ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಲಾಕ್‌ಡೌನ್‌: ಅನಾವಶ್ಯಕ ತಿರುಗಾಡುವವರಿಗೆ ಬಿಸಿ ತೋರಿಸಲಿದ್ದಾರೆ ಪೊಲೀಸರು!

Last Updated 23 ಮೇ 2020, 14:25 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್‌ಡೌನ್‌ನಿಂದ ಒಂದು ವಾರಗಳ ಕಾಲ ಬಹುತೇಕ ಸಡಿಲಿಕೆ ನೀಡಿದ್ದ ಸರ್ಕಾರ, ಭಾನುವಾರ ಸಂಪೂರ್ಣವಾಗಿ ಬಂದ್‌ ಮಾಡಲು ನಿರ್ಧರಿಸಿದೆ. ಇದರ ನಿಮಿತ್ತ ಭಾನುವಾರ ಬೆಳಗಾವಿ ಜಿಲ್ಲೆ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ.

ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರು ಸಂಪೂರ್ಣ ಲಾಕ್‌ಡೌನ್‌ ಕುರಿತು ಶನಿವಾರ ಅಧಿಸೂಚನೆ ಹೊರಡಿಸಿದ್ದಾರೆ. ಶನಿವಾರ ಸಂಜೆ 7 ಗಂಟೆಯಿಂದ ಭಾನುವಾರವೂ ಸೇರಿದಂತೆ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಲಾಕ್‌ಡೌನ್‌ ಆಗಿರಲಿದೆ.

ಅಗತ್ಯ ಸೇವೆಗಳಾದ ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಪೆಟ್ರೋಲ್‌ ಬಂಕ್‌, ಹಾಲು, ದಿನಸಿ, ಹಣ್ಣು– ತರಕಾರಿ ಅಂಗಡಿಗಳು ತೆರೆದಿರಲಿವೆ. ಮಾಂಸ, ಮೀನಿನ ಅಂಗಡಿಗಳಿಗೂ ಅನುಮತಿ ನೀಡಲಾಗಿದೆ. ಅಗತ್ಯ ಸೇವೆಗಳನ್ನು ನೀಡುವವರನ್ನು ಹೊರತುಪಡಿಸಿದರೆ ಇತರ ಸಂಚಾರದ ಮೇಲೆ ನಿರ್ಬಂಧ ಹೇರಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದಾರೆ.

ಪೂರ್ವಾನುಮತಿ ಪಡೆದುಕೊಂಡು ನಿಗದಿಪಡಿಸಿಕೊಂಡಿರುವ ಮದುವೆಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಕೇವಲ 50 ಜನರು ಇದರಲ್ಲಿ ಭಾಗವಹಿಸಬಹುದು. ಪರಸ್ಪರ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಅವರು ಸೂಚನೆ ನೀಡಿದ್ದಾರೆ.

ಈ ಸೇವೆಗಳಿರಲ್ಲ:ಸಾರಿಗೆ ಬಸ್‌, ಆಟೊ, ಟ್ಯಾಕ್ಸಿ, ಜೀವನಾವಶ್ಯಕ ವಸ್ತುಗಳನ್ನು ಹೊರತುಪಡಿಸಿದ ಇತರ ಅಂಗಡಿಗಳು, ಕ್ಷೌರದಂಗಡಿ, ಪಾರ್ಕ್‌ಗಳು ಸಂಪೂರ್ಣ ಬಂದ್‌ ಆಗಿರುತ್ತವೆ.

36 ಗಂಟೆಗಳ ಸ್ತಬ್ಧ:ಲಾಕ್‌ಡೌನ್‌ ನಿಯಮದಂತೆ ಶನಿವಾರ ಸಂಜೆ 7 ಗಂಟೆಯಿಂದಲೇ ಜನಸಂಚಾರದ ಮೇಲೆ ನಿರ್ಬಂಧ ಹೇರಲಾಗಿತ್ತು. ಭಾನುವಾರವೂ ಸೇರಿದಂತೆ ಸೋಮವಾರ ಬೆಳಿಗ್ಗೆ 7 ಗಂಟೆಯವರೆಗೆ ಅಂದರೆ 36 ಗಂಟೆಗಳ ಲಾಕ್‌ಡೌನ್‌ ಇದಾಗಿರಲಿದೆ.

ಖರೀದಿ ಭರಾಟೆ:ಸಂಪೂರ್ಣವಾಗಿ ಲಾಕ್‌ಡೌನ್‌ ಆಗುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಮನೆಗೆ ಅವಶ್ಯಕವಾದ ವಸ್ತುಗಳನ್ನು ಜನರು ಶನಿವಾರ ಮುಗಿಬಿದ್ದು ಖರೀದಿಸಿದರು. ಇದರಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆಯೂ ಉಂಟಾಗಿತ್ತು. ದಿನಸಿ, ಹಾಲು, ಮೊಟ್ಟೆ, ಮಾಂಸ ಹಾಗೂ ಮೀನನ್ನು ಕೂಡ ಖರೀದಿಸಿದರು. ಮದ್ಯವನ್ನು ಸಾಲುಗಟ್ಟಿ ನಿಂತು ಖರೀದಿಸಿದ್ದು ಕಂಡುಬಂದಿತು.

ಬಿಗಿ ಪೊಲೀಸ್‌ ಬಂದೋಬಸ್ತ್‌:ಜಿಲ್ಲೆಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಜಿಲ್ಲೆಯೊಳಗೆ ಪ್ರವೇಶಿಸುವ ಹಾಗೂ ಹೊರಹೋಗುವ ವಾಹನಗಳ ಮೇಲೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಲಿದ್ದಾರೆ. ನಗರದೊಳಗೆ ಎಲ್ಲ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಬಂದೋಬಸ್ತ್‌ ಮಾಡಲಿದ್ದಾರೆ. ಅನಾವಶ್ಯಕವಾಗಿ ಸಂಚರಿಸುತ್ತಿರುವುದು ಕಂಡುಬಂದರೆ, ಅಂತಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT