ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಜಿಲ್ಲೆಯಲ್ಲಿ ಕಳೆಗಟ್ಟಿದ ಈದ್‌ ಉಲ್‌ ಫಿತ್ರ್‌ ಸಂಭ್ರಮ

Published 11 ಏಪ್ರಿಲ್ 2024, 6:27 IST
Last Updated 11 ಏಪ್ರಿಲ್ 2024, 6:27 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಗುರುವಾರ ಈದ್‌ ಉಲ್‌ ಫಿತ್ರ್‌ ಸಂಭ್ರಮ ಕಳೆಗಟ್ಟಿತ್ತು. ಮಕ್ಕಳು, ಹಿರಿಯರಾದಿಯಾಗಿ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ಅತ್ತರ್‌ನ ಘಮಲು ಪೂಸಿಕೊಂಡು ಸಂಭ್ರಮಿಸಿದರು. ಬೆಳಿಗ್ಗೆಯೇ ಈದ್ಗಾ ಮೈದಾನಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಈ ಬಾರಿ ಬರಗಾಲದ ಬವಣೆಯಿಂದ ಜನರನ್ನು ರಕ್ಷಿಸು ಎಂದು ಧರ್ಮಗುರುಗಳು ಅಲ್ಲಾಹುನಲ್ಲಿ ಪ್ರಾರ್ಥನೆ ಮಾಡಿದರು. ಉಪವಾಸ ವೃತ ಮಾಡಿದ ಹಲವು ಮಕ್ಕಳು ಕೂಡ ಜುಬ್ಬಾ, ಟೋಪಿಗಳನ್ನು ಧರಿಸಿ ಗಮನ ಸೆಳೆದರು.‌

ರಂಜಾನ್‌ ಅಂಗವಾಗಿ ಒಂದು ತಿಂಗಳ ಉಪವಾಸ ಆಚರಿಸಿದ ಮುಸ್ಲಿಮರು, ಹಬ್ಬದ ಕೊನೆಯ ದಿನವನ್ನು ಶ್ರದ್ಧೆಯಿಂದ ಕಳೆದರು. ಹಿಂದೂ, ಕ್ರೈಸ್ತ ಸಮುದಾಯದ ಹಲವು ಮುಖಂಡರು ಕೂಡ ಶುಭಾಶಯ ಕೋರಿ ಸಹಬಾಳ್ವೆಯ ಸಂದೇಶ ಸಾರಿದರು.

ಮಸೀದಿಗಳಿಗೆ ತೆರಳಿದ ಪುರುಷರು, ಮಕ್ಕಳು ನಮಾಜ್‌ ಮಾಡಿದರು. ಇಲ್ಲಿನ ನ್ಯಾಯಾಲಯ ಬಳಿ ಇರುವ ಈದ್ಗಾ ಮೈದಾನ, ಕೋಟೆ ಆವರಣದಲ್ಲಿರುವ ಪುರಾತನ ಕಾಲದ ಮಸೀದಿಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರು. ಎಲ್ಲ ಸಣ್ಣಪುಟ್ಟ ಮಸೀದಿ, ದರ್ಗಾಗಳಲ್ಲೂ ಮುಸ್ಲಿಮ್‌ ಧರ್ಮೀಯರ ಸಂಭ್ರಮ ಮನೆ ಮಾಡಿತು.

ಹೊಸ ಬಟ್ಟೆ ತೊಟ್ಟು ಬಂದಿದ್ದ ಮುಸ್ಲಿಂ ಯುವಕರು, ಹಿರಿಯರು, ಮಕ್ಕಳು ಈದ್ಗಾ ಮೈದಾನಕ್ಕೆ ತಂಡೋ‍ಪ ತಂಡವಾಗಿ ಬಂದರು. ನಮಾಜ್ ನಂತರ ಪರಸ್ಪರರು ಅಪ್ಪಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಪ್ರಯುಕ್ತ ಚಿಣ್ಣರ ಉತ್ಸಾಹವೂ ಇಮ್ಮಡಿಯಾಗಿತ್ತು.

ಎಲ್ಲರ ಬದುಕಿನಲ್ಲಿ ಶಾಂತಿ, ಸಹಬಾಳ್ವೆ ಮೂಡಲಿ, ಬರದ ಸಂಕಷ್ಟಗಳಿಂದ ಹೊರಬರಲಿ ಎಂದು ಪ್ರಾರ್ಥಿಸಿದ್ದಾಗಿ ಮೌಲ್ವಿಗಳು ತಿಳಿಸಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರೂ ಈದ್ಗಾಗೆ ತೆರಳಿ ಹಬ್ಬದ ಶುಭಾಶಯ ಕೋರಿದರು.

ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಖಾನಾಪುರ, ರಾಮದುರ್ಗ, ಸವದತ್ತಿ, ಹಿರೇಬಾಗೇವಾಡಿ, ರಾಯಬಾಗ, ನಿಪ್ಪಾಣಿ ಸೇರಿದಂತೆ ಎಲ್ಲ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಪ್ರಾರ್ಥನೆಗೆ ಬರುವವರ ದಟ್ಟಣೆ ಹೆಚ್ಚಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT