ಚನ್ನಮ್ಮನ ಕಿತ್ತೂರು (ಬೆಳಗಾವಿ): ರಾಣಿ ಚನ್ನಮ್ಮನ ಕರ್ಮಭೂಮಿಯಲ್ಲಿ ಸೋಮವಾರ ನಡೆದ ಕಿತ್ತೂರು ಉತ್ಸವದ ಮೆರವಣಿಗೆಗೆ ಜನಸಾಗರವೇ ಹರಿದುಬಂತು.
ಬ್ಯಾಂಡ್, ಗೆಜ್ಜೆಮೇಳ, ಹುಲಿ ವೇಷ,ಗೊಂಬೆ ಕುಣಿತ, ಭಜನೆ ಸೇರಿ ವಿವಿಧ ಕಲಾತಂಡಗಳ ಮೆರುಗಿನೊಂದಿಗೆ 4 ಕಿ.ಮೀ. ದೂರದವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು.
ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಸಾರೋಟದ ಕುದುರೆಗಳು ಕೋಡಿ ಹಾಗೂ ಆನೆ ಚನ್ನಮ್ಮನ ಚಿತ್ರ ಹೊತ್ತು ಸಾಗಿದವು.
ಕಿತ್ತೂರು ಸೇನೆ 1824 ಅ.23ರಂದು ಬ್ರಿಟಿಷ್ ಸೇನೆಯನ್ನು ಸೋಲಿಸಿತು. ಆ ವಿಜಯದ ಸಂಕೇತವಾಗಿ ಉತ್ಸವ ಆಚರಿಸಲಾಗುತ್ತಿದೆ. ಈ ಬಾರಿ ರಾಜ್ಯ ಮಟ್ಟದಲ್ಲಿ ಆಚರಿಸುತ್ತಿರುವುದು ಈ ಭಾಗದವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಶಾಸಕ ಮಹಾಂತೇಶ ದೊಡ್ಡ ಗೌಡರ ಮತ್ತು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಉತ್ಸವಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಿತ್ತೂರು ಸಂಸ್ಥಾನದ ನಂದಿಧ್ವಜ ಆರೋಹಣ ಮಾಡಿದರು.
ನಿಚ್ಚಣಕಿವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆ ಉದ್ಘಾಟಿಸ ಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಬರಲಿಲ್ಲ. ಕಿತ್ತೂರು, ಬೈಲಹೊಂಗಲ ಶಾಸಕರ ಹೊರತಾಗಿ ಜಿಲ್ಲೆಯ ಇತರ ಜನಪ್ರತಿನಿಧಿಗಳೂ ಇತ್ತ ಸುಳಿಯಲಿಲ್ಲ.
ಜನೋತ್ಸವದಲ್ಲಿ ಉತ್ಸಾಹ ಮತ್ತು ಹುಮ್ಮಸ್ಸಿಗೂ ಕೊರತೆ ಇರಲಿಲ್ಲ.