ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಆದಾಯ ದ್ವಿಗುಣವಾಗಬೇಕು: ಡಿ.ವಿ. ಸದಾನಂದಗೌಡ

ಹಾಡೋನಹಳ್ಳಿಯ ಬೆಂಗಳೂರು ಗ್ರಾಮಾಂತರ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ
Last Updated 11 ಸೆಪ್ಟೆಂಬರ್ 2018, 12:59 IST
ಅಕ್ಷರ ಗಾತ್ರ

ಹಾಡೋನಹಳ್ಳಿ(ದೊಡ್ಡಬಳ್ಳಾಪುರ): ಕೃಷಿ ವಿಜ್ಞಾನ ಕೇಂದ್ರಗಳನ್ನು ಅವಲೋಕಿಸುವ ಮೂಲಕ ರೈತರ ಸಲಹೆ ಸೂಚನೆ ಸ್ವೀಕರಿಸಿ ಕೇಂದ್ರ ಕೃಷಿ ಸಚಿವರಿಗೆ ವರದಿ ಸಲ್ಲಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ತಾಲ್ಲೂಕಿನ ಹಾಡೋನಹಳ್ಳಿಯ ಬೆಂಗಳೂರು ಗ್ರಾಮಾಂತರ ಕೃಷಿ ವಿಜ್ಞಾನ ಕೇಂದ್ರಕ್ಕೆ (ಕೆವಿಕೆ) ಮಂಗಳವಾರ ಭೇಟಿ ನೀಡಿ ಮಾತನಾಡಿದರು. 2022ರ ವೇಳೆಗೆ ರೈತರ ಕೃಷಿ ಉತ್ಪನ್ನಗಳ ಪ್ರಮಾಣ ಹೆಚ್ಚಾಗಿ, ಕೃಷಿ ಆದಾಯ ದ್ವಿಗುಣವಾಗಬೇಕು ಎನ್ನುವ ಧ್ಯೇಯೋದ್ದೇಶ ಹೊಂದಲಾಗಿದೆ ಎಂದರು.

ಕೃಷಿಯಿಂದ ವಿಮುಖರಾಗುತ್ತಿರುವವರನ್ನು ಆ ಕ್ಷೇತ್ರಕ್ಕೆ ಕರೆತರಬೇಕು. ರೈತರು ಸ್ವಾವಲಂಬಿಗಳಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ರೈತರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.

ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಕೃಷಿ ವಿಜ್ಞಾನ ಕೇಂದ್ರಗಳು ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಿ, ರೈತರ ಸಂಪರ್ಕದಲ್ಲಿರಬೇಕು. ಜನಪ್ರತಿನಿಧಿಗಳು ಹೊಸ ಯೋಜನೆಗಳನ್ನು ರೂಪಿಸಲು ಅಧಿಕಾರಿಗಳೊಂದಿಗೆ ಸಮಾಲೋಚಿಸಬೇಕು ಎಂದು ಸೂಚಿಸಿದರು.

ಅಂತರಹಳ್ಳಿಯ ರೈತ ಮಹಿಳೆ ಚೆನ್ನಮ್ಮ ಮಾತನಾಡಿ, ‘ಕೃಷಿ ವಿಜ್ಞಾನ ಕೇಂದ್ರದಿಂದ ತಾಂತ್ರಿಕ ಸಹಕಾರ ನೀಡುತ್ತಿದ್ದು ಇದರಲ್ಲಿ ಲಾಭ ಕಂಡುಕೊಂಡಿದ್ದೇವೆ. ಆದರೆ ಬಾಳೆ ಹಣ್ಣಿಗೆ ಪನಾಮ ರೋಗ ಸೇರಿದಂತೆ ಬೆಳೆಗಳಿಗೆ ರೋಗಗಳು ಬರುತ್ತಿರುವುದು ಸಮಸ್ಯೆಯಾಗಿದೆ. ರೈತರಿಗೆ ಮಾರುಕಟ್ಟೆ ಸಮಸ್ಯೆಯಾಗಿದ್ದು ಹಾಲು ಉತ್ಪಾದಕರ ಸಹಕಾರ ಸಂಘದ ರೀತಿಯಲ್ಲಿ ತರಕಾರಿ ಮಾರುಕಟ್ಟೆ ಸಹಕಾರ ಸಂಘ ಸ್ಥಾಪಿಸಬೇಕಿದೆ’ ಎಂದರು.

ಬೈರದೇನಹಳ್ಳಿ ರೈತ ಜಯರಾಂ ಮಾತನಾಡಿ, ಮೇಕೆಗಳಿಗೆ ಅಂಟಿರುವ ರೋಗದಿಂದ ಸಮಸ್ಯೆ ಹೆಚ್ಚಾಗಿದೆ. ಜಾನುವಾರುಗಳ ಆರೋಗ್ಯಕ್ಕಾಗಿ ಕೃಷಿ ವಿಜ್ಞಾನ ಕೇಂದ್ರದಿಂದ ವೈದ್ಯರ ಹಾಗೂ ಪ್ರಾಣಿಗಳ ಆರೋಗ್ಯ ತಜ್ಞರನ್ನು ನೇಮಿಸಬೇಕಿದೆ ಎಂದರು.

ಕಂಟನಕುಂಟೆ ರೈತ ರಮೇಶ್ ಶೆಣೈ ತಾವು ಬೆಳೆದಿರುವ ರಾಗಿ ಬೆಳೆ ಪಕ್ಕದಲ್ಲಿ ಸರ್ಕಾರಿ ನೀಲಗಿರಿ ತೋಪು ಇರುವುದರಿಂದ ರಾಗಿ ಇಳುವರಿ ಕಡಿಮೆಯಾಗಿದೆ ಎಂದು ದೂರಿದರು.

ಕುಂಟನಹಳ್ಳಿ ರೈತ ಲಕ್ಷ್ಮೇಗೌಡ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ದೇಸಿ ತಳಿಗಳ ಅಭಿವೃದ್ದಿ ಮಾಡುವುದು ಸೂಕ್ತವಾಗಿದ್ದು ಜೇನು ಕೃಷಿಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ, ಕೃಷಿ ವಿಜ್ಞಾನ ಕೇಂದ್ರದಲ್ಲೂ ಪಶು ವೈದ್ಯರನ್ನು ನಿಯೋಜಿಸಲು ಸೂಚಿಸಲಾಗುವುದು. ರೈತರಿಗೆ ಮಾರುಕಟ್ಟೆ ವ್ಯವಸ್ಥೆ, ವಿವಿಧ ಬೆಳೆಗಳಿಗೆ ರೋಗ ಮೊದಲಾದ ಸಮಸ್ಯೆಗಳು ಕೇಳಿಬಂದಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದರು.

ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಮಾತನಾಡಿ, ರೇಷ್ಮೆ ಕೃಷಿ ಲಾಭದಾಯಕವಾಗಿದ್ದು ರೇಷ್ಮೆ ಇಲಾಖೆಯಿಂದ ಯಂತ್ರೋಪಕರಣಗಳಿಗೆ ಹೆಚ್ಚಿನ ಸಹಾಯಧನ ದೊರೆಯಲಿದೆ. ಹಿಪ್ಪು ನೇರಳೆ ಬೇಸಾಯವೂ ಲಾಭದಾಯಕವಾಗಿದೆ. ಈ ಕುರಿತು ರೈತರಿಗೆ ಕಾರ್ಯಾಗಾರ ನಡೆಸಲಾಗುವುದು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಪಿ. ಮಲ್ಲಿಕಾರ್ಜುನ ಗೌಡ ಕೃಷಿ ವಿಜ್ಞಾನ ಕೇಂದ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ, 2012ರಲ್ಲಿ ವಲಯ ಅತ್ಯುತ್ತಮ ಕೇಂದ್ರ ಹಾಗೂ 2014ರಲ್ಲಿ ರಾಷ್ಟ್ರಮಟ್ಟದ ಉತ್ತಮ ಕೇಂದ್ರ ಪ್ರಶಸ್ತಿ ಗಳಿಸಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಿಸಲಾಗಿರುವ ಕೊಳವೆ ಬಾವಿ ಮರುಪೂರಣ ಮಾದರಿಯನ್ನು ಸಚಿವರು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಆವರಣದಲ್ಲಿ ಸಸಿ ನೆಡಲಾಯಿತು.

ಕೃಷಿ ವಿ.ವಿ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ನಿರ್ದೇಶಕ ಡಾ.ಎಂ.ಜೆ. ಚಂದ್ರೇಗೌಡ, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ನಾರಾಯಣಪ್ಪ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಬಿ.ಮಂಜುನಾಥ್, ಡಾ. ವೀರನಾಗಪ್ಪ, ಡಾ.ಚೈತ್ರ, ಬಿ.ವಿ. ಮಂಜುಳಾ ರೈತರಾದ ಅಶ್ವತ್ಥನಾರಾಯಣ್, ರವಿಕುಮಾರ್, ಲಕ್ಷ್ಮೀನಾರಾಯಣ ಗೌಡ, ಮೋಹನ್ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT