ಖಾಲಿಪಾಳ್ಯ ಸರ್ಕಾರಿ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

ಶನಿವಾರ, ಏಪ್ರಿಲ್ 20, 2019
27 °C
ಪೋಷಕರು ಖಾಸಗಿ ಶಾಲೆಗಳ ಬದಲು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮನವಿ

ಖಾಲಿಪಾಳ್ಯ ಸರ್ಕಾರಿ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ

Published:
Updated:
Prajavani

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಮಾತ್ರವಲ್ಲ ಶಾಲಾ ಆವರಣವನ್ನು ಸಲ್ಲದ ಚಟುವಟಿಕೆಗಳಿಗೆ ಬಳಸಿಕೊಳ್ಳುವವರೂ ಇದ್ದಾರೆ. ಅದೆಷ್ಟೋ ಶಾಲೆಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಂತಹುದೇ ಸಮಸ್ಯೆ ಸಾಸಲು ಹೋಬಳಿಯ ಖಾಲಿಪಾಳ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕಾಡುತ್ತಿತ್ತು. ಬಿಬಿಎಂಪಿ ವ್ಯಾಪ್ತಿಯ ಕಸದ ರಾಶಿ ಈ ಶಾಲೆಯ ಪಕ್ಕದಲ್ಲೇ ಬಂದು ಬೀಳುತ್ತಿದೆ. ಇವೆಲ್ಲವುಗಳ ಮಧ್ಯೆ ಇಂದು ಈ ಶಾಲೆ ಜಿಲ್ಲಾ ಮಟ್ಟದಲ್ಲಿ ‘ಪರಿಸರ ಮಿತ್ರ ಶಾಲೆ’ ಎಂದು ಪ್ರಥಮ ಬಹುಮಾನ ಪಡೆದಿದೆ .

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರತಿ ವರ್ಷ ಮಾರ್ಚ್‌ ತಿಂಗಳಲ್ಲಿ ಜಿಲ್ಲಾ ಮಟ್ಟದ ಒಂದು ಶಾಲೆಗೆ ಪರಿಸರ ಮಿತ್ರ ಶಾಲಾ ಪ್ರಶಸ್ತಿ (₹ 30 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ) ಹತ್ತು ಶಾಲೆಗಳಿಗೆ ಹಸಿರು ಶಾಲೆ ಪ್ರಶಸ್ತಿ (₹ 5 ಸಾವಿರ  ನಗದು ಹಾಗೂ ಪ್ರಶಸ್ತಿ ಪತ್ರ) ಹತ್ತುಶಾಲೆಗಳಿಗೆ ಹಳದಿ ಶಾಲೆ ಪ್ರಶಸ್ತಿ ( ₹ 4 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ) ಮತ್ತು ಹತ್ತು ಶಾಲೆಗಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸುತ್ತದೆ.

2018-19ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿಯನ್ನು ಖಾಲಿಪಾಳ್ಯ ಸರ್ಕಾರಿ ಶಾಲೆ ತನ್ನ ಮುಡಿಗೇರಿಸಿಕೊಂಡಿದ್ದು ₹ 30 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಸೇರಿ ಒಟ್ಟು 100 ಶಾಲೆಗಳು  ಭಾಗವಹಿಸಿದ್ದವು. ಇದರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲ ಮಾನದಂಡಗಳ ಪರೀಕ್ಷೆಯಲ್ಲೂ ಖಾಲಿಪಾಳ್ಯ ಸರ್ಕಾರಿ ಶಾಲೆ ಉತ್ತೀರ್ಣಗೊಂಡಿದೆ.

ಎಲ್ಲ ಸರ್ಕಾರಿ ಶಾಲೆಗಳಂತೆ ಖಾಲಿಪಾಳ್ಯ ಶಾಲೆಯು ಸಹ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದೆ. ಆದರೆ ಕಲಿಕೆಯ ಗುಣಮಟ್ಟ, ಉತ್ತಮ ಪರಿಸರ, ಸೌಲಭ್ಯಗಳಲ್ಲಿ ಮುಂಚೂಣಿಯಲ್ಲಿದೆ. 1 ರಿಂದ 5ನೇ ತರಗತಿವರೆಗೆ 12 ಜನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕನ್ನಡ ಮಾಧ್ಯಮವನ್ನು ಒಳಗೊಂಡಂತೆ 1ನೇ ತರಗತಿಯಿಂದಲೇ ಇಂಗ್ಲಿಷ್‌ ಕಲಿಕೆಯನ್ನು ಸಹ ಇಲ್ಲಿ ಕಲಿಸಲಾಗುತ್ತದೆ.

‘ನಾವು ಶಿಕ್ಷಕರ ತರಬೇತಿಯನ್ನು ಸಿದ್ಧಗಂಗಾ ಮಠದ ಕಾಲೇಜಿನಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಮೇಲ್ವಿಚಾರಣೆಯಲ್ಲಿ ಕಲಿತಿದ್ದೇವೆ. ಸ್ವಾಮೀಜಿಗಳು ಪ್ರತಿದಿನ ಪ್ರಾರ್ಥನೆ ವೇಳೆಯಲ್ಲಿ ಅನ್ನ, ವಿದ್ಯೆಯ ಮಹತ್ವವನ್ನು ಹೇಳುತ್ತಿದ್ದರು. ಹೀಗಾಗಿ ನಮ್ಮ ಮಕ್ಕಳ ಕಲಿಕೆಗೆ ನೀಡಿದಷ್ಟೇ ಮಹತ್ವವನ್ನು ಶಾಲೆಯಲ್ಲಿನ ಪ್ರತಿ ಮಗುವಿನ ಕಲಿಕೆಗೂ ನೀಡುತ್ತಿದ್ದೇವೆ’ ಎಂದು ಶಿಕ್ಷಕ ಎನ್‌.ಸಿದ್ದರಾಮಪ್ಪ ಹಾಗೂ ಎನ್‌.ರಾಮಕೃಷ್ಣಯ್ಯ ಹೇಳಿದರು.

‘ಇದರ ಫಲವಾಗಿಯೇ ನಮ್ಮ ಶಾಲೆಯ 15 ಜನ ವಿದ್ಯಾರ್ಥಿಗಳು 5ನೇ ತರಗತಿಯ ನಂತರ ಮೊರಾರ್ಜಿ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ. ಅವರ ಉನ್ನತ ವ್ಯಾಸಂಗಕ್ಕೆ ಇದು ಸಹಕಾರಿಯಾಗಿದೆ. ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುವುದನ್ನು ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು’ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮಾತ್ರ ಮೊರಾರ್ಜಿ ವಸತಿ ಶಾಲೆಯ 6ನೇ ತರಗತಿಗೆ ದಾಖಲಾತಿ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ 2016–17ರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಲತಾಶ್ರೀ, 2017–18ರಲ್ಲಿ ಎನ್‌.ಕಾವ್ಯ ಜಿಲ್ಲೆಗೆ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಇದು ನಮ್ಮ ಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ’ ಎನ್ನುತ್ತಾರೆ ಶಿಕ್ಷಕರು.

‘1ನೇ ತರಗತಿಯಿಂದಲೇ ಮಕ್ಕಳಿಗೆ ಇಂಗ್ಲಿಷ್‌ ಪಾಠ ಓದುವುದನ್ನು ಕಲಿಸುತ್ತೇವೆ. 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್‌ ಜೊತೆಗೆ ಹಿಂದಿಯನ್ನೂ ಅಭ್ಯಾಸ ಮಾಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.

‘ಶಾಲಾ ಕಟ್ಟಡ ಹಾಗೂ ಶಾಲಾ ಆವರಣ ಚಿಕ್ಕದಾಗಿದೆ. ಆದರೆ ಇಡೀ ಶಾಲೆಯ ವಾತಾವರಣ ಹಸಿರು ತಂಪಿನಿಂದ ಕೂಡಿದೆ. ಕಲಿಕೆಯ ಜೊತೆಗೆ ಶಾಲಾ ಆವರಣದಲ್ಲಿನ ಕೈ ತೋಟದಲ್ಲಿ ಮಕ್ಕಳಿಗೆ ಸಸಿಗಳ ಆರೈಕೆ, ಅವುಗಳ ಪೋಷಣೆಯನ್ನು ಹೇಳಿಕೊಡುತ್ತೇವೆ. ಇದರಿಂದಾಗಿ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಯಲು, ನೆಲ, ಜಲ, ಗಾಳಿ, ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸುವ ಅರಿವು ಮೂಡುತ್ತದೆ’ ಎನ್ನುವುದು ಶಿಕ್ಷಕರ ಆಶಯ.

‘ನಮ್ಮ ಶಾಲೆಯ ಪ್ರಗತಿಯಲ್ಲಿ ಎಸ್‌ಡಿಎಂಸಿ ಸದಸ್ಯರ ಸಹಕಾರವೂ ಇದೆ. ಅಪ್ಪಗೌಡನಪಾಳ್ಯ ಗ್ರಾಮದ ಸಿದ್ದರಾಮಯ್ಯ ಅವರು 15 ವರ್ಷಗಳಿಂದಲೂ ಶಾಲೆಯಲ್ಲಿನ ಎಲ್ಲ ಮಕ್ಕಳಿಗೂ ಅಗತ್ಯ ಇರುವಷ್ಟು ನೋಟ್‌ ಬುಕ್ಸ್‌ಗಳನ್ನು ಕೊಡುಗೆಯಾಗಿ ಕೊಡಿಸುತ್ತಿದ್ಧಾರೆ. ಹಾಗೆಯೇ ಮಧ್ಯಾಹ್ನದ ವೇಳೆ ಊಟದೊಂದಿಗೆ ಮಜ್ಜಿಗೆಯನ್ನು ನೀಡುತ್ತಾರೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !