ಸವದತ್ತಿ (ಬೆಳಗಾವಿ ಜಿಲ್ಲೆ): ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮೂವರು ಮಹಿಳೆಯರ ವಿರುದ್ಧ ಇಲ್ಲಿನ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸವದತ್ತಿ ಘಟಕದ ಬಸ್ ನಿರ್ವಾಹಕ ವಿ.ಎಸ್. ಭದ್ರಣ್ಣವರ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಜತಿಹಾಳದ ಶಂಕರಮ್ಮ ಶಿವಶಂಕರ ಬೊಮ್ಮನಾಶ, ಶಾಂತಮ್ಮ ಬಸವಂತಯ್ಯ ಚೌಧರಿ ಮತ್ತು ಬೂದಿಹಾಳದ ಮಹಾದೇವಿ ಬಸವರಾಜ ಕೊಣ್ಣೂರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಶುಕ್ರವಾರ ಸಂಜೆ ಸವದತ್ತಿ ಸಮೀಪದ ದಡೇರಕೊಪ್ಪಕ್ಕೆ ಬಸ್ ಬಂದಾಗ, ಬೇಗ ಬೇಗ ಬಸ್ ಹತ್ತುವಂತೆ ಕಂಡಕ್ಟರ್ ಜನರಿಗೆ ಕೂಗಿ ಹೇಳಿದರು. ಆಗ ಮಹಿಳೆಯರು ಕಂಡಕ್ಟರ್ ಜೊತೆ ಜಗಳ ತೆಗೆದು, ಕೊರಳಪಟ್ಟಿ ಹಿಡಿದು ಹಲ್ಲೆ ಮಾಡಿದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಹಿಳೆಯರೊಂದಿಗೆ ಇದ್ದ ಪುರುಷನೊಬ್ಬ ನನಗೆ ಅವಾಚ್ಯ ಪದ ಬಳಸಿದರು. ಅದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯರಿಗೆ ಹೇಳಿ ಹಲ್ಲೆ ಮಾಡಿಸಿದರು. ಪುರುಷ ಹಲ್ಲೆ ಮಾಡಿದರೆ ಕೇಸ್ ಆಗುತ್ತದೆ, ನೀವೇ ಹೊಡೆಯಿರಿ ಎಂದು ಮಹಿಳೆಯರನ್ನು ಪುಸಲಾಯಿಸಿದರು. ಆಗ ಮಹಿಳೆಯರು ಬಸ್ ಒಳಗೆ ಎಳೆದು ನನ್ನನ್ನು ಸೀಟ್ ಮೇಲೆ ಕೂಡ್ರಿಸಿ ಒದ್ದರು’ ಎಂದೂ ಕಂಡಕ್ಟರ್ ವಿ.ಎಸ್.ಭದ್ರಣ್ಣವರ ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.