ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಪುನಶ್ಚೇತನಕ್ಕೆ ಒತ್ತಾಯ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐಎಂ ಪ್ರತಿಭಟನೆ
Last Updated 16 ಜೂನ್ 2020, 18:01 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕೋವಿಡ್-19 ನಿಯಂತ್ರಣ, ಲಾಕ್‍ಡೌನ್ ಸಂತ್ರಸ್ತರಿಗೆ ಪರಿಹಾರ, ನೇಕಾರರಿಗೆ ವಿಶೇಷ ನೆರವು, ನಗದು ವರ್ಗೀಕರಣ ಹಾಗೂ ಆರ್ಥಿಕ ಪುನಶ್ಚೇತನ ಕ್ರಮಗಳಿಗೆ ಒತ್ತಾಯಿಸಿ ಸಿಪಿಐಎಂ ವತಿಯಿಂದ ನಗರದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್.ಚಂದ್ರ ತೇಜಸ್ವಿ, ‘ಕೊರೊನಾ ಪರಿಣಾಮದಿಂದಾಗಿ ದೇಶದ ಕಾರ್ಮಿಕರು ಹಾಗೂ ದುಡಿಯುವ ವರ್ಗ ಬೀದಿಪಾಲಾಗಿದ್ದಾರೆ. ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿರುವ ಮೋದಿ ಸರ್ಕಾರ ಕಾರ್ಮಿಕರನ್ನು ಬಡ ಜನರನ್ನು ನಿರ್ಲಕ್ಷ್ಯ ಮಾಡುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದುಡಿಯುವ ವರ್ಗ ಕೆಲಸವಿಲ್ಲದೆ ಬೀದಿ ಪಾಲಾಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅಂತರರಾಜ್ಯ ಕಾರ್ಮಿಕರು ಕೆಲಸವಿಲ್ಲದೆ ನೂರಾರು ಮೈಲಿ ನಡೆದು ಹಸಿವಿನಿಂದ ಸಾವನ್ನಪ್ಪಿದ್ದಾರೆ. ಆದರೂ, ಮಾಧ್ಯಮಗಳಲ್ಲಿ ಮೋದಿ ಅವರ ಸಾಧನೆ ಗುಣಗಾನ ಮಾಡಲಾಗುತ್ತಿದೆ. ನಗರದಲ್ಲಿ ನೇಕಾರರು ಕೆಲಸವಿಲ್ಲದೆ ದಿವಾಳಿಯಾಗಿದ್ದಾರೆ. ಈ ದಿಸೆಯಲ್ಲಿ ಕೊರೊನಾ ವೈರಸ್ ಹಾವಳಿಯಿಂದ ಆದ ಲಾಕ್‌ಡೌನ್‌ನಿಂದಾಗಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವು ಅವಶ್ಯವಿದೆ. ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕಿದೆ’ ಎಂದು ಒತ್ತಾಯಿಸಿದರು.

‘ಆದಾಯ ತೆರಿಗೆ ಪಾವತಿಸುವ ಮಿತಿಗಳ ಹೊರಗಿರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ₹ 7,500ನಂತೆ 6 ತಿಂಗಳವರೆಗೆ ನಗದು ವರ್ಗಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿಯಂತೆ ಆರು ತಿಂಗಳವರೆಗೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೆಚ್ಚಿಸಿದ ಕೂಲಿಯೊಂದಿಗೆ, ನಗರದ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆ ವಿಸ್ತರಿಸಬೇಕು. ನಿರುದ್ಯೋಗಿಗಳಿಗೆ ತಕ್ಷಣವೇ ನಿರುದ್ಯೋಗ ಭತ್ಯೆ ನೀಡಬೇಕು. ಖಾಸಗೀಕರಣ ತಡೆಯಬೇಕು’ ಎಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಮುಖಂಡರಾದ ಎಸ್.ರುದ್ರಾರಾಧ್ಯ, ರೇಣುಕಾರಾಧ್ಯ, ಚೌಡಯ್ಯ, ಕೆ.ರಘುಕುಮಾರ್, ಪಿ.ಆದಿನಾರಾಯಣರೆಡ್ಡಿ, ಹರೀಂದ್ರ,ಆರ್.ಆರ್.ಮನೋಹರ್,ನರಸಿಂಹಮೂರ್ತಿ, ಬಸವರಾಜು, ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT