ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ, ವಿದೇಶಗಳಲ್ಲೂ ಹಬ್ಬಿರುವ ಸೀರೆ ಖ್ಯಾತಿ

ನಮ್ಮ ಊರು ನಮ್ಮ ಜಿಲ್ಲೆ: ವಿದ್ಯುತ್‌ ಮಗ್ಗಗಳನ್ನು ತಂದ ಕ್ರಾಂತಿ ಪುರುಷ ದೊಡ್ಡಬಳ್ಳಾಪುರದ ದೊಡ್ಡಲಕ್ಷ್ಮಯ್ಯ
Last Updated 30 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಜೀವನಾಡಿ ನೇಕಾರಿಕೆ. ಜಾತಿ,ಲಿಂಗ,ಧರ್ಮದ ಹಂಗು ಇಲ್ಲದೆ ಉದ್ಯಮವಾಗಿ ಬೆಳೆದಿರುವ ನೇಕಾರಿಕೆಗೆ ಶತಮಾನಗಳ ಇತಿಹಾಸವಿದೆ. ಕೈಮಗ್ಗದಿಂದ ಆರಂಭವಾದ ನೇಕಾರಿಕೆ ಹೈಟೆಕ್‌ ಸ್ಪರ್ಶದೊಂದಿಗೆ ವಿದ್ಯುತ್‌ ಮಗ್ಗಗಳವರೆಗೂ ಬಂದು ನಿಂತಿದೆ. ಸೀರೆಯ ವಿನ್ಯಾಸ ಕಂಪ್ಯೂಟರ್‌ ಬಳಕೆಯಿಂದ ತರೇವಾರಿ ವಿನ್ಯಾಸ ಪಡೆದಿದೆ. ದೇಶ, ವಿದೇಶದವರೆಗೂ ದೊಡ್ಡಬಳ್ಳಾಪುರ ಸೀರೆ ಖ್ಯಾತಿ ಹಬ್ಬಿದೆ.

ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ನೇಕಾರಿಕೆ: ರಾಜ್ಯದಲ್ಲಿ ಹಿಪ್ಪುನೇರಳೆ, ಹುಳು ಸಾಕಾಣಿಕೆ ಸೇರಿದಂತೆ ರೇಷ್ಮೆ ಕೈಗಾರಿಕೆ ಅಭಿವೃದ್ಧಿಯಲ್ಲಿ ಟಿಪ್ಪುಸುಲ್ತಾನ್ ಪ್ರಮುಖ ಕಾರಣಕರ್ತ. ಅದೇ ರೀತಿ ದೊಡ್ಡಬಳ್ಳಾಪುರದ ನೇಕಾರಿಕೆ ಬೆಳೆವಣಿಗೆಯಲ್ಲೂ ಸಹ ಟಿಪ್ಪುಸುಲ್ತಾನ್ ಪಾತ್ರವಿದೆ ಎನ್ನುತ್ತಾರೆ ಇತಿಹಾಸಕಾರ ಡಾ.ಎಸ್‌.ವೆಂಕಟೇಶ್. ಬಂಗಾಳ ಮತ್ತು ಮಸ್ಕತ್‌ಗಳಿಂದ ರೇಷ್ಮೆ ಹುಳುಗಳನ್ನು ತಂದು ಹಾಗೂ ಹಿಪ್ಪುನೇರಳೆ ಮರಗಳನ್ನು ನೆಟ್ಟು ರೇಷ್ಮೆ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿದ. ಬೆಂಗಳೂರು ನಗರ ಮೈಸೂರು ಸಂಸ್ಥಾನದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ದೊಡ್ಡಬಳ್ಳಾಪುರ ಪಾಳೇಗಾರರ ಕಾಲದಿಂದಲೂ ರೇಷ್ಮೆ ನೇಯ್ಗೆಗೆ ಪ್ರಸಿದ್ಧ ಹೊಂದಿತ್ತು. ಇದನ್ನು ಮನಗೊಂಡ ಟಿಪ್ಪುಸುಲ್ತಾನ್‌ ದೊಡ್ಡಬಳ್ಳಾಪುರದ ನೇಕಾರರನ್ನು ಬೆಂಗಳೂರಿನಲ್ಲಿ ನೆಲೆಗೊಳ್ಳುವಂತೆ ಸಕಲ ಏರ್ಪಾಡು ಮಾಡಿದ.

ಅವರೆಲ್ಲಾ ಈ ಮೊದಲೇ ಕೆಂಪೇಗೌಡರ ಕಾಲಕ್ಕೆ ಬಂದು ಇಲ್ಲಿ ನೆಲೆ ನಿಂತಿದ್ದರು. ನೇಕಾರರು ಅಧಿಕವಾಗಿದ್ದ ಅವಿನ್ಯೂ ರಸ್ತೆ ರಂಗಸ್ವಾಮಿ ಗುಡಿಬೀದಿ ‘ಬಳ್ಳಾಪುರಪೇಟೆ’ಯಲ್ಲೇ ನೆಲೆ ನಿಂತರು. ಅಲ್ಲಿ ಇಂದಿಗೂ ಬಳ್ಳಾಪುರ ಪೇಟೆ ಎಂದು ನಾಮಫಲಕ ಇರುವ ಕ್ರಿ.ಶ.1830ರ ಸ್ಥಳವನ್ನು ಕಾಣಬಹುದಾಗಿದೆ. ಅಲ್ಲದೆ, ಇಂದಿಗೂ ಸಹ ಬೆಂಗಳೂರಿನ ಅವಿನ್ಯೂ ರಸ್ತೆ ಇಕ್ಕೆಲೆಗಳ ಬಡಾವಣೆಗಳಲ್ಲಿ ನೆಲೆಸಿರುವ ನೇಕಾರರು, ದೇವಾಂಗ ಸಮುದಾಯದವರು ಮೂಲತಃ ದೊಡ್ಡಬಳ್ಳಾಪುರದವರೇ ಆಗಿರುವುದು ಗಮನಾರ್ಹ. ಆ ಕಾಲದಲ್ಲಿ ಬೆಂಗಳೂರಿಗೆ ಬಂದ ನೇಕಾರರೆಲ್ಲಾ ಉತ್ತಮ ಕಲಾಬತ್ತಿನ, ಸೊಗಸಾದ ಬೆಲೆ ಬಾಳುವ ರೇಷ್ಮೆ ಬಟ್ಟೆಗಳನ್ನು ತಯಾರಿಸುತ್ತಿದ್ದರು. ಈ ಬಟ್ಟೆಗಳನ್ನು ಟಿಪ್ಪು ಅಂದಿನ ಕಾಲಕ್ಕೆ ಕಚ್‌, ಮಸ್ಕತ್‌, ಪೆಗು, ಆರ್ಮೋಸ್, ಜೆಡ್ಡಾ, ಏಡನ್‌, ಬಾಸ್ರಾ ಮುಂತಾದೆಡೆಗೆ ರಫ್ತು ಮಾಡುತ್ತಿದ್ದ ಎನ್ನುತ್ತಾರೆ ಇತಿಹಾಸಕಾರರು.

ಇಲ್ಲಿನ ನೇಕಾರಿಕೆಯನ್ನು ಟಿಪ್ಪುಸುಲ್ತಾನ್ ಮರಣ ನಂತರ ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದ ಬ್ರಿಟಿಷ್ ಈ ಈಸ್ಟ್‌ ಇಂಡಿಯಾ ಕಂಪನಿಯ ಫ್ರಾನ್ಸಿಸ್‌ ಬುಕಾನ್‌ ನನ್ನ ಪ್ರವಾಸದ ವರದಿಯಲ್ಲಿ ದಾಖಲಿಸಿರುವುಂತೆ ‘ಟಿಪ್ಪುಸುಲ್ತಾನನ ಕಾಲದಲ್ಲಿ ದೊಡ್ಡಬಳ್ಳಾಪುರದಲ್ಲಿ ಶಾನುಗಾರರು, ಕನ್ನಡ, ತೆಲುಗು ದೇವಾಂಗದವರು ಉತ್ತಮ ಗುಣಮಟ್ಟದ ಹತ್ತಿ, ರೇಷ್ಮೆಬಟ್ಟೆ ಮತ್ತು ಕಲಾಬತ್ತಿನ ಬಟ್ಟೆ ತಯಾರಿಕೆಯಲ್ಲಿ ನಿರತರಾಗಿದ್ದರು. ಇಲ್ಲಿನ ಬಟ್ಟೆಯನ್ನು ಕಳ್ಳತನದಿಂದ ರಾಜ್ಯದ ಹೊರಗೆ ಹೆಚ್ಚಿನ ಬೆಲೆಗೆ ರವಾನಿಸುತ್ತಿದ್ದರು’ ಎಂದು ದಾಖಲಿಸಿದ್ದಾನೆ.

ವಿದ್ಯುತ್ ಮಗ್ಗ ಆಗಮನ: ವಿದ್ಯುತ್‍ ಮಗ್ಗಗಳನ್ನು ಹೊರತುಪಡಿಸಿ ದೊಡ್ಡಬಳ್ಳಾಪುರ ಊರನ್ನಾಗಲಿ ಇಲ್ಲಿನ ಜನಜೀವನವನ್ನಾಗಲಿ ಕಲ್ಪಿಸಿಕೊಳ್ಳಲಾಗುವುದಿಲ್ಲ. ಇಂದು ನಗರದ ಶೇ 80ರಷ್ಟು ಜನರ ಬದುಕು ಮಗ್ಗಗಳ ಮೇಲೆ ನಿಂತಿದೆ. ಕೈ ಮಗ್ಗಗಳಿಂದ ವಿದ್ಯುತ್ ಮಗ್ಗಗಳಿಗೆ ಸ್ಥಿತ್ಯಂತರವಾಗಿದ್ದು ಆರ್ಥಿಕತೆಯ ದಿಕ್ಕು ದಿಸೆಯೇ ಕ್ರಾಂತಿಕಾರಕ ರೀತಿಯಲ್ಲಿ ಬದಲಾಗಿದೆ. ಬಣ್ಣಗಾರಿಕೆಯನ್ನು ಪರಿಚಿಯಿಸಿದ ಶ್ಯಾಂಪೂರ್ ಪಾಪಣ್ಣ ಆರ್ಥಿಕ ಪ್ರಗತಿಗೆ ಕಾರಣರಾದರೆ, ವಿದ್ಯುತ್ ಮಗ್ಗಗಳನ್ನು ಮೊಟ್ಟಮೊದಲ ಬಾರಿಗೆ ಊರಿಗೆ ಪರಿಚಯಿಸಿದ ದೊಡ್ಡ ಲಕ್ಷ್ಮಯ್ಯ ಮತ್ತೊಂದು ಬದಲಾವಣೆಗೆ ಕಾರಣಕರ್ತರು.

ದೊಡ್ಡಲಕ್ಷ್ಮಯ್ಯ 1871ರಲ್ಲಿ ಜನಿಸಿದರು. ತಂದೆ ವೆಂಕಟರಮಣಪ್ಪ, ತಾಯಿ ತುಳಸಮ್ಮ. ಪ್ರಾಥಮಿಕ ಶಾಲೆಯವರೆಗೆ ವಿದ್ಯಾಭ್ಯಾಸ ಮಾಡಿದ್ದರು. ಹೆಚ್ಚೇನೂ ವಿದ್ಯಾವಂತರಾಗದಿದ್ದರೂ ನೇಕಾರಿಕೆಯೊಂದಿಗಿನ ಒಡನಾಟ ಸಹಜವಾಗಿಯೇ ಬಂದಿತು.

1930ರ ದಶಕದದಲ್ಲಿ ಈಗಿನ ಲಯನ್ಸ್ ಭವನ ರಸ್ತೆಯ ಭಾರತ್ ಪೆಟ್ರೋಲಿಯಂ ಬಂಕ್ ಎದುರು ಇದ್ದ ಮನೆಯಲ್ಲಿ ಮೊದಲು ಮಗ್ಗಗಳನ್ನು ಹಾಕಿದರು. ವಿದ್ಯುತ್ ಸಂಪರ್ಕವಿಲ್ಲದ ಕಾರಣ ಡೀಸೆಲ್ ಜನರೇಟರ್‌ಗಳಲ್ಲಿ ಮಗ್ಗಗಳನ್ನು ನಡೆಸಿದರು. 1936ರಲ್ಲಿ ಕೊಂಗಾಡಿಯಪ್ಪ ಅವರು ಸಾಹಸ ಮಾಡಿ ಊರಿಗೆ ವಿದ್ಯುತ್ ತಂದರು. ಇದಕ್ಕೆ ಲಕ್ಷ್ಮಯ್ಯ ಅವರ ದೊಡ್ಡ ಒತ್ತಾಸೆ ಕೂಡ ಇತ್ತು.

ಗ್ರಾಮಾಂತರ ಜಿಲ್ಲೆಯಲ್ಲಿಯೇ ಪ್ರಥಮ ವಿದ್ಯುತ್ ಪಡೆದ ತಾಲ್ಲೂಕು ದೊಡ್ಡಬಳ್ಳಾಪುರ ಎನ್ನುವ ಹೆಗ್ಗಳಿಕೆ ಒಂದೆಡೆಯಾದರೆ, ಊರಿನಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದವರೆಂದರೆ ಲಕ್ಷಯ್ಯ. ಸಹಜವಾಗಿ ವಿದ್ಯುತ್ ಇಲಾಖೆ ಪ್ರಥಮ ಪವರ್ ಡಿ.ಪಿ.ಸಂಖ್ಯೆ ಇವರಿಗೆ ಬಂದಿತು. 250ಗೆ ಮಗ್ಗ, 50ಗಳಿಗೆ ಮೋಟಾರು,50ಗಳಿಗೆ ಡಾಬಿ. ಇದು ಅಂದಿನ ಕಾಲದ ದರಗಳು.

ಕ್ರಿಯಾಶೀಲತೆಗೆ ಹೆಸರಾಗಿದ್ದ ಲಕ್ಷ್ಮಯ್ಯ ಮಗ್ಗಗಳಲ್ಲೂ ತಾಂತ್ರಿಕತೆ ಪರಿಚಯಿಸಿದರು. ಅದಕ್ಕೆ ಬೇಕಾದ ಪೂರಕ ಸೌಲಭ್ಯವನ್ನು ಒದಗಿಸಿದರು. ಅಲ್ಲದೆ, ಊರಿಗೆ ಪ್ರಥಮವಾಗಿ ಹುರಿಮಿಷನ್, ರಾಗಿ ಮಿಷನ್ ತಂದರು. ದೊಡ್ಡಬಳ್ಳಾಪುರದಲ್ಲಿ ಮೊದಲು ಕಾರು ಮಾಲೀಕ ಕೂಡ ಅವರೇ.

ಮಗ್ಗಗಳ ಜೋಡಣೆ: ರಾಶರ್, ಡಿಕನ್ ಸಂಗ್ ಮಗ್ಗಗಳನ್ನು ಜರ್ಮನಿಯಿಂದ ತರಲಾಗಿತ್ತು. ಆದರೆ, ಜೋಡಿಸಲು ಪರಿಣಿತರು ಬೇಕಾಗಿತ್ತು. ಊರಿನಲ್ಲಿ ಇದು ಯಾರಿಗೂ ಗೊತ್ತಿಲ್ಲದ ವಿದ್ಯೆ. ಇದೇ ಸಂದರ್ಭದಲ್ಲಿ ಲಕ್ಷಯ್ಯ ಅವರಿಗೆ ಬೆಂಗಳೂರಿನ ಬಿನ್ನಿ ಮಿಲ್‍ನ ವೆಂಕೋಬರಾವ್ ಪರಿಚಯವಾಯಿತು. ಅವರಿಗೆ ಮಗ್ಗಗಳನ್ನು ಜೋಡಿಸುವ ಕಲೆ ಗೊತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT