಬೇಕು.

ಡಿಎಪಿ ₹1400, ಎಂಓಪಿ 25 ಕೆ.ಜಿಗೆ ₹1,800, 19 ಹಾಲ್ ನೀರಿನಲ್ಲಿ ಮಿಶ್ರಣ ಮಾಡುವ ಗೊಬ್ಬರ ₹2,000, ಯೂರಿಯಾ ₹340, ಕಾಂಪ್ಲೆಕ್ಸ್ ₹1,450 ಆಗಿದೆ.

ಬಡ ರೈತರು ಇಷ್ಟೊಂದು ಹಣ ವ್ಯಹಿಸಲು ಮಾಡಬೇಕಿದೆ. ಹೀಗಾಗಿ ಸರ್ಕಾರ ರೈತರ ಬೆನ್ನಿಗೆ ನಿಲ್ಲಬೇಕಿದೆ.

ದರಪಟ್ಟಿಗೆ ಆಗ್ರಹ:

ರಸಗೊಬ್ಬರದ ಕೆಲವು ಮಳಿಗೆಗಳಲ್ಲಿ ದಾಸ್ತಾನು, ದರಪಟ್ಟಿ ಹಾಕಿರುವುದಿಲ್ಲ. ಕೆಲವು ಗೊಬ್ಬರಗಳು ಖರೀದಿಸಿದರೆ, ಬೇರೆ ಗೊಬ್ಬರಗಳು ಕಡ್ಡಾಯವಾಗಿ ಖರೀದಿಸಬೇಕು ಎಂದು ಒತ್ತಾಯ ಹಾಕುತ್ತಾರೆ. ರಸೀದಿ ಕೊಡುವುದಿಲ್ಲ. ಇದೆಲ್ಲಕ್ಕೂ ಕಡಿವಾಣ ಹಾಕಿ, ಕೃಷಿ ಅಧಿಕಾರಿಗಳು ರೈತರಿಗೆ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಸುಶೀಲಮ್ಮ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ

.
.
ತಾಲ್ಲೂಕಿನಲ್ಲಿನ ಪ್ರತಿಯೊಂದು ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ದರಪಟ್ಟಿ ಮತ್ತು ರಸಗೊಬ್ಬರಗಳ ಲಭ್ಯತೆ ಕುರಿತು ಫಲಕ ಅಳವಡಿಸಲು ಸೂಚನೆ ನೀಡಲಾಗಿದೆ. ಎಂ.ಆರ್.ಪಿ.ಬೆಲೆಗೆ ಮಾರಾಟವಾಗುವಂತೆ ಕ್ರಮ ವಹಿಸಲಾಗುತ್ತದೆ.
ಸುಶೀಲಮ್ಮ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ

ಬಾರದ ಬರ ಪರಿಹಾರ:

ಬಿತ್ತನೆ ಬೀಜ ರಸಗೊಬ್ಬರ ಉಚಿತ ವಿತರಣೆಗೆ ಒತ್ತಾಯ ಕೃಷಿಗೆ ಅಗತ್ಯ ಬಿತ್ತನೆ ಬೀಜ ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಉಚಿತವಾಗಿ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಬರಗಾಲದಿಂದ ಕಳೆದ ವರ್ಷ ತೀವ್ರ ನಷ್ಟ ಅನುಭವಿಸಿದ್ದೇವೆ. ಇದುವರೆಗೂ ನಷ್ಟದ ಹೊರೆಯಿಂದ ಹೊರಗೆ ಬಾರಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರದಿಂದ ಇದುವರೆಗೂ ಬರಪರಿಹಾರ ಹಣ ಬಂದಿಲ್ಲ. ಅವರು ನೀಡುವ ಹಣ ನಷ್ಟ ಸರಿದೂಗಿಸಲು ಸಾಲುವುದಿಲ್ಲ. ಇನ್ನೂ ಬಿತ್ತನೆಗೆ ಎಲ್ಲಿ ಸಾಕಾಗುತ್ತದೆ? ಹೀಗಾಗಿ ಬಿತ್ತನೆ ಬೀಜ ರಸಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸರ್ಕಾರ ಉಚಿತವಾಗಿ ವಿತರಿಸಬೇಕೆಂದು ಆಗ್ರಹಿಸಿದ್ದಾರೆ. ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಯಲ್ಲೂ ಎತ್ತುಗಳನ್ನು ಸಾಕುತ್ತಿದ್ದರು. ಉಳುಮೆ ಸಮಯದಲ್ಲಿ ಮನೆಗೊಂದು ಹಾಳಿನಂತೆ ಒಬ್ಬರಿಗೊಬ್ಬರು ಉಳುಮೆ ಮಾಡಲು ನೆರವಾಗುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಜಾನುವಾರು ಸಾಕಣಿಕೆ ಕ್ಷೀಣಿಸಿದೆ.  ಇಂಥ ಸಂದರ್ಭದಲ್ಲಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮಾರ್ಗದರ್ಶನ ಮತ್ತು ನೆರವು ನೀಡಬೇಕಿದ್ದ ಕೃಷಿ ಇಲಾಖೆ ಅಗತ್ಯ ಇರುವ ಯಂತ್ರ ಪೂರೈಕೆಗೆ ಮೀನಾಮೇಷ ಎಣಿಸುತ್ತಿದೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷಿ ಇಲಾಖೆ ಸಿದ್ಧತೆ

ತಾಲ್ಲೂಕಿನಲ್ಲಿ ಜನವರಿಯಿಂದ ಮೇ 23 ವರೆಗೆ 118.8 ಮೀ.ಮೀ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಕಸಬಾ ಹೋಬಳಿ 1872 ಕುಂದಾಣ ಹೋಬಳಿಯಲ್ಲಿ 4860 ಚನ್ನರಾಯಪಟ್ಟಣದಲ್ಲಿ 3019 ವಿಜಯಪುರದಲ್ಲಿ 2469 ಎಕರೆ ಸೇರಿ ಒಟ್ಟು 12220 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ವಿಜಯಪುರ ಹೋಬಳಿ ಕೃಷಿ ಅಧಿಕಾರಿ ಶ್ವೇತಾ ತಿಳಿಸಿದ್ದಾರೆ. ಡಿಎಪಿ 434 ಕ್ವಿಂಟಾಲ್‌ ಎಂಓಪಿ 111 ಎನ್‌ಪಿಕೆಎಸ್ 2178 ಎಸ್‌ಎಸ್‌ಪಿ 239 ಯೂರಿಯಾ 2191 ಸೇರಿ ಒಟ್ಟು 5154 ಕ್ವಿಂಟಾಲ್ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗಿದೆ. ಜಿಪ್ಸಂ ಗೊಬ್ಬರ ಬೋರಾಕ್ಸ್ ಲಘು ಪೋಷಕಾಂಶ ಮಿಶ್ರಣ ಬಯೋ ಎನ್‌ಪಿಕೆ ಸಹಾಯಧನದಲ್ಲಿ ವಿತರಣೆ ಮಾಡಲು ಸಿದ್ಧತೆ ಮಾಡಿಕೊಲ್ಳಲಾಗಿದೆ. 5 ಕೆ.ಜಿ. ರಾಗಿಗೆ ಸಾಮಾನ್ಯ ವರ್ಗದ ರೈತರು ₹235 ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ₹190ಕ್ಕೆ 5 ಕೆ.ಜಿ.ತೊಗರಿಗೆ ಸಾಮಾನ್ಯ ವರ್ಗದ ರೈತರು ₹770 ಎಸ್‌.ಸಿ ಎಸ್‌ಟಿಗೆ ₹707.50ಗೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT