ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿಸಿದ ಪಶುಗಳಿಗೆ ಲಸಿಕೆ ಕಡ್ಡಾಯ: ಶಾಸಕ ನಿಸರ್ಗ ನಾರಾಯಣಸ್ವಾಮಿ ಸಲಹೆ

ದೇವನಹಳ್ಳಿ ತಾಲ್ಲೂಕಿನ ರೈತರಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಲಹೆ
Last Updated 28 ಜನವರಿ 2021, 1:50 IST
ಅಕ್ಷರ ಗಾತ್ರ

ದೇವನಹಳ್ಳಿ: ರೈತರ ಆರ್ಥಿಕ ಚೈತನ್ಯಕ್ಕೆ ಹಾಲು ಉತ್ಪಾದನೆ ಹೆಚ್ಚಳ ಸಹಕಾರಿಯಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಗೋಕರೆ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣದ ಪೂಜೆಯಲ್ಲಿ ಅವರು ಮಾತನಾಡಿದರು.

ರೈತರ ಕೃಷಿಯ ಮುಂಗಾರು ಮತ್ತು ಹಿಂಗಾರು ಚಟುವಟಿಕೆಗಳು ಬಹುತೇಕ ಮುಗಿದಿವೆ. ಈಗಾಗಲೇ ಬೇಸಿಗೆ ಆರಂಭದ ಹೆಜ್ಜೆ ಇಟ್ಟಿದೆ. ಈ ಬೇಸಿಗೆ ಸಂದರ್ಭದಲ್ಲಿ ಅನೇಕ ಕಡೆ ರಾಸುಗಳ ಜಾತ್ರೆ ಮತ್ತು ಸಂತೆ ನಡೆಯುತ್ತವೆ. ಹೊರಗಡೆಯಿಂದ ಬರುವ ಪಶುಗಳಿಗೆ ವಿವಿಧ ರೋಗಗಳಿರುವ ಸಾಧ್ಯತೆ ಇದೆ. ಅದು ನಮ್ಮ ಹಳ್ಳಿಗಳಲ್ಲಿನ ಪಶುಗಳಿಗೂ ಹರಡುವ ಸಾಧ್ಯತೆ ಇದೆ. ಅಂತಹ ಪಶುಗಳನ್ನು ಖರೀದಿಸಿದರೆ ತಕ್ಷಣ ಪಶುವೈದ್ಯರಿಂದ ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಬೇಕು ಎಂದು
ಹೇಳಿದರು.

ತೋಟಗಾರಿಕೆ ಬೆಳೆಯಲ್ಲಿ ನಿರತರಾಗುವ ರೈತರು ಒಂದು ಬೆಳೆಗೆ ಸಿಮಿತರಾಗದೆ ಮಿಶ್ರ ಬೆಳೆಗಳತ್ತ ಒತ್ತು ನೀಡಬೇಕು. ಈ ಬಾರಿ ಕೃಷಿ ಬೆಳೆಗಳು ಉತ್ತಮ ಫಸಲನ್ನು ಕಂಡಿದೆ. ರಾಗಿ ನಿರೀಕ್ಷೆ ಮೀರಿ ಇಳುವರಿಯಾಗಿದೆ. ಪಶುಪಾಲಕರು ಪಶು ಮೇವನ್ನು ದಾಸ್ತಾನು ಮಾಡಿಕೊಳ್ಳಬೇಕು. ಯಾವ ಸಂದರ್ಭದಲ್ಲಿ ಮಳೆ ಬರುತ್ತದೆ, ಕೈಕೊಡುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಮಾತನಾಡಿ, ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಗುಜರಾತ್‌ನಲ್ಲಿ ಹಾಲು ಉತ್ಪಾದನೆ ಶಿಥಲೀಕರಣ ಕೇಂದ್ರ ಆರಂಭಿಸಿದ ಪ್ರೊ.ಕುರಿಯನ್ ಅವರ ದೂರದೃಷ್ಟಿಯ ಚಿಂತನೆಯಿಂದ ರಾಜ್ಯದಲ್ಲಿ ಹಾಲಿನ ಹೊಳೆ ಹರಿಯುತ್ತಿದೆ. ಉಪ ಕಸುಬು ಆಗಿದ್ದ ಹಾಲು ಉತ್ಪಾದನೆ ವಾಣಿಜ್ಯ ಕಸುಬು ಆಗಿ ರೈತರ ಜೀವನಮಟ್ಟ ಸುಧಾರಣೆಗೆ ಕಾರಣವಾಗಿದೆ. ಪಶುಗಳ ಆರೋಗ್ಯ, ಸ್ವಚ್ಛತೆ ಮತ್ತು ಗುಣಮಟ್ಟದ ಹಾಲಿನ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಎಂಪಿಸಿಎಸ್ ಅಧ್ಯಕ್ಷೆ ಭಾಗಮ್ಮ ಮಾತನಾಡಿ, ಮೊದಲ ಅಂತಸ್ತಿನ ಕಟ್ಟಡಕ್ಕೆ ಸಂಘದಿಂದ ₹ 10 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ಮುಗಿದ ನಂತರ ಬಮೂಲ್ ₹ 2 ಲಕ್ಷ ನೀಡುವುದಾಗಿ ಹೇಳಿದೆ. ಶಾಸಕರ ಅನುದಾನದಲ್ಲಿ ಎಷ್ಟು ನೀಡುತ್ತಾರೋ ಗೊತ್ತಿಲ್ಲ. ಸದ್ಯ ಡೇರಿ ಸುಸ್ಥಿತಿಯಲ್ಲಿದೆ ಎಂದು ಹೇಳಿದರು.

ಖಾದಿ ಬೋರ್ಡ್ ತಾಲ್ಲೂಕು ಅಧ್ಯಕ್ಷ ಎಸ್. ನಾಗೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಸೊಣ್ಣೇಗೌಡ, ಪ್ರಿಯಾಂಕಾ, ಲಕ್ಷ್ಮಿನರಸಮ್ಮ, ಹಾಲು ಒಕ್ಕೂಟ ಶಿಬಿರ ಕಚೇರಿ ಸಹಾಯಕ ವ್ಯವಸ್ಥಾಪಕ ಎಂ.ಇ. ಮುನಿರಾಜೇಗೌಡ, ಡಾ.ಎಸ್. ರಾಜೇಶ್, ಸಂಘದ ಉಪಾಧ್ಯಕ್ಷ ಮುನಿಕೃಷ್ಣ, ನಿರ್ದೇಶಕರಾದ ಡಿ. ಮೋಹನ್, ಕಿಟ್ಟಪ್ಪ, ಚಿಕ್ಕಮುನಿಯಪ್ಪ, ಕೃಷ್ಣಮೂರ್ತಿ, ಎ. ಮಂಜುನಾಥ್, ಸಿ. ಶಂಕರ್, ರಕ್ಷಿತ್ ಕುಮಾರ್, ವೆಂಕಟಲಕ್ಷ್ಮಿ, ಕಾರ್ಯ ನಿರ್ವಾಹಕ ಎನ್. ರಮೇಶ್, ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಗಜೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT