ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಗ್ರಾನೈಟ್ ತ್ಯಾಜ್ಯದಿಂದಾಗಿ ಜಿಗಣಿ ಸುತ್ತಲಿನ ಜನರು ಹೈರಾಣ

200ಕ್ಕೂ ಹೆಚ್ಚು ಗ್ರಾನೈಟ್‌ ಮಳಿಗೆ ಮತ್ತು ಕಾರ್ಖಾನೆಗಳು * ಕ್ರಮಕ್ಕೆ ಮುಂದಾಗದ ಪರಿಸರ ಮಾಲಿನ್ಯ ಮಂಡಳಿ
Last Updated 22 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಆನೇಕಲ್: ಜಿಗಣಿ ಗ್ರಾನೈಟ್‌ ನಗರಿ ಎಂದೇ ಪ್ರಸಿದ್ಧಿ. ರಾಜ್ಯದ ವಿವಿಧ ಭಾಗಗಳ ಗ್ರಾಹಕರನ್ನು ಆಕರ್ಷಿಸುವ ಪ್ರಮುಖ ಕೇಂದ್ರ. ಪ್ರತಿನಿತ್ಯ ಸಾವಿರಾರು ಮಂದಿ ಗ್ರಾಹಕರು ಗ್ರಾನೈಟ್‌ ಖರೀದಿಗೆ ಬರುತ್ತಾರೆ. ಆದರೆ, ಸ್ಥಳೀಯರು, ಸುತ್ತಮುತ್ತಲ ಗ್ರಾಮಗಳ ಜನರು ಗ್ರಾನೈಟ್‌ ತ್ಯಾಜ್ಯದಿಂದ ಬಳಲುವಂತಾಗಿದೆ.

ಸ್ವಚ್ಛತೆ ಕೊರತೆ ಮತ್ತು ಕಲುಷಿತ ವಾತಾವರಣದಿಂದ ಪರದಾಡುವಂತಾಗಿದೆ. ಜಿಗಣಿ ಪುರಸಭೆ ವ್ಯಾಪ್ತಿ ಮತ್ತು ಆನೇಕಲ್‌-ಜಿಗಣಿ-ಬನ್ನೇರುಘಟ್ಟ ರಸ್ತೆಯವರೆಗೂ ಸುಮಾರು 200ಕ್ಕೂ ಹೆಚ್ಚು ಗ್ರಾನೈಟ್‌ ಮಳಿಗೆಗಳು ಮತ್ತು ಹಲವು ಕಾರ್ಖಾನೆಗಳು ತಲೆಎತ್ತಿವೆ.

ಕಾರ್ಖಾನೆಗಳಲ್ಲಿ ಗ್ರಾನೈಟ್‌ ಕಲ್ಲುಗಳನ್ನು ಕತ್ತರಿಸುವಾಗ ಮತ್ತು ಪಾಲೀಶ್‌ ಮಾಡುವಾಗ ರಾಸಯನಿಕ ಬಳಸಲಾಗುತ್ತದೆ. ಗ್ಯಾಸ್‌ ಕಟಿಂಗ್‌ ಮತ್ತು ವಾಟರ್‌ ಕಟಿಂಗ್‌ ಎಂದು ಎರಡು ಬಗೆಗಳಲ್ಲಿ ಗ್ರಾನೈಟ್‌ಗಳನ್ನು ಕತ್ತರಿಸಲಾಗುತ್ತದೆ. ಈ ಸಂದರ್ಭದಲ್ಲಿ ಘನತ್ಯಾಜ್ಯ ಮತ್ತು ರಾಸಾಯನಿಕ ನೀರು ಹೊರಬರುತ್ತದೆ. ಇವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಗ್ರಾನೈಟ್‌ ಕಾರ್ಖಾನೆ ಯಾವುದೇ ಕ್ರಮ ಕೈಗೊಂಡಿಲ್ಲ. ತ್ಯಾಜ್ಯವನ್ನು ಸುತ್ತಮುತ್ತಲಿನ ಪ್ರದೇಶದ ಖಾಲಿ ಜಾಗಗಳಲ್ಲಿ ಎಸೆಯಲಾಗುತ್ತಿದೆ. ಮಹಂತಲಿಂಗಾಪುರ, ಕಲ್ಲುಬಾಳು ಸಮೀಪದ ಗೋಮಾಳ, ಸರ್ಕಾರಿ ಜಾಗ, ಕೆರೆಗಳಲ್ಲಿ ಗ್ರಾನೈಟ್‌ ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ಅಂತರ್ಜಲ ಕಲುಷಿತವಾಗುತ್ತಿದೆ. ಹಳ್ಳ –ಕೊಳ್ಳಗಳ ಬಳಿ ಹಾಕಲಾಗುತ್ತಿದ್ದು ದನಕರುಗಳು ಇಲ್ಲಿ ಓಡಾಡಿದರೆ ತ್ಯಾಜ್ಯದಲ್ಲಿ ಸಿಲುಕಿಕೊಳ್ಳುತ್ತಿವೆ. ದನಗಳು ಸತ್ತಿರುವ ಹಲವು ಪ್ರಕರಣಗಳಿವೆ. ಕಲುಷಿತ ನೀರು ಕುಡಿದು ಜಾನುವಾರು ಆರೋಗ್ಯ ಹದಗೆಟ್ಟಿರುವ ಉದಾಹರಣೆಗಳಿವೆ ಎಂದು ಸ್ಥಳೀಯರ ರೈತರು ಮಾಹಿತಿ ನೀಡಿದರು.

ಕೆಐಡಿಬಿ ವತಿಯಿಂದ ಅನುಮತಿ ಪಡೆದು ಕೆಲ ಮಳಿಗೆಗಳನ್ನು ತೆರೆಯಲಾಗಿದೆ. ಜಿಗಣಿ ವ್ಯಾಪ್ತಿಯಿಂದ ಹೊರಗಡೆ ಕೊಪ್ಪ ಗೇಟ್‌, ಹರಪನಹಳ್ಳಿ, ಬೇಗೆಹಳ್ಳಿ, ಮಂಟಪ, ಜಂಗಾಲ್‌ಪಾಳ್ಯ, ಹಾರಗದ್ದೆ, ಮಾದಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾನೈಟ್‌ ಅಂಗಡಿಗಳಿವೆ. ಬಹುತೇಕ ಮಳಿಗೆಗಳು ಹಸಿರುವಲಯ ಮತ್ತು ವಸತಿ ಪ್ರದೇಶದಲ್ಲಿ ಸ್ಥಾಪನೆಯಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಮಳಿಗೆಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಹಸಿರುವಲಯ ಮತ್ತು ವಸತಿ ಪ್ರದೇಶದಲ್ಲಿ ಮಳಿಗೆಗಳನ್ನು ತೆರೆದಿರುವ ಬಗ್ಗೆ ನೋಟಿಸ್‌ ನೀಡಿ ಕ್ರಮಕೈಕೊಂಡಿದ್ದರು. ಆದರೂ, ಯಾವುದೇ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಮಾಮೂಲಿಯಂತೆ ಮಾರುಕಟ್ಟೆ ನಡೆಯುತ್ತಿದೆ ಎಂದು ಸ್ಥಳೀಯ ನಿವಾಸಿ ಫ್ಯಾನ್ಸಿ ರಮೇಶ್‌ ದೂರುತ್ತಾರೆ.

ಅಕ್ರಮವಾಗಿ ಮಳಿಗೆಗಳಿಗೆ ಕಡಿವಾಣ ಹಾಕುವ ಅವಶ್ಯವಿದೆ. ಪರವಾನಗಿ ಪಡೆಯದೇ ನಡೆಯುತ್ತಿರುವ ಕೆಲ ಅಂಗಡಿಗಳ ಮೇಲೆ ಸ್ಥಳೀಯ ಸಂಸ್ಥೆಗಳು, ಕಂದಾಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಂಡು ಸರ್ಕಾರಕ್ಕೆ ಆದಾಯ ಬರುವಂತೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.

ಜಿಗಣಿ ಗ್ರಾನೈಟ್‌ ತ್ಯಾಜ್ಯ, ಕಸ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಲಗಳಿಗೆ, ಗೋಮಾಳ, ಗುಂಡು ತೋಪುಗಳ ಬಳಿ ಎಸೆಯಲಾಗುತ್ತಿದೆ. ಕೆಲವೊಮ್ಮೆ ರಸ್ತೆಗಳಲ್ಲಿಯೇ ಕಸ ಎಸೆದು ಹೋಗುತ್ತಿದ್ದಾರೆ. ಇದರಿಂದ ರಸ್ತೆಗಳು ಹಾಳಾಗಿವೆ. ದೂಳು ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿ ಎಲ್ಲಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜು ತಿಳಿಸಿದರು.

ಗ್ರಾನೈಟ್‌ ಕಾರ್ಖಾನೆಗಳು, ಮಳಿಗೆಗಳು ಜಿಗಣಿ ಭಾಗಕ್ಕೆ ಬಂದಿದ್ದರಿಂದ ಬಾಡಿಗೆ ಮನೆಗಳು, ಖಾಲಿ ಜಾಗಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಾಡಿಗೆ ಹೆಚ್ಚಾಗಿ ಕೆಲವರಿಗೆ ಲಾಭವಾದರೂ ಸಾರ್ವಜನಿಕರು ಇಲ್ಲಿನ ತ್ಯಾಜ್ಯದಿಂದ ಮತ್ತು ಕಸದಿಂದ ಪರದಾಡುವಂತಾಗಿದೆ. ಗ್ರಾನೈಟ್ ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ವಿಧಾನ ಅಳವಡಿಸಿಕೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹ.

ಗ್ರಾನೈಟ್‌ ಉದ್ಯಮದ ಜತೆಗೆ ಗ್ರಾಮಲ್ಲಿನ ಸ್ವಚ್ಛತೆ, ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಪರಿಸರ ಸ್ನೇಹಿಯಾಗಿ ಗ್ರಾನೈಟ್‌ ಉದ್ಯಮ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಒತ್ತಾಯ.

ನೂರಾರು ಕೋಟಿ ವ್ಯವಹಾರ ನಡೆಸುವ ಗ್ರಾನೈಟ್ ಉದ್ಯಮಿಗಳು ತ್ಯಾಜ್ಯ ವಿಲೇವಾರಿಗಾಗಿ ನಿಗದಿತ ಜಾಗ ಗುರುತಿಸಬೇಕು. ಆ ಜಾಗದಲ್ಲಿಯೇ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇ ಮಾಡಬೇಕು. ಪರಿಸರ ಮತ್ತು ಸಾರ್ವಜನಿಕರಿಗೆ ಹಾನಿಯಾಗದಂತೆ ಎಲ್ಲ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬುದು ಪರಿಸರವಾದಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT