ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನವರು ಚಾರಿತ್ರ್ಯವಧೆಯಂಥ ಚಿಲ್ಲರೆ ರಾಜಕಾರಣ ಬಿಡಲಿ: ಶೆಟ್ಟರ್‌

Last Updated 5 ಏಪ್ರಿಲ್ 2021, 6:53 IST
ಅಕ್ಷರ ಗಾತ್ರ

ಬೆಳಗಾವಿ: ‘ಸಿ.ಡಿ. ಪ್ರಕರಣದ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್‌ನವರು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಚಾರಿತ್ರ್ಯವಧೆ ಮಾಡುವಂತಹ ಚಿಲ್ಲರೆರಾಜಕಾರಣ ನಿಲ್ಲಿಸಬೇಕು’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿರುಗೇಟು ನೀಡಿದರು.

ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ವಿಷಯದಲ್ಲಿ ಕಾಂಗ್ರೆಸ್‌ನವರು ಮಾನವೀಯತೆಯಿಂದ ನಡೆದುಕೊಳ್ಳಬೇಕು. ವಿಚಾರಣೆ ಮತ್ತು ತನಿಖೆ ಪ್ರಕ್ರಿಯೆಗಳು ವರ್ಷಗಟ್ಟಲೆ ನಡೆಯುವುದನ್ನು ನೋಡಿದ್ದೇವೆ. 15 ದಿನಗಳಲ್ಲಿ ಎಲ್ಲವೂ ಮುಗಿದು ಹೋಗಬೇಕು ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಬಯಸಿದ್ದಾರೆಯೇ? ಅವರು, ಉಪ ಚುನಾವಣೆ ಎದುರಿಸಿ ಗೆದ್ದು ತೋರಿಸಲಿ. ಅದನ್ನು ಬಿಟ್ಟು ವೈಯಕ್ತಿಕ ಸಂಬಂಧಗಳ ಬಗ್ಗೆ ಕೆದಕಿ ಚಾರಿತ್ರ್ಯವಧೆ ಮಾಡುವುದು ಸರಿಯಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಎಸ್‌ಐಟಿಯವರು ತನಿಖೆ ಪೂರ್ಣಗೊಳಿಸಿದ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತದೆ. ಅಲ್ಲಿವರೆಗೂ ಕಾಯದೆ ಇರುವುದರಿಂದ, ಕಾಂಗ್ರೆಸ್ ನಾಯಕರ ಬಗ್ಗೆಯೇ ವಿಚಾರ ಮಾಡಬೇಕಾಗುತ್ತದೆ. ಅವರ ನಡವಳಿಕೆ ಬಗ್ಗೆ ಸಂಶಯ ಮೂಡುತ್ತದೆ. ಕಾಂಗ್ರೆಸ್‌ನವರು ಮಾತ್ರ ಸಾಚಾ, ಉಳಿದವರು ಅಲ್ಲವೇ? ತನಿಖೆ ಮುಗಿಯುವವರೆಗೂ ಕಾಯಲಿ’ ಎಂದರು.

‘ಪ್ರಚಾರದ ವಿಚಾರವಾಗಿ, ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಕಳೆದ ವಾರ ಮಾತನಾಡಿದ್ದೇನೆ. ಎಸ್‌ಐಟಿ ಪ್ರಕರಣದ ವಿಚಾರಣೆ ಇರುವುದರಿಂದ ರಮೇಶ ಪ್ರಚಾರಕ್ಕೆ ಬಂದಿಲ್ಲ. ಆದರೆ, ಪಕ್ಷದ ಅಭ್ಯರ್ಥಿ ಗೆಲ್ಲಿಸುವಂತೆ ಬೆಂಬಲಿಗರಿಗೆ ಸೂಚಿಸಿದ್ದಾರೆ. ಪ್ರಚಾರಕ್ಕೆ ಇನ್ನೂ ಅವಕಾಶವಿದೆ. ಬರಬಹುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT