ಶುಕ್ರವಾರ, ಅಕ್ಟೋಬರ್ 23, 2020
27 °C
ಅದ್ಭುತ ಶಿಲ್ಪಕಲೆ, ಸೌಂದರ್ಯದ ತಾಣ ಅವನತಿಯತ್ತ

ದೊಡ್ಡಬಳ್ಳಾಪುರ: ಶಿಥಿಲತೆಯತ್ತ ಪುರಾತನ ದೇಗುಲ

ನಟರಾಜ ನಾಗಸಂದ್ರ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಗಂಗರು, ಚೋಳರು, ರಾಷ್ಟ್ರಕೂಟರು, ವಿಜಯನಗರ ಸಾಮ್ರಾಜ್ಯದಿಂದ ಮೊದಲುಗೊಂಡು ಹಲವಾರು ಪಾಳೆಗಾರರ ಆಡಳಿತದ ಕಾಲದಲ್ಲಿ ತಾಲ್ಲೂಕಿನಲ್ಲಿ ಹಲವಾರು ದೇವಾಲಯ ನಿರ್ಮಾಣವಾಗಿವೆ. ಇವುಗಳಲ್ಲಿ ಕೆಲವು ದೇವಾಲಯಗಳು ಕಣ್ಮರೆಯಾಗಿದ್ದು ಇತಿಹಾಸದ ಪುಟಗಳಲ್ಲಿ ಮಾತ್ರ ವಿವರ ಇದೆ. ಇನ್ನು ಕೆಲವು ದೇವಾಲಯಗಳು ಇಂದಿಗೂ ಸುಸ್ಥಿತಿಯಲ್ಲಿವೆ. ಹಲವಾರು ದೇವಾಲಯಗಳು ಜೀರ್ಣೋದ್ದಾರಗೊಂಡಿವೆ. ಇದಲ್ಲದೆ ಒಂದು ಕಾಲಕ್ಕೆ ಸಾಕಷ್ಟು ಹೆಸರು ಮಾಡಿದ್ದ, ಸುಂದರ ಶಿಲ್ಪ ಕಲೆಗೆ ಹೆಸರಾಗಿದ್ದ ದೇವಾಲಯಗಳು ಈಗ ಶಿಥಿಲವಾಗಿ ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಗೆ ಬಂದು ತಲುಪಿವೆ.

ಶಿಥಿಲಾವಸ್ಥೆಯ ಸಾಲಿನಲ್ಲಿ ಪ್ರಥಮವಾಗಿ ಕಾಣುವುದೇ ಮುಕ್ಕಣ್ಣೇಶ್ವರ ದೇವಾಲಯ. ತಾಲ್ಲೂಕಿನ ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಮುಕ್ಕಣ್ಣೇಶ್ವರ ಗುಹಾ ದೇವಾಲಯ ಕ್ರಿಶ. 6ರಿಂದ 8ನೇ ಶತಮಾನದಲ್ಲಿ ಗಂಗರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂದು ಇಲ್ಲಿನ ವಾಸ್ತು ಶಿಲ್ಪ, ಕಲಾ ಶೈಲಿಯಿಂದು ಇತಿಹಾಸ ತಜ್ಞರು ಗುರುತಿಸಿದ್ದಾರೆ.

ಹುಲುಕುಡಿ ಬೆಟ್ಟದ ದೊಡ್ಡದಾದ ಹುಟ್ಟು ಬಂಡೆಯೊಂದರ ತಲಭಾಗದಲ್ಲಿ ಸುಮಾರು ನಾಲ್ಕೈದು ಅಡಿ ಎತ್ತರದ ಗವಿಯಂತಹ ಭಾಗದಲ್ಲಿ ಗರ್ಭಗೃಹವನ್ನು ನಿರ್ಮಿಸಲಾಗಿದೆ. ಈ ಹುಟ್ಟುಬಂಡೆಯ ಮೇಲೆ ಯಾವುದೇ ಗೋಪುರ ನಿರ್ಮಾಣಕ್ಕೂ ಅವಕಾಶವಿಲ್ಲದ ಕಾರಣ ಮೂಲ ಗುಡಿಯೇ ಗುಹಾ ದೇವಾಲಯವಾಗಿದೆ. ಗರ್ಭಗುಡಿಯಲ್ಲಿನ ಲಿಂಗವು ಬಹುಪ್ರಾಚೀನ ಲಕ್ಷಣಗಳನ್ನು ಹೊಂದಿದೆ.

ಇತಿಹಾಸ ತಜ್ಞ ಡಾ.ಎಸ್‌.ವೆಂಕಟೇಶ್‌ ಅವರು ದೇವಾಲಯದ ಒಳ ಭಾಗದಲ್ಲಿನ ನವರಂಗ ಮಂಟಪದಲ್ಲಿನ ಸುಂದರವಾದ ಕಂಬಗಳ ಕೆತ್ತನೆಯಲ್ಲಿನ ಲಕ್ಷಣಗಳನ್ನು ಗುರುತಿಸಿರುವಂತೆ ಕಂಬವನ್ನು ಪೀಠದ ಮೇಲೆ ನಿಲ್ಲಿಸಲಾಗಿದ್ದು, ಕಂಬದಲ್ಲಿ ಪಾದಭಾಗ, ಚತುರ್ಮಾಲೆ, ಅಷ್ಟಮಾಲೆ, ಶೋಷಡ ಮಾಲೆ, ವೃತ್ತಾಕಾರ, ಮಾಲಾಲಂಕಾರ, ಎಡಕಟ್ಟು, ಕುಂಭ, ಕಂಠ, ಮುಚ್ಚಳ, ಬೋಧಿಗೆಗಳು ಇವೆ.

ಈ ಎಲ್ಲಾ ಲಕ್ಷಗಳನ್ನು ಗಮನಿಸಿದರೆ ಗಂಗರು ತಮ್ಮ ಸಮಕಾಲಿನ ರಾಜ ವಂಶಸ್ಥರಾದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಪಲ್ಲವರಿಂದಾಗಲಿ ಪೂರ್ಣ ಪ್ರಭಾವಿತರಾಗದೆ ಸ್ಥಳೀಯ ವಾಸ್ತು ಪ್ರಕಾರವನ್ನು ಬಳಸಿದ್ದಾರೆ. ಗಂಗರ ಶೈಲಿಯಲ್ಲಿ ಪಾದಬಂಧ ಅಧಿಷ್ಟಾನವು ವಿಶಿಷ್ಟ ಮಾದರಿಯಾಗಿದೆ ಎನ್ನುತ್ತಾರೆ.

ಸುಂದರ ಪರಿಸರ: ಮುಕ್ಕಣ್ಣೇಶ್ವರ ದೇವಾಲಯ ಹುಲುಕುಡಿ ಬೆಟ್ಟದ ಪೂರ್ವ ದಿಕ್ಕಿಗೆ ಇದ್ದು ಅತ್ಯಂತ ಸುಂದರವಾದ ಪರಿಸರವನ್ನು ಹೊಂದಿದೆ. ದೇವಾಲಯದ ಬಾಗಿಲು ತುಂಬಾ ಕಿರಿದಾಗಿದ್ದು ಬಾಗಿಕೊಂಡೇ ದೇವಾಲಯ ಪ್ರವೇಶ ಮಾಡಬೇಕು. ಆದರೆ ದೇವಾಲಯದ ಒಳಗೆ ವಿಶಾಲವಾದ ನವರಂಗ ಮಂಟಪ ಇದೆ.

ಮಳೆಗಾಲದಲ್ಲಿ ಇಡೀ ದೇವಾಲಯದ ಸುತ್ತಲು ಹಚ್ಚಹಸಿರಿನ ಮರ ಗಿಡಗಳು, ಹೊಲ, ಗದ್ದೆಗಳನ್ನು ಕಾಣಬಹುದಾಗಿದೆ. ಬೇಸಿಗೆಯಲ್ಲೂ ಸಹ ಈ ದೇವಾಲಯ ಹಾಗೂ ಸುತ್ತ ತಂಪನೆಯ ವಾತಾವರಣ ಇರಲಿದೆ. ಕಾರ್ತೀಕ ಮಾಸದ ಕೊನೆಯ ಸೋಮವಾರ ದೇವಾಲಯದಲ್ಲಿ ಇಂದಿಗೂ ವಿಶೇಷ ಪೂಜೆ, ದೀಪೋತ್ಸವ ನಡೆಯುತ್ತವೆ. ಉಳಿದ ದಿನಗಳಲ್ಲಿ ಗ್ರಾಮದಲ್ಲಿನ ಕೆಲವರು ಬಿಟ್ಟರೆ ಹೊರಗಿನ ಭಕ್ತರರು ಬರುವ ಸಂಖ್ಯೆ ತೀರ ವಿರಳ. ಹೀಗಾಗಿ ದೇವಾಲಯದ ನಿರ್ವಹಣೆ, ಉಸ್ತುವಾರಿ ಇಲ್ಲದೆ ಶಿಥಿಲಾವಸ್ಥೆಯನ್ನು ಹೊಂದಿದೆ. ಬೆಟ್ಟಕ್ಕೆ ಹೊಂದಿಕೊಂಡು ಇರುವ ದೇವಾಲಯದ ಮುಂಭಾಗದ ಪ್ರವೇಶ ದ್ವಾರದಲ್ಲಿನ ಸುಂದರ ಕೆತ್ತನೆಗಳನ್ನು ಹೊಂದಿರುವ ಬಾಗಿಲಿನ ಸುತ್ತಲಿನ ಮಣ್ಣು ಕುಸಿಯ ತೊಡಗಿದೆ. ಇದೇ ರೀತಿ ಒಳ ಭಾಗದಲ್ಲೂ ಕೆಲವು ಕಡೆಗಳಲ್ಲಿ ಮೇಲ್ಛಾವಣಿ ಬೀಳತೊಡಗಿದೆ.

ಮುಕ್ಕಣ್ಣೇಶ್ವರ ದೇವಾಲಯದ ಸಮೀಪವೆ ಸುಂದರವಾದ ಕೆತ್ತನೆಯನ್ನು ಹೊಂದಿರುವ ಮಲಗಿದ ಭಂಗಿಯಲ್ಲಿನ ನಂದಿ ವಿಗ್ರಹವು ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ದೊಡ್ಡಬಳ್ಳಾಪುರ ನಗರದಿಂದ ಸುಮಾರು 18 ಕಿ.ಮೀ ದೂರದಲ್ಲಿನ ವಿಶಿಷ್ಟ ಶಿಲ್ಪಕಲೆಯನ್ನು ಹೊಂದಿರುವ ಮುಕ್ಕಣ್ಣೇಶ್ವರ ದೇವಾಲಯವನ್ನು ಮುಜರಾಯಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸಿದರೆ ಪ್ರತಿ ನಿತ್ಯ ಸಾಕಷ್ಟು ಜನ ಇಲ್ಲಿಗೆ ಬಂದು ಹೋಗುವಂತಾಗಲಿದೆ. ಸಮೀಪದಲ್ಲೇ ಹುಲುಕುಡಿ ವೀರಭದ್ರಸ್ವಾಮಿ ದೇವಾಲಯವು ಇರುವುದರಿಂದ ಉತ್ತಮ ಪ್ರವಾಸಿ ತಾಣವಾಗಲಿದೆ.

 ಚನ್ನಾಪುರದ ದೇವಾಲಯದಲ್ಲಿನ ಶಿಲ್ಪಕಲೆಗಳ ಸೂಕ್ಷ್ಮತೆ, ಸುಂದರತೆ ಹಾಗೂ ಶಿಲ್ಪಗಳಭಾವನೆ ಗಮನಿಸಿದರೆ ಬೇಲೂರು, ಹಳೇಬೀಡು, ಹಂಪಿಯ ಶಿಲ್ಪಗಳನ್ನು ನಾಚಿಸುವಂತೆ ಇವೆ.

ಚನ್ನಾಪುರದ ವೆಂಕಟರಮಣಸ್ವಾಮಿ ದೇವಾಲಯವು ವಿಜಯನಗರ ಶೈಲಿಯಲ್ಲಿದ್ದು ಇದು ವಿಜಯನಗರದ ಸಾಮಂತರ ಅರಸ ದೊಡ್ಡಬಳ್ಳಾಪುರದ ಪಾಳೆಯಗಾರ ಆವತಿ ನಾಡಪ್ರಭು ಇಮ್ಮಡಿ ಹಾವಳೀ ಭೈರೇಗೌಡನ ಕಾಲದಲ್ಲಿ ನಿರ್ಮಾಣವಾಗಿದೆಯೆಂದು ಹೇಳಲಾಗುತ್ತಿದೆ. ಭಾಗವತ ಪುರಾಣಕ್ಕೆ ಸಂಬಂಧಪಟ್ಟ ಶಿಲ್ಪಗಳಲ್ಲಿ ಕೃಷ್ಣನ ಕಾಳಿಂಗಮರ್ಧನ, ಅಂಬೆಗಾಲು ಬಾಲಕೃಷ್ಣ, ವೇಣುಗೋಪಾಲ, ಕೈಯಲ್ಲಿ ಬೆಣ್ಣೆಯ ಮುದ್ದೆಹಿಡಿದಿರುವ ಕೃಷ್ಣ, ದೇವಕಿ ಬೆಣ್ಣೆ ಕಡೆಯುತ್ತಿರುವಾಗ ಹಿಂದಿನಿಂದ ಬಂದು ಅವಳಿಗೆ ಕೀಟಲೆ ಮಾಡುತ್ತಿರುವ ಕೃಷ್ಣ, ಯಶೋಧಾಕೃಷ್ಣ, ಗೋವರ್ಧನ ಗಿರಿಧಾರಿಕೃಷ್ಣ, ಪೂತಿನಿ ಸಂಹಾರ ದೃಶ್ಯಗಳನ್ನು ಸಹ ಇಲ್ಲಿನ ಶಿಲ್ಪಗಳಲ್ಲಿ ಕಾಣಬಹುದಾಗಿದೆ.

ದೇವಾಲಯದ ದ್ವಾರ ಬಾಗಿಲಿಗೆ ನಿಲ್ಲಿಸಲಾಗಿರುವ ಸುಮಾರು 20 ಅಡಿ ಎತ್ತರದ ಗರುಡ ಕಂಬವನ್ನು ಯಾವುದೇ ಆಧಾರ ಇಲ್ಲದೆ ಸಮತಟ್ಟಾದ ಕಲ್ಲಿನ ಮೇಲೆ ನಿಲ್ಲಿಸಿರುವುದು ವಿಶೇಷ. ಇಲ್ಲಿನ ಶಿಲ್ಪಿಗಳು ಸುಂದರವಾಗಿರಲು ಸ್ಥಳೀಯರು ಹೇಳುವಂತೆ ‘ಚನ್ನಾಪುರ ಗ್ರಾಮಕ್ಕೆ ಕೊಯಿರಾ ಗ್ರಾಮ ಹತ್ತಿರ ಇರುವುದರಿಂದ ಇಲ್ಲಿನ ಬೆಟ್ಟದಲ್ಲಿ ದೊರೆಯುವ ಮೆದುವಾದ ಬಿಳಿ ಕಲ್ಲುಗಳಿಂದಲೇ ಬಹುತೇಕ ಶಿಲ್ಪಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಶಿಲ್ಪಗಳಿಗೆ ಸಹಜವಾಗಿಯೇ ಜೀವ ಕಳೆ ಬಂದಿದೆ ಎನ್ನುತ್ತಾರೆ ಇತಿಹಾಸಕಾರರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು