ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್ | ಬರಡಾದ ಕೆರೆಗಳು; ಜೀವಜಲಕ್ಕೆ ಪರದಾಟ

Published 1 ಏಪ್ರಿಲ್ 2024, 6:34 IST
Last Updated 1 ಏಪ್ರಿಲ್ 2024, 6:34 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಕೆಲ ಕೆರೆ–ಕುಂಟೆಗಳು ಬರಿದಾಗಿದ್ದು, ಬಿಸಿಲಿನ ಬೇಗೆಯಿಂದ ಜನ, ಜಾನುವಾರುಗಳು ಪರಿತಪಿಸುತ್ತಿವೆ.

ಕಳೆದ ಮುಂಗಾರಿನಲ್ಲಿ ವಾಡಿಕೆಯ ಮಳೆಗಿಂತ ಕಡಿಮೆ ಮಳೆಯಾಗಿದ್ದರಿಂದ ಮತ್ತು ಬಿಸಲಿನ ಬೇಗೆ ಹೆಚ್ಚಾಗಿರುವುದರಿಂದ ಜಲಮೂಲಗಳಾದ ಕೆರೆ–ಕುಂಟೆಗಳಲ್ಲಿ ನೀರಿನ ಬರ ಆವರಿಸಿದೆ. ಜನ–ಜಾನುವಾರು ಅಲ್ಲದೆ ವನ್ಯಪ್ರಾಣಿಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಅಲ್ಲದೆ ಕೃಷಿ ಚಟುವಟಿಕೆಗೆ ಭಾರಿ ಹೊಡೆತ ಬಿದ್ದಿದೆ.

ಆನೇಕಲ್‌ ತಾಲ್ಲೂಕು ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆಯುವುದರಲ್ಲಿ ತನ್ನದೇ ಆದ ಖ್ಯಾತಿ ಹೊಂದಿದೆ. ‘ರಾಗಿ ಕಣಜ’ವೆಂದೂ  ಹೆಸರುವಾಸಿಯಾಗಿದೆ. ಹೂವು, ತರಕಾರಿ ಬೆಳೆಗಳಿಗೆ ಪ್ರಸಿದ್ದಿ ಪಡೆದಿದೆ. ಆದರೆ ಮಳೆಯ ಕೊರತೆಯಿಂದಾಗಿ ಅಂತರ್ಜಲ ಕುಸಿದಿದೆ. ಕೊಳವೆ ಬಾವಿಗಳಲ್ಲಿ ನೀರಿಲ್ಲದಂತಾಗುತ್ತದೆ.

ತೋಟಗಳಲ್ಲಿ ನಳನಳಿಸಬೇಕಾದ ಬೆಳೆಗಳು ಬಿಸಿಲಿನ ಬೇಗೆ ಮತ್ತು ನೀರಿಲ್ಲದೇ ಒಣಗಿವೆ. ಆನೇಕಲ್‌ ತಾಲ್ಲೂಕಿನ ಕರ್ಪೂರು, ಮಾಯಸಂದ್ರ, ತೆಲಗರಹಳ್ಳಿ, ಗೆರಟಿಗನಬೆಲೆ, ಚಿಕ್ಕಹಾಗಡೆ ಸೇರಿದಂತೆ ವಿವಿಧ ಕೆರೆಗಳು ನೀರಿಲ್ಲದೇ ಬರಿದಾಗಿವೆ. ಇದರಿಂದಾಗಿ ಈ ಕೆರೆಗಳ ಸುತ್ತಮುತ್ತ ಅಂತರ್ಜಲ ಅವಲಂಭಿಸಿ, ಕೊಳವೆ ಬಾವಿ ಕೊರೆಯಿಸಿದ್ದ ರೈತರ ಕೊಳವೆ ಬಾವಿಗಳು ಬತ್ತಿಹೋಗಿದ್ದು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ತೀವ್ರ ಪೆಟ್ಟು ಬಿದ್ದಿದೆ.

ರೈತರು ತಮ್ಮ ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ಯಾಂಕರ್‌ಗಳ ಮೂಲಕ ಬೆಳೆಗಳಿಗೆ ನೀರು ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರು ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆಯಾಂತಾಗಿದೆ.

ತಾಲ್ಲೂಕಿನ ವಿವಿಧೆಡೆ ಅಂತರ್ಜಲ ಕುಸಿದಿದೆ. ಸಾವಿರ ಅಡಿ ಕೊರೆಯಿಸಿದರೂ ನೀರು ದೊರೆಯುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿಲ್ಲ. ಇದರಿಂದ ರೈತರಿಗೆ ಹೆಚ್ಚಿನ ಸಂಕಷ್ಟ ಉಂಟಾಗಿದೆ. ಬೆಳೆದ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

‌ಶಾಶ್ವತ ನೀರಿನ ಮೂಲವಿಲ್ಲ: ಆನೇಕಲ್‌ ತಾಲ್ಲೂಕಿನಲ್ಲಿ ಯಾವುದೇ ಶಾಶ್ವತ ನೀರಿನ ಮೂಲಗಳಿಲ್ಲ. ಮಳೆಯಾಶ್ರಿತ ಪ್ರದೇಶವಾಗಿದೆ. ಆದರೆ ಮಳೆಯನ್ನೇ ನಂಬಿ ಉತ್ತಮ ಬೆಳೆಗಳನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದೆವು. ಆದರೆ ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದು ಮೇಡಹಳ್ಳಿಯ ರೈತ ಮುರುಗೇಶ್‌ ಹೇಳುತ್ತಾರೆ.

ಇಳುವರಿ ಕುಸಿತ

ತೋಟಗಳಲ್ಲಿ ಹೂವಿನ ಕೊಯ್ಲು ಅತ್ಯಂತ ಕಡಿಮೆಯಾಗಿದೆ. ಸಾಮಾನ್ಯವಾಗಿ ಒಂದು ಎಕರೆಗೆ 15 ದಿನಗಳಿಗೆ ಒಂದೂವರೆ ಟನ್‌ ಗುಲಾಬಿ ಹೂವಿನ ಕೊಯ್ಲು ಬರುತ್ತಿತ್ತು. ಆದರೆ ಬೇಸಿಗೆಯಿಂದಾಗಿ ಎಕರೆಗೆ 500ಕೆಜಿ ಸಹ ಹೂವು ಕೊಯ್ಲು ಬರುತ್ತಿಲ್ಲ. ಕೊಳವೆ ಬಾವಿಗಳು ಬತ್ತಿ ಹೋಗಿವೆ ಎಂದು ಬೇಸರದಿಂದ ನುಡಿಯುತ್ತಾರೆ ಆನೇಕಲ್‌ ತಾಲ್ಲೂಕಿನ ಸಬ್‌ಮಂಗಲದ ರೈತ ಕೋದಂಡರಾಮಯ್ಯ.

ಸೊಪ್ಪು, ತರಕಾರಿ ಮತ್ತಿತರ ಬೆಳೆಗಳು ಸಹ ನೀರಿನ ಸಮಸ್ಯೆ ಮತ್ತು ಬಿಸಿಲಿನ ಝಳದಿಂದಾಗಿ ಬೆಳೆಯುವುದು ಕಷ್ಟವಾಗಿದೆ. ರೈತರು ಮಳೆ ಬಂದು ಭೂಮಿ ತಂಪಾಗುವುದೇ ಎಂದು ಆಕಾಶದತ್ತ ನೋಡುತ್ತಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಧನಂಜಯ ಹೇಳಿದರು.

66 ಕೆರೆಗಳಿಗೆ ನೀರು

ಆನೇಕಲ್‌ ತಾಲ್ಲೂಕಿನ 66 ಕೆರೆಗಳಿಗೆ ಏತನೀರಾವರಿಯ ಮೂಲಕ ನೀರು ತುಂಬಿಸುವ ಕಾರ್ಯ ನಡೆದಿದ್ದು ಆನೇಕಲ್‌ನ ದೊಡ್ಡಕೆರೆ, ಹಾರಗದ್ದೆ, ಮುತ್ತಾನಲ್ಲೂರು, ಸಿಂಗೇನಗ್ರಹಾರ, ಬಿದರಗುಪ್ಪೆ, ಜಿಗಣಿ, ಹೆನ್ನಾಗರ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ತುಂಬಿಸಿರುವುದರಿಂದ ಈ ಭಾಗದ ಸುತ್ತಮುತ್ತ ಕೆರೆಗಳಲ್ಲಿ ನೀರಿರುವುದು ವರದಾನವಾಗಿದೆ.

120ಎಂಎಲ್‌ಡಿ ನೀರು ಏತನೀರಾವರಿ ಮೂಲಕ ಕೆರೆಗಳಿಗೆ ತುಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಇಲ್ಲಿಯೂ ಸಹ ನೀರಿನ ಅಭಾವವಿದ್ದು ಪ್ರಸ್ತುತ 60ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT