ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತಕ್ಕೆ ದುಡಿದ ನಾಗರಾಜ್- ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ

Last Updated 1 ನವೆಂಬರ್ 2021, 4:10 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಎಲ್ಲಾ ಕ್ಷೇತ್ರಗಳಲ್ಲಿ ಯಾಂತ್ರೀಕರಣದ ಬಳಕೆ ಹೆಚ್ಚಾಗಿದೆ. ತಂತ್ರಜ್ಞಾನದ ಬಳಕೆಯಾಗುತ್ತಿದೆ. ಆದರೆ, ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಯಾಂತ್ರೀಕರಣದ ಬಳಕೆ ತೀರಾ ಕಡಿಮೆಯಾಗಿದೆ. ಇದರಿಂದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಯಂತ್ರ ತಯಾರಿಸಿ ಪರಿಚಯಿಸಿದ್ದು, ಇದರಿಂದ ಸಾಕಷ್ಟು ರೈತರು ಸದುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಸಿ. ನಾಗರಾಜ್ ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಯಾವುದೇ ಶಿಫಾರಸು ಇಲ್ಲದೇ ರೈತರಿಗಾಗಿ ಆವಿಷ್ಕರಿಸಿದ ಯಂತ್ರೋಪಕರಣಕ್ಕಾಗಿ ರಾಜ್ಯ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಕೆರೆಕೋಡಿ ಬಳಿ ವಾಸವಾಗಿರುವ ಅವರ ತಂದೆ ಚಿಕ್ಕಗಂಗಪ್ಪ ಶಿಕ್ಷಕರು. ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡಿರುವ ಅವರು, ಗ್ರಾಮಾಂತರ ಪ್ರದೇಶದಲ್ಲಿ ಕಳೆ ತೆಗೆಯುವುದು ಸೇರಿದಂತೆ ವಿವಿಧ ಕಸುಬುಗಳಲ್ಲಿ ಕೂಲಿಕಾರ್ಮಿಕರು ಕಷ್ಟಪಡುವುದನ್ನು ನೋಡಿ ರೈತರಿಗೆ ಉಪಯೋಗವಾಗುವಂತೆ ಏನಾದರೂ ತಯಾರು ಮಾಡಬೇಕು ಎಂದು ನಿರ್ಧರಿಸಿದರು. ಸತತವಾಗಿ 35 ವರ್ಷಗಳ ಕಾಲ ಪರಿಶ್ರಮಪಟ್ಟು ಪವರ್ ಇಂಟರ್ ಕಲ್ಟಿವೇಟರ್ ಯಂತ್ರ ತಯಾರಿಸಿದ್ದಾರೆ. ಇದು ಟ್ರ್ಯಾಕ್ಟರ್, ಟಿಲ್ಲರ್ ಹಾಗೂ ಎತ್ತುಗಳ ಉಪಯೋಗಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಉಳುಮೆ ಮಾಡಲಿಕ್ಕೆ ಸಹಕಾರಿಯಾಗಿದೆ.

‘₹ 86 ಸಾವಿರ ಬೆಲೆಯಲ್ಲಿ ರೈತರಿಗೆ ಈ ಯಂತ್ರೋಪಕರಣ ಸಿಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಡೀಸೆಲ್ ಸಹಾಯದಿಂದ ಓಡುವ ಯಂತ್ರವು 2 ಗಂಟೆಯಲ್ಲಿ ಒಂದು ಎಕರೆ ಜಮೀನನ್ನು ಸ್ವಚ್ಛಗೊಳಿಸಬಹುದು. ದಿನಕ್ಕೆ 3-4 ಎಕರೆ ಭೂಮಿಯಲ್ಲಿ ಅಂತರ ಬೇಸಾಯ ಕೈಗೊಳ್ಳಬಹುದಾಗಿದೆ. ಸರ್ಕಾರದಿಂದ ಪ್ರೋತ್ಸಾಹ ಸಿಕ್ಕರೆ ಮತ್ತಷ್ಟು ಸಬ್ಸಿಡಿ ದರದಲ್ಲಿ ರೈತರಿಗೆ ಯಂತ್ರೋಪಕರಣ ಸಿಗುವಂತಾಗಬೇಕು’ ಎಂದರು.

ಚೀನಾದಿಂದ ಉಪಕರಣಗಳನ್ನು ತರಿಸಲು ಸರ್ಕಾರ ಸಾವಿರಾರು ಕೋಟಿ ಖರ್ಚು ಮಾಡುತ್ತಿದೆ. ಇಂತಹ ಯಂತ್ರೋಪಕರಣಗಳನ್ನು ತಯಾರು ಮಾಡುವಂತಹ ಕೌಶಲವುಳ್ಳವರಿಗೆ ಪ್ರೋತ್ಸಾಹ ಮಾಡಿದರೆ, ನಾವು ಹಣ ಉಳಿತಾಯ ಮಾಡಬಹುದು. ಸ್ಥಳೀಯವಾಗಿ ನಿರುದ್ಯೋಗದ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ. ಕೃಷಿ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗೆ ಗಮನಹರಿಸುತ್ತಿರುವ ಯುವಕರನ್ನು ಕೃಷಿಯ ಕಡೆಗೆ ಸೆಳೆಯಲಿಕ್ಕೂ ಹೆಚ್ಚು ಉಪಯೋಗವಾಗುತ್ತದೆ ಎಂದುಹೇಳಿದರು.

‘ಯುವಕರನ್ನು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ಮಾಡಿದರೆ ವಿಶ್ವದಲ್ಲಿ ನಂಬರ್ ಒನ್ ಆಗಬಹುದು. ದೇಶದಲ್ಲಿ ಲಂಚಗುಳಿತನ ಕಡಿಮೆಯಾದರೆ ರೈತರು ಉಳಿಯುತ್ತಾರೆ. ಈ ವ್ಯವಸ್ಥೆ ಬದಲಾಗಬೇಕು. ನಾವು ತುಂಬಾ ಬಡತನದಿಂದ ಬಂದವರು. ಯುವಜನರು ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT