ಬುಧವಾರ, ಏಪ್ರಿಲ್ 8, 2020
19 °C
ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಾರ್ಷಿಕೋತ್ಸವ

ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ: ಸಿ.ಡಿ.ಸತ್ಯನಾರಾಯಣಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಸವಾಡಿ (ದೊಡ್ಡಬಳ್ಳಾಪುರ): ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಗ್ರಾಮೀಣ ಸೊಗಡಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಹೊಂದಿವೆ. ಆದರೆ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸುವ ಅವಕಾಶಗಳು ದೊರೆಯುತ್ತಿಲ್ಲ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿ.ಡಿ.ಸತ್ಯನಾರಾಯಣಗೌಡ ಹೇಳಿದರು.

ಅವರು ತಾಲ್ಲೂಕಿನ ಕನಸವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ದೊರೆತರೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಟ್ಟಕ್ಕೆ ಅವರು ಸಾಧನೆ ಮಾಡಲಿದ್ದಾರೆ. ಕನಸವಾಡಿ ಮೊದಲಿನಿಂದಲೂ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಎರಡು ಬಾರಿ ರಾಜ್ಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ವಾಲೀಬಾಲ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸುಬ್ರಹ್ಮಣ್ಯ ಮಾತನಾಡಿ, ‘ಕನಸವಾಡಿ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿಯಲ್ಲಿ ಉತ್ತೀರ್ಣರಾಗುವ ಎಲ್ಲ ವಿದ್ಯಾರ್ಥಿಗಳು ಪಿಯು ತರಗತಿಗಳಿಗೆ ಇದೇ ಕಾಲೇಜಿಗೆ ದಾಖಲಾಗಬೇಕು. ನಮ್ಮ ಕಾಲೇಜಿಗೆ ಹಿರಿಯ ವಕೀಲರಾದ ಆರ್‌.ದಯಾನಂದಸ್ವಾಮಿ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಚಂದನ ಅವರಿಗೆ ₹10 ಸಾವಿರ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ’ ಎಂದರು.

ವಿಜಯಕುಮಾರ್ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಶನಿಮಹಾತ್ಮ ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಪ್ರತಿ ದಿನ ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಮಾಡಲಾಗಿದೆ. ಕೆ.ಎಸ್.ಗಿರೀಶ್ ವಿದ್ಯಾರ್ಥಿಗಳಿಗೆ ಉಚಿತ ‘ಪ್ರಜಾವಾಣಿ’ ಪತ್ರಿಕೆಗಳನ್ನು ಕೊಡಿಸುತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ದೇವಸ್ಥಾನದ ಆಡಳಿತ ಮಂಡಳಿಯವರು ಆರ್ಥಿಕ ನೆರವು ಒದಗಿಸುತ್ತಿದ್ದಾರೆ ಎಂದು ತಿಳಿಸಿದರು.

ಎಂ.ಜಿ.ಆನಂದ್ ಅವರು ಇಡೀ ವರ್ಷ ಶಾಮಿಯಾನ ಹಾಕಿ ಕೊಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ ಅವರು ಪ್ರತಿ ಕಾರ್ಯಕ್ರಮಕ್ಕು ಸಿಹಿ ಹಂಚಿಕೆ ಮಾಡುತ್ತಿದ್ದಾರೆ. ಇವೆಲ್ಲವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಶಾಲಾ, ಕಾಲೇಜುಗಳಿಗೆ ಕೀರ್ತಿ ತರಬೇಕು. ಎಲ್ಲ ವಿಷಯಗಳ ನುರಿತ ಉಪನ್ಯಾಸಕರ ಸಂಪನ್ಮೂಲ ಇದ್ದು ವಿದ್ಯಾರ್ಥಿಗಳು ಉಪನ್ಯಾಸಕರ ಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಚೆನ್ನಮ್ಮರಾಮಲಿಂಗಯ್ಯ, ಮುಖಂಡರಾದ ವಿರೂಪಾಕ್ಷಯ್ಯ, ಯುವ ಮುಖಂಡ ಆರ್.ವಿ.ಗೌಡ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಹನುಮಂತರಾಜು, ಅವರು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಹೊಂದಲು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು