ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ವೈಪರೀತ್ಯದಿಂದ ಅವಸಾನ: ಅಳಿವಿನಂಚಿಗೆ ವಲಸೆ ಕೀಟ ಏರೋಪ್ಲೈನ್‌ ಚಿಟ್ಟೆ

ಅತಿ ದೊಡ್ಡ ವಲಸೆ ಕೀಟ
Last Updated 24 ನವೆಂಬರ್ 2021, 7:36 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಮಳೆಗಾಲದ ಹಚ್ಚ ಹಸಿರಿನ ಬೆಳೆ ನಡುವೆ ಬಣ್ಣ ಬಣ್ಣದ ಏರೋಪ್ಲೈನ್‌ ಚಿಟ್ಟೆಗಳ ಹಾರಾಟ ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ಸಂಜೆ ಸಮಯ ಚಿಟ್ಟೆಗಳ ಹಾರಾಟ ನೋಡುತ್ತಾ ಹಿಡಿಯುವುದು ಮಕ್ಕಳಿಗೂ ಆಟ.

ಏರೋಪ್ಲೈನ್‌ಚಿಟ್ಟೆ ಸಾಮಾನ್ಯವಾಗಿ ಮಳೆಗಾಲ ಹಾಗೂ ಚಳಿಗಾಲದವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. (ಆಗಸ್ಟ್‌ ನಿಂದ ಡಿಸೆಂಬರ್) ನಂತರದ ಸಮಯದಲ್ಲೂ ಕೆಲವೊಂದು ಪ್ರಬೇಧದ ಏರೋಪ್ಲೈನ್‌ ಚಿಟ್ಟೆ ಕಾಣಬಹುದು.

‘ವಾಂಡೆರಿಂಗ್ ಗ್ಲಯಿಡರ್ ಎಂಬ ಏರೋಪ್ಲೈನ್ ಚಿಟ್ಟೆ ಪೂರ್ವ ಆಫ್ರಿಕಾದಿಂದ ಮಧ್ಯ ಏಷ್ಯಾ, ಮಧ್ಯ ಏಷ್ಯಾದಿಂದ ಉತ್ತರ ಭಾರತದ ಮೂಲಕ ದಕ್ಷಿಣ ಭಾರತ ಪ್ರವೇಶಿಸುತ್ತದೆ. ಮಳೆಗಾಲದ ಅಂತ್ಯಕ್ಕೆ ಸತತ 8 ರಿಂದ 10ದಿನಗಳ ಹಾರಾಟದಲ್ಲಿ ಹಿಂದೂ ಮಹಾಸಾಗರ ದಾಟಿ ಪೂರ್ವ ಆಫ್ರಿಕಾ ಸೇರುತ್ತದೆ.

ಈ ಇಡೀ ಪಯಣದಲ್ಲಿ ಒಟ್ಟು 15ರಿಂದ 18ಸಾವಿರ ಕಿ.ಮೀ ಸಾಗುತ್ತದೆ. ಪ್ರಯಾಣದಲ್ಲಿ ಶಕ್ತಿ ಉಳಿಸಿಕೊಳ್ಳಲು ಶೇ80ರಷ್ಟು ಗಾಳಿಯಲ್ಲಿ ತೇಲಿ ಅವಶ್ಯವಿದ್ದಲ್ಲಿ ಹಾರುತ್ತಾ ಗಾಳಿ ದಿಕ್ಕು ಅವಲಂಬಿಸಿರುತ್ತದೆ. ಹಲವು ಚಿಟ್ಟೆ ಹಾಗೂ ಇತರ ಕೀಟಗಳೂ ವಲಸೆ
ಹೋಗುತ್ತವೆ.

ಆದರೆ, ಈ ಏರೋಪ್ಲೈನ್ ಚಿಟ್ಟೆ ವಲಸೆ ಕೀಟ ಪ್ರಪಂಚದ ಅತಿ ದೊಡ್ಡ ವಲಸೆ ಇದಾಗಿದೆ. ಸಮುದ್ರ ದಾಟುವ ಮಾರ್ಗದಲ್ಲಿ 8ರಿಂದ 10 ದಿನ ಆಹಾರ ಇಲ್ಲದೆ ಸಾಗುತ್ತವೆ ಮತ್ತು ಕೆಲವೊಂದು ವಲಸೆ ಹಕ್ಕಿಗಳಿಗೆ ಆಹಾರವಾಗುತ್ತವೆ ಎನ್ನುತ್ತಾರೆ ಏರೋಪ್ಲೈನ್‌ ಚಿಟ್ಟೆಗಳ ಅಧ್ಯಯನಕಾರ, ಛಾಯಾಗ್ರಾಹಕ ವೈ.ಟಿ.ಲೋಹಿತ್‌. ಹಾರುತ್ತಲೆ ಆಹಾರ ಹಿಡಿಯುವ ಏರೋಪ್ಲೈನ್‌ ಚಿಟ್ಟೆ ಸೊಳ್ಳೆ, ಕೆಲವೊಮ್ಮೆ ಚಿಟ್ಟೆ, ಪತಂಗ, ಸಣ್ಣ ಕೀಟಗಳು ಹಾಗೂ ತನಗಿಂತ ಚಿಕ್ಕ ಏರೋಪ್ಲೈನ್ ಚಿಟ್ಟೆಗಳನ್ನು ತಿನ್ನುತ್ತವೆ. ಶಕ್ತಿಯುತ ರೆಕ್ಕೆ, ಹಾರುವ ವೇಗ, ಶೀಘ್ರವಾಗಿ ದಿಕ್ಕು ಬದಲಿಸುವುದು ಹಾಗೂ ಹಾರುತ್ತಲೆ ಒಂದೇ ಜಾಗದಲ್ಲಿ ತೆಲುವ ಗುಣ ಒಳ್ಳೆಯ ಬೇಟೆಗಾರನನ್ನಾಗಿಸಿದೆ. ಗಂಡು ಹುಳುಗಳಲ್ಲಿ ಬಣ್ಣ ವೈವಿಧ್ಯ ಹೆಚ್ಚು.

ಸಮಸ್ಯೆಯ ಸುಳಿ
ಬದಲಾಗಿರುವ ಆಧುನಿಕ ಕೃಷಿ ಹಾಗೂ ಕೈಗಾರಿಕಾ ವಲಯಗಳ ಬೆಳವಣಿಗೆಯಿಂದಾಗಿ ಹವಾಮಾನ ಬದಲಾವಣೆ ಸೇರಿದಂತೆ ಹಲವು ಕಾರಣಗಳಿಂದಾಗಿ ಇತರ ಕೀಟಿಗಳಂತೆ ಏರೋಪ್ಲೈನ್‌ ಚಿಟ್ಟೆ ಕೂಡ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿವೆ. ಹೀಗಾಗಿಯೇ ಭಾರತದಲ್ಲಿ 487 ಪ್ರಭೇದದ ಏರೋಪ್ಲೈನ್‌ ಚಿಟ್ಟೆಗಳಲ್ಲಿ 25 ಪ್ರಭೇದಗಳು ಅಪಾಯದ ಹಾಗೂ ಅಳಿವಿನ ಅಂಚಿಗೆ ತಲುಪಿದೆ. ಇತರೆ ಪ್ರಬೇಧಗಳ ಸಂಖ್ಯೆಯಲ್ಲೂ ಗಣನೀಯ ಇಳಿಮುಖವಾಗಿವೆ ಎನ್ನುವ ವೈ.ಟಿ.ಲೋಹಿತ್‌, ಬೃಹತ್‌ ಜಲಾಶಯಗಳ ನಿರ್ಮಾಣ, ಬರಿದಾಗುತ್ತಿರುವ ಜಲಮೂಲ, ಹದಗೆಡುತ್ತಿರುವ ನೀರಿನ ಗುಣಮಟ್ಟ, ಅತಿಯಾದ ನಗರೀಕರಣ, ಅವೈಜ್ಞಾನಿಕ ಕೆರೆ ಅಭಿವೃದ್ಧಿ ಯೋಜನೆ, ಅರಿವು ಹಾಗೂ ಅಧ್ಯಯನಗಳ ಕೊರತೆ ಮುಖ್ಯವಾಗಿವೆ ಎನ್ನುತ್ತಾರೆ.

ಏರೋಪ್ಲೈನ್‌ ಚಿಟ್ಟೆ ಸೊಳ್ಳೆ ಭಕ್ಷಕ ಎಂಬ ಖ್ಯಾತಿ ಹಾಗೂ ಇತರೆ ಕೀಟಗಳ ನಿಯಂತ್ರಣ, ಆಹಾರ ಸರಪಳಿ ಭಾಗ- ಪಕ್ಷಿಗಳು,ಮೀನು, ಕಪ್ಪೆ, ಹಲ್ಲಿಗಳು ಹಾಗೂ ಕೆಲವೊಂದು ಸಸ್ತನಿಗಳಿಗೆ ಆಹಾರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT