ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.42 ಲಕ್ಷ ಕುಟುಂಬಕ್ಕೆ ಮನೆ, ನಿವೇಶನ ಇಲ್ಲ!

ಜಿಲ್ಲಾ ಪಂಚಾಯ್ತಿಯಿಂದ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ
Last Updated 5 ಜುಲೈ 2018, 10:00 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ 1,42,856 ಕುಟುಂಬಗಳು ನಿವೇಶನ ಮತ್ತು ಮನೆ ಹೊಂದಿಲ್ಲ.ಕೇಂದ್ರ ಸರ್ಕಾರದ ನಿರ್ದೇಶನದಂತೆ, ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ಪಂಚಾಯ್ತಿಗಳು ನಡೆಸಿದ ವಸತಿ ಹಾಗೂ ನಿವೇಶನರಹಿತ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿ ಇದು. ಇಲ್ಲಿನ 1,30,446 ಕುಟುಂಬಗಳಿಗೆ ಮನೆ ಇಲ್ಲ; 12,410 ಕುಟುಂಬಗಳಿಗೆ ನಿವೇಶನವೇ ಇಲ್ಲ ಎಂಬ ಅಂಶ ಹೊರಬಿದ್ದಿದೆ.

2011ರ ಸಾಮಾಜಿಕ, ಆರ್ಥಿಕ ಜನಗಣತಿ ಪಟ್ಟಿಗೆ ಫಲಾನುಭವಿಗಳನ್ನು ಸೇರಿಸಿ ಪಟ್ಟಿ ತಯಾರಿಸಲು ಕೇಂದ್ರ ಸೂಚಿಸಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ಹಾಗೂ ಅಲ್ಪಸಂಖ್ಯಾತರ ಪಟ್ಟಿ ಸಿದ್ಧಪಡಿಸಲಾಗಿದೆ. ಗುಡಿಸಲು, ಗೋಡೆರಹಿತ ಮನೆ, ಒಂದು ಅಥವಾ ಎರಡು ಕೋಣೆ, ಕಚ್ಚಾ ಗೋಡೆ, ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಆ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಗುತ್ತಿದೆ. ವಿವಿಧ ವಸತಿ ಯೋಜನೆಯಡಿ ಮನೆಗಳನ್ನು ಕಟ್ಟಿಸಿಕೊಡುವಾಗ ಈ ಫಲಾನುಭವಿಗಳಿಗೆ ಸಹಾಯಧನ ದೊರೆಯಲಿದೆ.

ಮನೆ ಇಲ್ಲದವರಲ್ಲಿ ಸಾಮಾನ್ಯ ವರ್ಗದವರ (103574) ಸಂಖ್ಯೆಯೇ ಜಾಸ್ತಿ ಇದೆ!. ಈ ಸಂಖ್ಯೆ ಚಿಕ್ಕೋಡಿ ತಾಲ್ಲೂಕಿನಲ್ಲಿ ಹೆಚ್ಚು ಅಂದರೆ, 18213 ಇದೆ. ನಂತರದ ಸ್ಥಾನದಲ್ಲಿ ಅಥಣಿ (16702) ಇದೆ. ನಿವೇಶನರಹಿತರಲ್ಲಿ ಗೋಕಾಕ ತಾಲ್ಲೂಕಿನವರ ಸಂಖ್ಯೆ ಜಾಸ್ತಿ (1939) ಇದೆ. ಹುಕ್ಕೇರಿಯಲ್ಲಿ ಅತಿ ಕಡಿಮೆ ಅಂದರೆ 391 ಮಂದಿಗೆ ನಿವೇಶನವಿಲ್ಲ ಎನ್ನುವ ಅಂಶ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಖಾತ್ರಿ ಯೋಜನೆಯಲ್ಲಿ ನೆರವು:

‘ಸಮೀಕ್ಷೆ ನಡೆದಿದೆ. ಆನ್‌ಲೈನ್‌ನಲ್ಲಿ ದಾಖಲಿಸಲಾಗುತ್ತಿದೆ. ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯ್ತಿ ಸೂಚನಾ ಫಲಕದಲ್ಲಿ ಶೀಘ್ರವೇ ಪ್ರಕಟಿಸಲಾಗುವುದು. ಯಾರಾದರೂ ಅರ್ಹ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದ್ದರೆ ಮಾಹಿತಿ ನೀಡಬಹುದು. ವಿವಿಧ ವಸತಿ ಯೋಜನೆಗಳಡಿ ಪ್ರಗತಿಯಲ್ಲಿರುವ ಮನೆಗಳ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಲಾನುಭವಿಗಳಿಗೆ ಆರ್ಥಿಕವಾಗಿ ನೆರವಾಗಲು, ಉದ್ಯೋಗ ಖಾತ್ರಿ ಮತ್ತು ವಸತಿ ಯೋಜನೆ ಒಗ್ಗೂಡಿಸುವಿಕೆಯಲ್ಲಿ ಒಟ್ಟು 90 ಮಾನವ ದಿನಗಳನ್ನು 4 ಹಂತಗಳಲ್ಲಿ ನೀಡಲಾಗುವುದು. ಈ ಅವಧಿಯಲ್ಲಿ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳಲು ಅವಕಾಶವಿದೆ’ ಎನ್ನುತ್ತಾರೆ ಅವರು.

ಯಾರಿಗೆ, ಎಷ್ಟು ಮೀಸಲು?:

ರಾಜ್ಯ ಸರ್ಕಾರ ಅಂಬೇಡ್ಕರ್‌ ನಿವಾಸ್, ಬಸವ ವಸತಿ, ವಿಶೇಷ ವರ್ಗ ಹಾಗೂ ಕೇಂದ್ರದಿಂದ ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಅಂಬೇಡ್ಕರ್‌ ನಿವಾಸ್‌ ಯೋಜನೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾಗಿದೆ. ಬಸವ ವಸತಿ ಯೋಜನೆಯಡಿ ಶೇ. 50ರಷ್ಟು ಸಾಮಾನ್ಯ ವರ್ಗ, ಶೇ 50ರಷ್ಟು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾಗಿದೆ. ಪ್ರಧಾನ ಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿ ಶೇ.85ರಷ್ಟು ಫಲಾನುಭವಿಗಳನ್ನು ಪರಿಶಿಷ್ಟ ಸಮುದಾಯದವರನ್ನೇ ಆಯ್ಕೆ ಮಾಡಬೇಕು. ಶೇ.15ರಷ್ಟು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ಪಂಚಾಯ್ತಿಗೆ ನೀಡಿದ ಗುರಿಯನ್ನಾಧರಿಸಿ, ಫಲಾನುಭವಿಗಳನ್ನು ಗ್ರಾಮಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಅಂಬೇಡ್ಕರ್‌, ಬಸವ ವಸತಿ ಯೋಜನೆ ಫಲಾನುಭವಿಗೆ ಮನೆ ಕಟ್ಟಲು ₹ 1.20 ಲಕ್ಷ, ಪ್ರಧಾನಮಂತ್ರಿ ಗ್ರಾಮೀಣ ವಸತಿ ಯೋಜನೆಯಡಿ ಫಲಾನುಭವಿಗೆ ₹ 1.50 ಲಕ್ಷ ಸಹಾಯಧನ ಸಿಗುತ್ತದೆ. ಮೂರು ಯೋಜನೆಗಳಲ್ಲೂ ಅಡಿಪಾಯ, ಗೋಡೆ, ರೂಫಿಂಗ್‌, ಪೂರ್ಣವಾದಾಗ... ಹೀಗೆ ಅನುದಾನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಸ್ವಂತ ನಿವೇಶನ, ಬಿಪಿಎಲ್‌, ಆಧಾರ್‌ಕಾರ್ಡ್‌, ಬ್ಯಾಂಕ್‌ ಖಾತೆ ಹೊಂದಿರಬೇಕು. ಆಯ್ಕೆಯಾದವರು ₹ 1.20 ಅಥವಾ ₹ 1.50 ಲಕ್ಷ ಮಿತಿ ಅಥವಾ ಅದಕ್ಕಿಂತ 4 ಪಟ್ಟು ಹೆಚ್ಚು ಹಣದಲ್ಲಿ ಮನೆ ಕಟ್ಟಿಸಿಕೊಳ್ಳಬಹುದು.

ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿ 34ಸಾವಿರ ಮನೆಗಳ ನಿರ್ಮಾಣ ಗುರಿ ನೀಡಲಾಗಿತ್ತು. ಈ ಪೈಕಿ 29ಸಾವಿರ ಪೂರ್ಣಗೊಂಡಿವೆ. ಉಳಿದವು ವಿವಿಧ ಹಂತದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT