ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕನ್ನಡ ಬಳಕೆ ಜಾಗೃತಿ ಅಭಿಯಾನ

Published 16 ಮಾರ್ಚ್ 2024, 2:58 IST
Last Updated 16 ಮಾರ್ಚ್ 2024, 2:58 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಎನ್ನುವ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸಲಾಯಿತು.

ನಗರದಲ್ಲಿನ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಬ್ಯಾಂಕ್‌ ಮತ್ತಿತರೆ ಕಡೆ ಕರಪತ್ರ ನೀಡುವ ಮೂಲಕ ಕನ್ನಡ ನಾಮಫಲಕಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎ.ನಂಜಪ್ಪ, ತಾಲೂಕು ಅಧ್ಯಕ್ಷ ನಾಗರಾಜು ಮಾತನಾಡಿ, ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ರಾಜ್ಯದ, ಹಲವು ಭಾಷೆಯ ಎಲ್ಲ ಧರ್ಮದ ಜನರು ಇಲ್ಲಿ ತಮ್ಮ ಜೀವನೋಪಾಯಕ್ಕೆ ಒಂದಲ್ಲ ಒಂದು ರೀತಿಯ ಉದ್ಯೋಗ ಮಾಡಿಕೊಂಡಿದ್ದಾರೆ. ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡ ಕಾರ್ಮಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೈಗಾರಿಕಾ ನಿಯಮದ ಪ್ರಕಾರ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗಗಳು ಅನ್ಯ ರಾಜ್ಯದವರ ಪಾಲಾಗುತ್ತಿವೆ. ಇಲ್ಲಿ ಬಂದು ನೆಲೆಸಿರುವ ಬೇರೆ ರಾಜ್ಯದ ಜನ ಇಲ್ಲಿಯ ಭಾಷೆ, ಸಂಸ್ಕೃತಿ, ನೆಲ, ಜಲಕ್ಕೆ ಗೌರವ ಕೊಡುವುದು ಅವರ ಕರ್ತವ್ಯ. ಆದರೆ ಸ್ಥಳೀಯ ರಾಜಕೀಯ ನಾಯಕರ ಅಧಿಕಾರದ ಲಾಲಾಸೆಗೆ ನಾಡು, ನುಡಿ, ಜಲ, ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸಿದವರು, ಊರಿಗೆ ಏನು ಮಾಡಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಹೊರಡಿಸಿದ ನಾಮಫಲಕಗಳಲ್ಲಿ ಕನ್ನಡ ಭಾಷೆ ಶೇ 60ರಷ್ಟು ಕಡ್ಡಾಯ ಪಾಲನೆ ಮಾಡದವರ ವಿರುದ್ಧ ನಗರಸಭೆ ಅಧಿಕಾರಿಗಳು ಅಂಗಡಿ ಪರವಾನಗಿ ಅಥವಾ ನವೀಕರಣ ಮಾಡುವಾಗ ಕನ್ನಡ ಕಡ್ಡಾಯದ ನಿಯಮ ತಿಳಿಸಬೇಕು. ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

15 ದಿನಗಳ ಗಡುವು: ಕನ್ನಡಿಗರು ನಿಸ್ಸಹಾಯಕರು ಎಂದು ಅನ್ಯಭಾಷಿಕರು ತಮ್ಮ ಅಟ್ಟಹಾಸ ಮುಂದುವರಿಸಿದ್ದಾರೆ. ನಾಮಫಲಕಗಳಲ್ಲಿ ಸಂಪೂರ್ಣ ಕನ್ನಡ ಬಳಕೆ ಮಾಡಿದವರಿಗೆ ಅಭಿನಂದನೆ ತಿಳಿಸಿದ ಸಂಘಟನೆಗಳ ಮುಖಂಡರು, ನಿಯಮ ಪಾಲಿಸದವರಿಗೆ ಹದಿನೈದು ದಿನಗಳ ಕಾಲಾವಕಾಶ ನೀಡಿದ್ದಾರೆ. ನಿಯಮ ಪಾಲಿಸದೇ ಇದ್ದರೆ ಕಾನೂನು ಮೂಲಕ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದರು.

ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತರದಾಳ ಶ್ರೀನಿವಾಸ್, ಉಪಾಧ್ಯಕ್ಷ ನಯಾಜ್ ಖಾನ್‌, ಕಾರ್ಮಿಕ ಘಟಕದ ಗಂಗರಾಜು, ಸಂಘಟನೆಗಳ ಮುಖಂಡ ಹರಿಕುಮಾರ್, ಪ್ರವೀಣ್‌ಕುಮಾರ್, ಗೌರಮ್ಮ, ಕುಮುದಾ, ನಂದಿನಿ, ದರ್ಶನ್, ವಿಶ್ವನಾಥ್, ಗಿರೀಶ್, ಮಹೇಶಪ್ಪ, ಭವಿಷ್ಯತ್, ಮಂಜುನಾಥ್‌, ಕೆಂಪೇಗೌಡ, ರಾಜು ಸಣ್ಣಕ್ಕಿ, ಶಿವಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT