ಬುಧವಾರ, ಸೆಪ್ಟೆಂಬರ್ 22, 2021
21 °C

ಭರಣಿ ಮಳೆ-ರೈತರಿಗೆ ನಿರಾಶೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಭರಣಿ ಮಳೆ ಬಿದ್ದರೆ ಧರಣಿಯೆಲ್ಲಾ ಬೆಳೆ ಎಂಬುದು ರೈತರ ನಂಬಿಕೆ. ಭರಣಿ ಮಳೆ ಬೀಳುವ ಪ್ರಮಾಣದಲ್ಲಿ ಬೆಳೆಗಳನ್ನು ನಿರ್ಧರಿಸುವ ರೈತರ ಮೊಗದಲ್ಲಿ ನಿರಾಶೆಯ ಕಾರ್ಮೋಡ ಕವಿಯುತ್ತಿದೆ.

ಮುಂಗಾರಿನ ಹಂಗಾಮಿನಲ್ಲಿ ರೈತರಲ್ಲಿ ಭರಪೂರ ಆಶಾಭಾವನೆ ಮೂಡಿಸುತ್ತಿದ್ದ ಭರಣಿ ಮಳೆ ಈ ವರ್ಷ ನಿರಾಸೆಗೊಳಿಸಿದೆ. ಸತತವಾಗಿ 6 ವರ್ಷಗಳಿಂದ ಬರಗಾಲಕ್ಕೆ ಸಿಲುಕಿರುವ ಜಿಲ್ಲೆಯಲ್ಲಿ ಮಳೆಗಾಗಿ ರೈತರು ಚಾತಕಪಕ್ಷಿಗಳಂತೆ ಎದುರು ನೋಡುತ್ತಿರುವ ಸಂದರ್ಭದಲ್ಲಿ ಮುಂಗಾರು ಆರಂಭವಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಆತಂಕಕ್ಕೆ ಒಳಗಾಗಲು ಕಾರಣವಾಗಿದೆ ಎಂದು ರೈತ ನಂಜುಂಡಪ್ಪ ಹೇಳುತ್ತಾರೆ.

ಭರಣಿ ಮಳೆ ಅಲ್ಲಲ್ಲಿ ತುಂತುರು ಮಳೆಯ ಹನಿಗಳನ್ನು ಸುರಿಸಲಿಕ್ಕಷ್ಟೇ ಸೀಮಿತವಾಗಿ ಈಗ ಕೃತ್ತಿಕಾ ಮಳೆ ವೇಳೆ ಭೂಮಿ ಹದಗೊಳಿಸುವುದು ವಾಡಿಕೆ. ಆದರೆ, ಬಿತ್ತನೆ ಆರಂಭವಾಗುವುದಕ್ಕೂ ಮುನ್ನ ಮಳೆಯಾಗದ ಕಾರಣ ಇದುವರೆಗೂ ಸಿದ್ಧತೆಗಳು ನಡೆದಿಲ್ಲ. ಭೂಮಿಯನ್ನು ಹದಗೊಳಿಸಿಕೊಂಡು ಬಿತ್ತನೆ ಆರಂಭಿಸಲು ಇನ್ನೂ 15 ದಿನ ಸಮಯಾವಕಾಶವಿದೆ. ಭೂಮಿಯನ್ನು ಹದಗೊಳಿಸುವ ಕಾರ್ಯ ಅರ್ಧ ಭಾಗದಷ್ಟೂ ಆಗಿಲ್ಲ. ಈ ಬಾರಿಯೂ ಬೆಳೆಗಳು ಕುಂಠಿತಗೊಳ್ಳಬಹುದೆಂಬ ಆತಂಕ ಈಗಿನಿಂದಲೇ ಕಾಡಲಾರಂಭಿಸಿದೆ ಎಂದು ರೈತ ನಾರಾಯಣಸ್ವಾಮಿ ತಿಳಿಸುತ್ತಾರೆ.

ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣದಿಂದಾಗಿ ಆಹಾರ ಪದಾರ್ಥಗಳು ಉತ್ಪಾದನೆಗೊಳ್ಳದೆ ಹೋದರೆ ಈ ವರ್ಷವೂ ಗಂಭೀರವಾದ ಸಮಸ್ಯೆಗಳನ್ನು ಎದುರುಗೊಳ್ಳಬೇಕಾಗುತ್ತದೆ ಎನ್ನುವ ಆತಂಕ ಕೃಷಿ ಇಲಾಖೆಯನ್ನೂ ಕಾಡಲಾರಂಭಿಸಿದೆ. ಪಶು ಸಂಗೋಪನಾ ಇಲಾಖೆಯಿಂದ ಮೇವಿನ ಕಿಟ್‌ಗಳನ್ನು ವಿತರಣೆ ಮಾಡಿದರೂ ಮಳೆಯಿಲ್ಲದ ಕಾರಣ ಮೇವಿನ ಕೊರತೆಯನ್ನೂ ಅನುಭವಿಸಬೇಕಾಗಿದೆ ಎಂಬ ಅಳಲು ರೈತ ಹನುಮಂತರಾಯಪ್ಪ ಅವರದು.

ಕಳೆದ ವರ್ಷ ಮೇ ತಿಂಗಳಿನಲ್ಲಿ 92.1 ಎಂ.ಎಂ. ಮಳೆಯಾಗಿತ್ತು. ಆದರೆ, ಈ ಬಾರಿ ಮೇ ತಿಂಗಳು ಆರಂಭಗೊಂಡು ಎರಡು ವಾರಗಳು ಕಳೆಯುತ್ತಿದ್ದು ಕೇವಲ 6.1 ಎಂ.ಎಂ.ನಷ್ಟು ಮಾತ್ರ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಈ ಬಾರಿ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು