ಭಾನುವಾರ, ಸೆಪ್ಟೆಂಬರ್ 20, 2020
21 °C
ರಾಜ್ಯಮಟ್ಟದ ಸ್ಕೌಟ್ಸ್‌ ಮತ್ತು ಗೈಡ್ಸ್ ಪೂರ್ವ ಸಿದ್ಧತಾ ಶಿಬಿರ

‘ನೈತಿಕತೆ ನೀಡುವುದೇ ಶಿಕ್ಷಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದೊಡ್ಡಬಳ್ಳಾಪುರ: ‘ಉತ್ತಮ ಸಮಾಜ ನಿರ್ಮಾಣಕ್ಕೆ ಸೇವಾಗುಣ ಬೆಳಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರ ನೀಡಬೇಕಿರುವ ತಂದೆ - ತಾಯಿಗೆ ಕಾಳಜಿ ಮಾಡಲು ಸಮಯವಿಲ್ಲ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ’ಎಂದು ರಾಜ್ಯಸಭಾ ಮಾಜಿ ಸದಸ್ಯ ಎಚ್.ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

ಬೆಸೆಂಟ್‍ಪಾರ್ಕ್‍ನಲ್ಲಿ ನಡೆದ ರಾಜ್ಯಮಟ್ಟದ ರಾಷ್ಟ್ರಪತಿ ಸ್ಕೌಟ್ಸ್‌ ಮತ್ತು ಗೈಡ್ಸ್ ಪೂರ್ವ ಸಿದ್ಧತಾ ಶಿಬಿರ, ಶಿಕ್ಷಕ-ಶಿಕ್ಷಕಿಯರ ತರಬೇತಿ ಹಾಗೂ ದಿವಂಗತ ಕೊಂಡಜ್ಜಿ ಬಸಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶಾಲಾ ಶಿಕ್ಷಣದ ಜತೆಗೆ ಸಾಮಾಜಿಕ ಶಿಕ್ಷಣದ ಅಗತ್ಯ ಹೆಚ್ಚಿದೆ. ಮನುಷ್ಯನನ್ನು ಮನುಷ್ಯನಾಗಿ ನೋಡುವ, ಸ್ವೀಕರಿಸುವ ಮತ್ತು ಪ್ರತಿಕ್ರಿಯಿಸುವ ಸಹಜ ಸಂವೇದನೆ ಅಗತ್ಯವಾಗಿದೆ. ಸ್ವಯಂ ವಿಕಾಸದಿಂದ ಸಮಾಜದ ವಿಕಾಸ ಹಾಗೂ ಬದಲಾವಣೆ ಸಾಧ್ಯ’ಎಂದು ಅಭಿಪ್ರಾಯಪಟ್ಟರು.

‘ಶಿಬಿರಗಳು ಸತ್ಪ್ರಜೆಗಳನ್ನು ರೂಪಿಸುವ ತಾಣಗಳಾಗಬೇಕು. ಎಲ್ಲರೊಂದಿಗೆ ಬದುಕುವ ನೈತಿಕತೆ ನೀಡುವುದೇ ಶಿಕ್ಷಣ. ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ‍‍ಪಾಲ್ಗೊಂಡರೆ ನಡವಳಿಕೆ, ಆಚಾರ-ವಿಚಾರ ಕಲಿಯಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ಪರಿಪಕ್ವಗೊಳಿಸಿಕೊಳ್ಳಲು ಶಿಬಿರಗಳು ಆಧಾರಸ್ತಂಭ’ ಎಂದು ಹೇಳಿದರು.

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಮಾತನಾಡಿ,‘ರಾಜ್ಯದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್ ಅನ್ನು ಶಿಸ್ತುಬದ್ಧವಾಗಿ ರೂಪಿಸಿ ದೇಶದ ಗಮನ ಸೆಳೆದ ಕೊಂಡಜ್ಜಿ ಬಸಪ್ಪ ಆದರ್ಶರಾಗಬೇಕು. ಅವರು ಹಲವು ಸ್ವಯಂ ಉದ್ಯೋಗ ಕೇಂದ್ರಗಳಿಗೆ ಒತ್ತಾಸೆ ನೀಡಿದರು. ಇಂದಿನ ಪಂಚಾಯತ್ ರಾಜ್ ವ್ಯವಸ್ಥೆ ಅನುಷ್ಠಾನದಲ್ಲಿ ಅವರ ಚಿಂತನೆ ಅಡಗಿದೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಕೊಂಡಜ್ಜಿ ಬ.ಷಣ್ಮುಖಪ್ಪ, ಮಕ್ಕಳ ಹೃದ್ರೋಗ ತಜ್ಞರಾದ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಗೈಡ್ಸ್ ರಾಜ್ಯ ಆಯುಕ್ತ ಗೀತಾ ನಟರಾಜ್, ಜಂಟಿ ಕಾರ್ಯದರ್ಶಿ ಬಿ.ವಿ.ರಾಮಲತಾ, ರಾಜ್ಯ ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಚಲ್ಲಯ್ಯ, ಬಿ.ಡಿ.ಶಾಂತ, ಅರುಣಮಾಲಾ, ಶಿಬಿರದ ನಾಯಕರಾದ ಎಸ್.ವೀರಪ್ಪ ಉಗಾಂಡ, ಮೈಥಿಲಿರಾವ್ ಇದ್ದರು.

ಶಿಬಿರದಲ್ಲಿ ರಾಜ್ಯದ 16 ಜಿಲ್ಲೆಗಳ 405 ಸ್ಕೌಟ್ಸ್‌ ಮತ್ತು 313 ಗೈಡ್ಸ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.