ಮಂಗಳವಾರ, ನವೆಂಬರ್ 24, 2020
26 °C
ರಾಜ್ಯೋತ್ಸವದ ಸಡಗರ

ಕನ್ನಡ ನಾಡಿನ ಅಭಿವೃದ್ಧಿಗೆ ಸಾಹಿತಿ, ಕವಿಗಳ ಕೊಡುಗೆ ಅನನ್ಯ: ಆರ್‌. ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ಹಲವು ಮಹನೀಯರ ನಿರಂತರ ಹೋರಾಟದ ಫಲವಾಗಿ ಏಕೀಕೃತ ಕರ್ನಾಟಕ ರಾಜ್ಯ ಉದಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಗ್ರಾಮಾಂತರ ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಜಿಲ್ಲಾಮಟ್ಟದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಏಕೀಕರಣ ಹೋರಾಟವನ್ನು ಆರಂಭಿಸಿದರು. ನಂತರ ಸಾಹಿತಿಗಳು, ಕವಿಗಳು, ದಾರ್ಶನಿಕರು, ಚಿಂತಕರು ಕನ್ನಡ ಚಳವಳಿಗಾರರ ಹೋರಾಟದ ಫಲವಾಗಿ ಅಖಂಡ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ರಾಜ್ಯದ ಸರ್ವಾಂಗೀಣ ಪ್ರಗತಿಗೆ ಭದ್ರ ಬುನಾದಿ ಹಾಕಿದ ಮುಖ್ಯಮಂತ್ರಿಯಾಗಿದ್ದ ದಿ. ದೇವರಾಜ ಅರಸು ಗಟ್ಟಿ ನಿರ್ಧಾರ ತಳೆದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ನಾಮಕರಣ ಮಾಡಿದರು ಎಂದು ಹೇಳಿದರು.

ಕನ್ನಡ ಭಾಷೆ, ಸಂಸ್ಕೃತಿ, ಜನಪದ ಭಾರತದ ಅತಿ ಪ್ರಾಚೀನ ಪರಂಪರೆಗಳಲ್ಲಿ ಒಂದಾಗಿದೆ. ದಾಸರು, ಶರಣರು, ವಿಚಾರವಾದಿಗಳು ನಾಡಿನ ಕಲೆ, ಸಾಹಿತ್ಯ, ಸಂಗೀತವನ್ನು ಶ್ರೀಮಂತಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ನಾಡಿನ ಕಲೆ, ವಾಸ್ತುಶಿಲ್ಪಕ್ಕೆ ಕನ್ನಡಿಗರು ಅಪಾರ ಕೊಡುಗೆ ನೀಡಿದ್ದಾರೆ. ಹಂಪಿ, ಐಹೊಳೆ, ಬಾದಾಮಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಸೋಮನಾಥಪುರದ ದೇಗುಲಗಳು ವಿಶ್ವಖ್ಯಾತಿ ಪಡೆದಿವೆ ಎಂದರು.

ಗಂಗವಾಡಿಯ ಭಾಗವಾಗಿದ್ದು ದೇವನಹಳ್ಳಿಯು ರಾಷ್ಟ್ರಕೂಟರು, ನೊಳಂಬರು, ಪಲ್ಲವರು, ಚೋಳರು, ಹೊಯ್ಸಳರು, ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ನಾಡಪ್ರಭು ರಣಭೈರೇಗೌಡನ ಮಗ ಮಲ್ಲ ಭೈರೇಗೌಡ ದೇವನಹಳ್ಳಿ ಎಂದು ಕರೆಯುವ ದೇವನದೊಡ್ಡಿಯಲ್ಲಿ 1501ರಲ್ಲಿ ಮಣ್ಣಿನ ಕೋಟೆ ನಿರ್ಮಿಸಿದ. ನಂತರ ಅದು ಕಲ್ಲಿನಕೋಟೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಕನ್ನಡ ಭಾಷಾಭಿಮಾನಿ ಎಂದು ಹೆಮ್ಮೆಯಿಂದ ಹೇಳುವ ನಾವುಗಳು ಕ್ರಮಬದ್ಧವಾದ ಕನ್ನಡ ಬಳಕೆ ಮತ್ತು ಭಾಷಣದ ನೀತಿಯಲ್ಲಿ ಹಿಂದುಳಿದಿದ್ದೇವೆ. ಕನ್ನಡ ರಾಜ್ಯೋತ್ಸವದ ಬಗ್ಗೆ ಬದ್ಧತೆ ಕಡಿಮೆಯಾಗುತ್ತಿದೆ. ಮುಂದೊಂದು ದಿನ ಇಂಗ್ಲಿಷ್ ರಾಜ್ಯೋತ್ಸವ ಆಗುವುದಕ್ಕೂ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

‘ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ನಿಧನ ಹೊಂದಿದ್ದಾರೆ. ರಾಜ್ಯೋತ್ಸವ
ದಲ್ಲಿ ಮೌನಾಚರಣೆ ಮಾಡಿ ಅವರಿಗೆ ಗೌರವ ಸಲ್ಲಿಸುವ ಕೆಲಸ ಜಿಲ್ಲಾಡಳಿತದಿಂದ ನಡೆದಿಲ್ಲ. ಅವರು ಹುಟ್ಟಿದ್ದು ದೇವನಹಳ್ಳಿ ಎಂಬುದನ್ನು ಯಾರು ಮರೆಯುವಂತಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯ ಪ್ರಭಾರ ಅಧ್ಯಕ್ಷೆ ಕನ್ಯಾಕುಮಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವೈ.ಎನ್. ಶಶಿಕಲಾ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯ್ಕ, ಜಿಲ್ಲಾ ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ. ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣ
ನವರ್, ತಹಶೀಲ್ದಾರ್ ಅಜಿತ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥ್ ನಾರಾಯಣ ಹಾಜರಿದ್ದರು.

ಪ್ರಮೀಳಾ ಮಹಾದೇವ್, ಕೆ. ನಾಗರತ್ನಮ್ಮ, ಕು. ಗಾನಶ್ರೀ, ಶ್ರೀರಾಮಯ್ಯ, ರಾಮೇಗೌಡ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಮತ್ತು ಕನ್ನಡ ಪ್ರಥಮ ಭಾಷೆಯಲ್ಲಿ ಶೇಕಡ 100ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ
ಸನ್ಮಾನಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು