ಗೋಕಾಕ: ‘ದೇಶದಲ್ಲಿ ಜನರಿಗೋಸ್ಕರ ಇರುವ ಒಂದೇ ಒಂದು ಪಕ್ಷವೆಂದರೆ ಅದು ಭಾರತೀಯ ಜನತಾ ಪಾರ್ಟಿ’ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಾಗೂ ರಾಜ್ಯ ಸದಸ್ಯತ್ವ ಅಭಿಯಾನದ ಸಂಚಾಲಕ ಸೈಯದಅಲಿ ತಿಮ್ಮಾಪೂರ ಹೇಳಿದರು.
ಶನಿವಾರ ನಗರದಲ್ಲಿ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲ ಹಾಗೂ ಅಲ್ಪಸಂಖ್ಯಾತ ಮೋರ್ಚಾದ ಆಶ್ರಯದಲ್ಲಿ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಈಗಾಗಲೇ 18 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯಮಟ್ಟದಲ್ಲಿ ಪ್ರಸ್ತುತ ಅವಧಿಯಲ್ಲಿ 50 ಲಕ್ಷ ಸದಸ್ಯರನ್ನು ಮಾಡುವ ಗುರಿಯನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೀಡಿದ್ದಾರೆ. ಅದನ್ನು ಮಾಡುವ ಜವಾಬ್ದಾರಿ ಪತ್ರಿಯೊಬ್ಬರ ಕಾರ್ಯಕರ್ತನ ಮೇಲಿದ್ದು ಅದನ್ನು ಚಾಚೂ ತಪ್ಪದೆ ಪೂರೈಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ’ ಎಂದರು.
ಗ್ರಾಮೀಣ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಮಾತನಾಡಿ, ರಾಜ್ಯದಲ್ಲಿಯೇ ಗೋಕಾಕ ಮತಕ್ಷೇತ್ರದಿಂದ ಹೆಚ್ಚಿನ ಸದಸ್ಯರನ್ನು ಮಾಡುವ ಗುರಿ ಹೊಂದಲಾಗಿದ್ದು ಕಾರ್ಯಕರ್ತರು ಸಹಕರಿಸಬೇಕು ಎಂದರು.
ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಶಕೀಲ್ ಧಾರವಾಡಕರ ಮಾತನಾಡಿ, ಈಗಾಗಲೇ 5 ಸಾವಿರ ಸದಸ್ಯರನ್ನು ಮಾಡಲಾಗಿದ್ದು, ಬರುವ ದಿನಗಳಲ್ಲಿ ಇನ್ನೂ 20 ಸಾವಿರ ಅಲ್ಪಸಂಖ್ಯಾತರಿಗೆ ಪಕ್ಷದ ಸದಸ್ಯತ್ವ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಸಭೆಯಲ್ಲಿ ಬಿಜೆಪಿ ನಗರ ಮಂಡಳ ಅಧ್ಯಕ್ಷ ಭೀಮಶಿ ಭರಮನ್ನವರ, ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಜಾವೇದ್ ಗೋಕಾಕ, ಕಾರ್ಯದರ್ಶಿ ಜುಬೇರ ತ್ರಾಸ್ಗಾರ, ಗಫಾರ ಕಾಗಜಿ, ಸುರೇಶ್ ಸನದಿ, ಹನುಮಂತ ದುರಗಣ್ಣವರ ಪಾಲ್ಗೊಂಡಿದ್ದರು.