ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂ.ಗ್ರಾಮಾಂತರ | ರೈತರ ಪ್ರತಿಭಟನೆ: ಹಸಿರು ಶಾಲು ಹೊದ್ದ ಗಣಪತಿ

ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಿಂದ ಗಣೇಶ ಚತುರ್ಥಿ ಆಚರಣೆ
Last Updated 2 ಸೆಪ್ಟೆಂಬರ್ 2022, 4:54 IST
ಅಕ್ಷರ ಗಾತ್ರ

ವಿಜಯಪುರ (ಬೆಂ.ಗ್ರಾಮಾಂತರ):ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಕೈಗಾರಿಕಾ ವಲಯ ಸ್ಥಾಪನೆಗೆ ಭೂಸ್ವಾಧೀನ ವಿರೋಧಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು 151 ದಿನಗಳನ್ನು ಪೂರೈಸಿದೆ.

ಹೋರಾಟದ ವೇದಿಕೆಯಲ್ಲಿ ರೈತರು ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಹಸಿರು ಪೇಟ ತೊಡಿಸಿ, ಹಸಿರು ಶಾಲು ಹೊದಿಸಿ, ಕೈಗೆ ಹಸಿರು ಬಾವುಟ ನೀಡಿ ವಿಶಿಷ್ಟವಾಗಿ ಹಬ್ಬ ಆಚರಿಸಿದರು. ಭೂಸ್ವಾಧೀನ ವಿರೋಧಿಸಿ ಸರ್ಕಾರದ ವಿರುದ್ಧ ಗಣೇಶನ ಹೋರಾಟ ಎಂಬ ಬ್ಯಾನರ್ ಕಟ್ಟಿದ್ದರು.

ಹೋರಾಟ ಸಮಿತಿಯ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಸಂಭ್ರಮದಿಂದ ತಮ್ಮ ಹೊಲಗಳಲ್ಲಿ ಬೆಳೆ ಬಿತ್ತನೆ ಮಾಡಿ ಮನೆಗಳಲ್ಲಿ ಹಬ್ಬ ಆಚರಣೆ ಮಾಡಬೇಕಾಗಿದ್ದ ರೈತರಿಗೆ ಇಂದು ನೆಮ್ಮದಿಯಿಲ್ಲ. ಸರ್ಕಾರವು ರೈತರ ಸಂತಸ ಕಸಿದುಕೊಂಡು ಅವರೊಂದಿಗೆ ದೌರ್ಜನ್ಯವಾಗಿ ವರ್ತನೆ ಮಾಡುತ್ತಿದೆ. ಸುಮಾರು 151 ದಿನಗಳಿಂದ ಸುದೀರ್ಘವಾಗಿ ಹೋರಾಟ ನಡೆಸುತ್ತಿದ್ದರೂ ರೈತರಿಗೂ, ನಮಗೂ ಸಂಬಂಧವಿಲ್ಲ ಎನ್ನುವಂತೆ ವರ್ತನೆ ಮಾಡುತ್ತಿದೆ ಎಂದು ಟೀಕಿಸಿದರು.

ಯಾವ ರೈತರು ಭೂಮಿ ಕೊಡ್ತಾರೋ ಅವರ ಭೂಮಿ ಮಾತ್ರ ಸ್ವಾಧೀನ ಪಡಿಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಲಿಖಿತವಾಗಿ ಭರವಸೆ ನೀಡಲು ತಯಾರಿಲ್ಲದ ಕಾರಣ ಸರ್ಕಾರದ ಪ್ರತಿನಿಧಿಗಳ ಮೇಲೆ ರೈತರಿಗೆ ನಂಬಿಕೆಯಿಲ್ಲ ಎಂದರು.

ರೈತ ಮುಖಂಡ ಮಾರೇಗೌಡ ಮಾತನಾಡಿ, ನಾವು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಯಾವತ್ತು ಕೂಡ ಸಾರ್ವಜನಿಕರಿಗಾಗಲಿ ಅಥವಾ ಸರ್ಕಾರಿ ಇಲಾಖೆಗಳಿಗಾಗಲಿ ತೊಂದರೆ ಕೊಟ್ಟಿಲ್ಲ. ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಜಿಲ್ಲಾಧಿಕಾರಿ ಕಚೇರಿ ಬಳಿಗೆ ಹೋಗಿ ಎರಡು ಬಾರಿ ಮನವಿ ಕೊಟ್ಟಿದ್ದೇವೆ. ಮುಖ್ಯಮಂತ್ರಿಗೆ ಮನವಿ ಕೊಟ್ಟರೂ ಅವರು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಸುಧಾಕರ್ ನಾನು ಉಸ್ತುವಾರಿ ವಹಿಸಿಕೊಳ್ಳುವುದಕ್ಕೂ ಮುಂಚೆ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಅವರು ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ‘ರೈತರು ನ್ಯಾಯಸಮ್ಮತವಾದ ಹೋರಾಟ ಮಾಡುತ್ತಿದ್ದಾರೆ. ನಾನು ಕೂಡ ಸದನದಲ್ಲಿ ರೈತರ ಪರವಾಗಿದ್ದೇನೆ. ಆ. 15ರಂದು ರೈತರ ಮೇಲೆ ನಡೆಸಿರುವ ದೌರ್ಜನ್ಯ ಖಂಡನೀಯ’ ಎಂದರು.

ರೈತರ ಮೇಲೆ ಹಾಕಿರುವ ಕೇಸುಗಳನ್ನು ಸರ್ಕಾರ ಕೂಡಲೇ ವಾಪಸ್‌ ಪಡೆಯಬೇಕು ಎಂದು ಸದನದಲ್ಲಿ ಒತ್ತಾಯಿಸುತ್ತೇನೆ. ಕೈಗಾರಿಕೆ ಸಚಿವರು ಸ್ವಯಂ ಪ್ರೇರಿತರಾಗಿ ಭೂಮಿ ಕೊಡುವಂತಹ ರೈತರಿಂದ ಮಾತ್ರ ಸ್ವಾಧೀನ ಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.ರೈತರನ್ನು ಒಕ್ಕಲೆಬ್ಬಿಸಿ ಭೂಸ್ವಾಧೀನ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.

ರೈತರಾದ ನಲ್ಲಪ್ಪನಹಳ್ಳಿ ನಂಜಪ್ಪ, ವೆಂಕಟರಮಣಪ್ಪ, ರಮೇಶ್, ಅಶ್ವಥಪ್ಪ, ಮುಕುಂದ್, ನಂಜೇಗೌಡ, ರಾಮಾಂಜಿನಪ್ಪ, ವೆಂಕಟೇಶ್, ಮೋಹನ್ ಕುಮಾರ್, ಲಕ್ಷ್ಮಮ್ಮ, ನಾರಾಯಣಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT