ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ವಿಮಾನ ನಿಲ್ದಾಣದ ಬಳಿ ರೈಲು ಸೇವೆ

Last Updated 13 ಫೆಬ್ರುವರಿ 2020, 13:51 IST
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಭುವನಹಳ್ಳಿ ರೈಲು ಮಾರ್ಗದಲ್ಲಿ ರೈಲ್ವೆ ನಿಲುಗಡೆ ಪ್ಲಾಟ್ ಫಾರಂ ನಿರ್ಮಿಸಲಾಗುತ್ತಿದ್ದು ಸಾವಿರಾರು ಉದ್ಯೋಗಿಗಳ ಪ್ರಯಾಣಕ್ಕೆ ಅನುಕೂಲವಾಗಲಿದೆ.

‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮತ್ತು ದಕ್ಷಿಣ ರೈಲ್ವೆ ವಲಯ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿರುವ ರೈಲು ನಿಲುಗಡೆ ಕೇಂದ್ರಕ್ಕೆ ಹೆಚ್ಚುತ್ತಿರುವ ಉದ್ಯೋಗಿಗಳ ಸಂಖ್ಯೆ ಒಂದೆಡೆಯಾದರೆ ಇತ್ತೀಚೆಗೆ ಎರಡನೇ ರನ್‌ವೇ ಕಾರ್ಯಾರಂಭವಾಗಿರುವುದರಿಂದ ಉದ್ಯೋಗಿಗಳ ಸಂಖ್ಯೆ ದುಪ್ಪಟ್ಟು ಆಗಲಿದೆ ಎಂಬ ಮುಂದಾಲೋಚನೆಯಿಂದ ವಿಮಾನ ನಿಲ್ದಾಣ ಆಡಳಿತ ಮಂಡಳಿ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ 2014 ರಲ್ಲಿ ರೈಲ್ವೆ ಇಲಾಖೆಯಿಂದ ಅನುಮತಿ ಪಡೆದುಕೊಂಡಿತ್ತು’ ಎಂದು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿರುವ ಕಾರ್ಗೋ ಮತ್ತು ರೀಟೇಲ್ ಕಂಪನಿಗಳ ವಿವಿಧ ಘಟಕಗಳ ಖಾಸಗಿ ಸಿಬ್ಬಂದಿ, ಹೋಟೆಲ್ ವಿವಿಧ ತಿಂಡಿ ತಿನಿಸು ಇತರ ಸ್ಟಾಲ್‌ಗಳಲ್ಲಿ ಆಡಳಿತ ಮಂಡಳಿ ನೋಂದಾಯಿತ ಖಾಸಗಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸಿ ಕಡಿಮೆ ವೇತನ ಪಡೆಯುತ್ತಿರುವ 27 ರಿಂದ 30 ಸಾವಿರ ಉದ್ಯೋಗಿಗಳಿಗೆ ರಿಯಾಯಿತಿ ದರದಲ್ಲಿ ರೈಲು ಸೇವೆ ನೀಡಲಾಗುತ್ತಿದೆ.

ರೈಲ್ವೆ ಪ್ಲಾಟ್ ಫಾರಂನಿಂದ 3.5 ಕಿ.ಮೀ ದೂರವಿರುವ ವಿಮಾನ ನಿಲ್ದಾಣಕ್ಕೆ ವಾಯುವಜ್ರ ಬಿ.ಎಂ.ಟಿ.ಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೇವೆ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದು ವಿಮಾನ ನಿಲ್ದಾಣ ಆಡಳಿತ ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.

ಪ್ರಸ್ತುತ ದೇವನಹಳ್ಳಿ ರೈಲು ಮಾರ್ಗದಲ್ಲಿ ಮೂರು ರೈಲುಗಳು ಸಂಚರಿಸುತ್ತಿವೆ. ಈ ಯೋಜನೆಯಿಂದ ಕೆಂಗೇರಿ, ವೈಟ್ ಫೀಲ್ಡ್, ಬೆಂಗಳೂರು ರೈಲು ಕೇಂದ್ರ ಮತ್ತು ಯಲಹಂಕ ಮಾರ್ಗವಾಗಿ ಹೆಚ್ಚುವರಿ ರೈಲು ದೇವನಹಳ್ಳಿಯವರೆಗೆ ಸಂಚರಿಸಲಿದೆ.

‘ಬೆಳಿಗ್ಗೆ 4.30ರಿಂದ ರೈಲು ಸೇವೆ ಆರಂಭಗೊಂಡರೂ ಉದ್ಯೋಗಿಗಳ ಪಾಳಿ ಕೆಲಸದ ಅವಧಿಯನ್ನು ಪರಿಗಣಿಸಿ ವೇಳಾಪಟ್ಟಿ ಸಿದ್ಧಗೊಳಿಸಬೇಕಾಗಿದೆ. ಬೆಳಿಗ್ಗೆ 4.30ರಿಂದ 10ರವರಿಗೆ, ಮಧ್ಯಾಹ್ನ 1.30ರಿಂದ 2.30, ಸಂಜೆ 5 ರಿಂದ 6.30 ಮತ್ತು ರಾತ್ರಿ 10 ರಿಂದ 11.30ರವರೆಗೆ ಎಂದು ವೇಳಾಪಟ್ಟಿ ಅಂದಾಜಿಸಿದ್ದರೂ ಅಂತಿಮವಾಗಿಲ್ಲ’ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

‘ಉದ್ಯೋಗಿಗಳು ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ಸಕಾಲದಲ್ಲಿ ಮನೆಗೆ ತಲುಪಬೇಕು ಎಂಬ ದೃಷ್ಟಿಯಿಂದ ರೈಲು ಪ್ರಯಾಣದಲ್ಲಿ ರಿಯಾಯಿತಿ ಮತ್ತು ಬಸ್ ಪ್ರಯಾಣ ಉಚಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಪ್ರಸ್ತುತ ಒತ್ತಡದ ಜೀವನದಲ್ಲಿ ಕ್ಯಾಬ್, ಟ್ಯಾಕ್ಸಿಯನ್ನು ಅವಲಂಬಿಸಬೇಕಾಗಿದೆ. ಜೀವನದ ಆರ್ಥಿಕ ಮಟ್ಟದ ಸುಧಾರಣೆಯಾಗಬೇಕು ಉದ್ಯೋಗಿಗಳು ಸಂತಸದಿಂದ ಇದ್ದರೆ ಕೆಲಸಗಳು ಚುರುಕಾಗಿ ನಡೆಯುತ್ತದೆ ಇದು ದೇಶದಲ್ಲಿ ಮೊದಲ ಬಾರಿಗೆ ನಡೆಸುತ್ತಿರುವ ಪ್ರಯೋಗ ಮಾದರಿಯಾಗಲಿದೆ’ ಎಂಬ ವಿಶ್ವಾಸವಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಉದ್ಯೋಗಿಗಳಿಗೆ ಮೀಸಲಾಗಿದ್ದು ನಂತರ ವಿಮಾನ ನಿಲ್ದಾಣದ ಪ್ರಮಾಣಿಕರಿಗೆ ವಿಸ್ತರಿಸುವ ಚಿಂತನೆಯು ಇದೆ. ಈ ಯೋಜನೆ ಸಾಕಾರಗೊಂಡ ನಂತರ ಅದರ ಚಿಂತನೆಯಿದೆ’ ಎಂದು ವಿಮಾನ ನಿಲ್ದಾಣ ಆಡಳಿತ ಮಂಡಳಿ ವ್ಯವಸ್ಥಾಪಕ ಸುನೀಲ್ ಹೇಳಿದರು.

‘ನೂತನವಾಗಿ ನಿರ್ಮಾಣ ಮಾಡುತ್ತಿರುವ ರೈಲ್ವೆ ಪ್ಲಾಟ್ ಫಾರಂನಲ್ಲಿ ಕುಡಿಯುವ ನೀರು, ವಿದ್ಯುತ್, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹೈಟೇಕ್ ಶೌಚಾಲಯ, ಉಪಹಾರ ಕೇಂದ್ರದ ವ್ಯವಸ್ಥೆ ಇರಲಿದೆ’ ಎಂದು ಅವರು ಹೇಳಿದರು.

ಮೆಟ್ರೊ ರೈಲ್ವೆ ಸೇವೆ ಯಾವಾಗ ಎಂಬುದು ನಮಗೆ ಗೊತ್ತಿಲ್ಲ. ಸಂಚಾರ ದಟ್ಟಣೆಯಲ್ಲಿ ಉದ್ಯೋಗಿಗಳು ಹೈರಾಣ ಆಗಬಾರದು. ಪ್ರಯಾಣಿಕರ ಸಂಖ್ಯೆ ವಾರ್ಷಿಕ ಮಿಲಿಯಗಟ್ಟಲೆ ಏರಿಕೆಯಾಗುತ್ತಿದೆ. ಪೂರಕವಾಗಿ ಬಾಡಿಗೆ ವಾಹನಗಳ ಸಂಖ್ಯೆ ಹೆಚ್ಚು. ಜೊತೆಗೆ ದುಬಾರಿ ಬಾಡಿಗೆ ಹೀಗೆ ಪ್ರತಿಯೊಂದನ್ನು ಪರಿಗಣಿಸಿಯೇ ಈ ಯೋಜನೆಗೆ ಕೈಗೆತ್ತಿಕೊಳ್ಳಲಾಗಿದೆ. ಏಪ್ರಿಲ್ 15ರ ನಂತರ ರೈಲ್ವೆ ಸೇವೆ ಈ ಮಾರ್ಗದಲ್ಲಿ ಕಾರ್ಯಾರಂಭ ಮಾಡಬಹುದು ಮಾರ್ಚ್ ಕೊನೆಯಲ್ಲಿ ರೈಲ್ವೆ ಇಲಾಖೆಗೆ ಪ್ಲಾಟ್‌ ಫಾರಂ ಹಸ್ತಾಂತರಿಸಲಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT