ಶನಿವಾರ, ಜುಲೈ 31, 2021
27 °C
ಛಾಯಾಗ್ರಾಹಕ ವೈ.ಟಿ.ಲೋಹಿತ್‌ ಕ್ಯಾಮೆರಾದಲ್ಲಿ ಸೆರೆ

ಲೈಮ್ ಚಿಟ್ಟೆ ಬದುಕಿನ ವೃತ್ತಾಂತ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಹೂವಿಂದ ಹೂವಿಗೆ ಹಾರಾಡುವ, ಗಿಡಗಳ ಮೇಲೆ ಕುಳಿತಿರುವ ಹೀಗೆ ತರಹೇವಾರಿ ಬಣ್ಣದ ಚಿಟ್ಟೆಗಳನ್ನು ಕಂಡರೆ ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಎಲ್ಲರ ಮನಸ್ಸಿಗೂ ಖುಷಿಕೊಡುತ್ತದೆ. ಒಮ್ಮೆ ಚಿಟ್ಟೆಯ ಬಣ್ಣ ಬಣ್ಣದ ರೆಕ್ಕೆಗಳನ್ನು ಕೈಯಲ್ಲಿ ಸ್ಪರ್ಶಿಸುವ ಆಸೆ ಎಲ್ಲರಿಗೂ ಇರುತ್ತದೆ. 

ಹತ್ತಾರು ರೀತಿಯ ಆಕರ್ಷಕ ಬಣ್ಣಗಳಿಂದ ಕೂಡಿರುವ ಚಿಟ್ಟೆಗಳು ಮರಿಯಾಗಿ ಹೊರಬರುವ ‘ವೃತ್ತಾಂತ’ದ ಬಗ್ಗೆ ನೋಡಿ ತಿಳಿಯಲು ತಾಳ್ಮೆ, ಕುತೂಹಲ ಅತಿ ಮುಖ್ಯ. ಇವುಗಳ ಬೆನ್ನೀರಿ ಹೊರಟಿರುವ ವೈ.ಟಿ.ಲೋಹಿತ್‌ ಚಿಟ್ಟೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿದ್ದಾರೆ. ಇದಕ್ಕಾಗಿ ಹತ್ತಾರು ರೀತಿಯ ಬಣ್ಣದ ಚಿಟ್ಟೆಗಳ ಬದುಕಿನ ಪೂರ್ಣಚಕ್ರದ ಪ್ರತಿ ಹಂತವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಕ್ಯಾಮೆರಾದಲ್ಲಿ ಸೆರೆಯಾಗಿರುವ ಲೈಮ್ ಚಿಟ್ಟೆಯು (ಕಾಮನ್‌ ಲೈಮ್‌/ ಲೈಮ್‌ ಬಟರ್‌ಫ್ಲೈ) ಹಳದಿ, ಕಪ್ಪು, ಕೆಂಪು ಮಿಶ್ರಿತ ಬಣ್ಣವನ್ನು ಹೊಂದಿದೆ. ಇದರ ವೃತ್ತಾಂತವೆಂದರೆ, ಇವು ಸಾಮಾನ್ಯವಾಗಿ ಹೂವಿನ ವನಗಳು ಹಾಗೂ ಹಸಿರು ಪ್ರದೇಶಗಳಲ್ಲಿ ಕಂಡುಬರುತ್ತವೆ. ನಗರದಲ್ಲಿನ ಪಾರ್ಕ್‌ ಸೇರಿದಂತೆ ಮನೆ ಅಂಗಳದಲ್ಲಿನ ಕೈ ತೋಟದಲ್ಲೂ ಕಾಣಸಿಗುತ್ತವೆ. 20ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುವ ಈ ಚಿಟ್ಟೆ, ಪ್ರತಿಯೊಂದು ಮೊಟ್ಟೆಯನ್ನೂ ಬೇರೆ ಬೇರೆ ಕಡ್ಡಿ, ಎಲೆಗಳ ಮೇಲೆ ಇಡುತ್ತದೆ. ಒಂದೇ ಕಡೆಯಲ್ಲಿ ಇದ್ದರೆ, ಬೇರೆ ಭಕ್ಷಕ ಜೀವಿಯಿಂದ ಅಥವಾ ಮಾನವ ಹಸ್ತಕ್ಷೇಪದಿಂದ ಎಲ್ಲಾ ಮೊಟ್ಟೆಗಳು ಹಾಳಾಗುವುದನ್ನು ತಡೆಯಲು ಇದು ಈ ಮಾರ್ಗ ಕಂಡುಕೊಂಡಿದೆ. ಈ ಮೂಲಕ ಸಂತತಿ ಕಾಪಾಡಲು, ಬೆಳೆಸಲು ಅದು ಉಪಾಯ ಕಂಡುಕೊಂಡಿದೆ.

ಮೊಟ್ಟೆ ಒಡೆದು ಮರಿ ಹೊರಬರಲು ಮೂರರಿಂದ ಐದು ದಿನಗಳು ಬೇಕಾಗುತ್ತವೆ. ಮೊಟ್ಟೆಯಿಂದ ಹೊರಬಂದ ಮರಿ ಹುಳು (ಕಂಬಳಿ ಹುಳು ಅಥವಾ ಕ್ಯಾಟರ್‌ಪಿಲ್ಲರ್‌ ) ಮೊದಲ ಆಹಾರವಾಗಿ ತಾನು ಬೆಳೆದು ಹೊರ ಬಂದ ಮೊಟ್ಟೆಯ ಚಿಪ್ಪನ್ನೇ ತಿನ್ನುತ್ತದೆ. ಚಿಟ್ಟೆಯು ಮರಿಯ ಮೊದಲ ಆಹಾರವಾದ ಸಸ್ಯ ಅಥವಾ ಮರದ ಬಳಿಯಲ್ಲಿಯೇ ಮೊಟ್ಟೆಯಿಡುತ್ತದೆ. ಈ ಚಿಟ್ಟೆಯ ಅತಿಥೇಯ ಸಸ್ಯ ಅಥವಾ ಮರ ಲಿಂಬೆ, ಕರಿಬೇವು ಹಾಗೂ ಎಲ್ಚಿ ಹಣ್ಣಿನ ಗಿಡ.

ಈ ಗಿಡಗಳ ಎಲೆಗಳನ್ನು ಬಿಟ್ಟು ಬೇರೆ ಎಲೆಯನ್ನು ಈ ಹುಳು ತಿನ್ನುವುದಿಲ್ಲ. ಮರಿ ಹುಳು ಇಪ್ಪತ್ತು ದಿನಗಳ ನಂತರ ಪ್ಯೂಪಾವಸ್ಥೆ ತಲುಪುತ್ತದೆ. ನಂತರ ಚಿಟ್ಟೆಯಾಗಿ ಮಾರ್ಪಾಡಾಗಲು ಮತ್ತೆ ಹದಿನೈದು ದಿನಗಳು ತೆಗೆದುಕೊಳ್ಳುತ್ತದೆ. ಪ್ಯೂಪಾವಸ್ಥೆಯಿಂದ ಹೊರಬರುವ ವಯಸ್ಕ ಚಿಟ್ಟೆ ಹೆಚ್ಚೆಂದರೆ ಒಂದು ವಾರ ಬದುಕುತ್ತದೆ. ಈ ಕಡಿಮೆ ಅವಧಿಯಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿ ಸಂತತಿ ಬೆಳೆಸುತ್ತದೆ. ಹೆಚ್ಚೆಂದರೆ ಈ ಜೀವನ ಚಕ್ರ ಪೂರೈಸಲು 50 ದಿನ ಆಗಬಹುದು. ಒಂದು ವರ್ಷದಲ್ಲಿ ಸುಮಾರು ಎಂಟು ತಲೆಮಾರುಗಳು ಬಂದಿರುತ್ತವೆ. ಇದರ ವಂಶ ಹಾಗೆಯೇ ಮುಂದುವರಿಯುತ್ತದೆ ಎನ್ನುತ್ತಾರೆ ವೈ.ಟಿ.ಲೋಹಿತ್‌.

‘ತಪ್ಪು ಕಲ್ಪನೆ ದೂರವಾಗಬೇಕು’

ಪ್ರಕೃತಿಯಲ್ಲಿ ವೈವಿದ್ಯಮಯ ಹೂವು, ಹಣ್ಣುಗಳನ್ನು ಕಾಣಲು ಜೇನು ಹುಳುಗಳು ಎಷ್ಟು ಮುಖ್ಯವೊ ಅಷ್ಟೇ ಪ್ರಾಮುಖ್ಯತೆಯನ್ನು ಚಿಟ್ಟೆಗಳು ಸಹ ಹೊಂದಿವೆ. ಇವುಗಳ ಸಂರಕ್ಷಣೆ ಕುರಿತಂತೆ ರೈತರು ಒಂದಿಷ್ಟು ಮಾಹಿತಿ ತಿಳಿಯಬೇಕು. ಇದಲ್ಲದೆ ಚಿಟ್ಟೆಗಳ ಪ್ರಾಮುಖ್ಯತೆಯ ಬಗ್ಗೆ ಕೃಷಿ, ತೋಟಗಾರಿಕೆ ತಜ್ಞರು ಸಹ ತಿಳುವಳಿಕೆ ನೀಡಬೇಕು. ಎಲ್ಲಾ ರೀತಿಯ ಚಿಟ್ಟೆಗಳು ಬೆಳೆಗೆ ಹಾನಿಯುಂಟು ಮಾಡುತ್ತವೆ ಎನ್ನುವ ತಪ್ಪು ಕಲ್ಪನೆಯನ್ನು ಹೊಗಲಾಡಿಸಬೇಕಿದೆ ಎನ್ನುತ್ತಾರೆ ವೈ.ಟಿ.ಲೋಹಿತ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು