ಭಾನುವಾರ, ಆಗಸ್ಟ್ 14, 2022
23 °C
ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿಕೆ

'ಆರ್‌ಎಸ್‌ಎಸ್‌ ರೀತಿಯಲ್ಲಿ ನಮ್ಮ ಶತ್ರುಗಳಿಗೂ ತರಬೇತಿ ಕೊಡುವುದಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ಕೆ. ಹರಿಪ್ರಸಾದ್

ಬೆಳಗಾವಿ: ‘ಆರ್‌ಎಸ್‌ಎಸ್‌ ರೀತಿಯಲ್ಲಿ ನಮ್ಮ ಶತ್ರುಗಳನ್ನು ಕೂಡ ತಯಾರು ಮಾಡುವುದಿಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಇಲ್ಲಿನ ಪಕ್ಷದ ಕಚೇರಿಯಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಘಟಪ್ರಭಾದಲ್ಲಿ ನಾ.ಸು. ಹರ್ಡೀಕರ್‌ ಸಮಾಧಿ ಸ್ಥಳದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲಿ ರಾಜ್ಯದ ಕಾರ್ಯಕರ್ತರಿಗೆ ತರಬೇತಿ ಕೊಡಲಾಗುವುದು’ ಎಂದರು.

ಆರ್‌ಎಸ್‌ಎಸ್‌ ಮಾದರಿ ಅನುಸರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ‘ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಪಕ್ಷದ ಸಿದ್ಧಾಂತ ಹಾಗೂ ಇತಿಹಾಸ ಗಮನದಲ್ಲಿಟ್ಟುಕೊಂಡು ದೇಶದ ಅಭಿವೃದ್ಧಿಗಾಗಿ ಕಾರ್ಯಕರ್ತರು ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸಲಾಗುವುದು. ನಾವು ಲಾಠಿ ಹಿಡಿದರೆ ಬೇರೆಯವರಿಗೆ ಸಹಾಯ ಆಗುವಂತಹ ರೀತಿಯಲ್ಲಿ ಇರುತ್ತದೆಯೇ ವಿನಃ ಭಯ ಬೀಳಿಸುವಂತಿರುವುದಿಲ್ಲ. ಅಂತಹ ಸಂಘಟನೆಗಳಿಗೂ ನಮಗೂ ಸಂಬಂಧವಿಲ್ಲ’ ಎಂದು ಹೇಳಿದರು.

‘ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದಂತಹ ಆರ್‌ಎಸ್‌ಎಸ್‌ನಿಂದ ನಾವು ಕಲಿಯುವಂಥದ್ದು ಏನೂ ಇಲ್ಲ’ ಎಂದರು.

‘ಬಿಜೆಪಿಯ ಕೆಲವು ದೊಡ್ಡ ನಾಯಕರು ಅಫೀಮು ತೆಗೆದುಕೊಳ್ಳದೇ ಮನೆಯಿಂದ ಈಚೆಗೆ ಬರುತ್ತಿರಲೇ ಇಲ್ಲ. ಅದೆಲ್ಲವೂ ನಮಗೆ ಗೊತ್ತಿದೆ. ಆದರೆ, ಅವರ ಹೆಸರು ಹೇಳಲು ಬಯಸುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಡ್ರಗ್ಸ್‌ ವಿಚಾರದಲ್ಲಿ ಒಂದು ಧರ್ಮದವರನ್ನು ಗುರಿಪಡಿಸುವುದು ತಪ್ಪು. ಕಾನೂನು ಬಾಹಿರವಾದ ಕೆಲಸವನ್ನು ಯಾವುದೇ ಧರ್ಮದವರು ಅಥವಾ ಪಕ್ಷದವರು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ, ಈಗ ಕೇವಲ ಹೆಣ್ಮಕ್ಕಳನ್ನಷ್ಟೆ ಗುರಿಪಡಿಸಲಾಗುತ್ತಿದೆ. ಗಂಡಸರ‍್ಯಾರೂ ಅಫೀಮು, ಗಾಂಜಾ ತೆಗೆದುಕೊಳ್ಳುವುದಿಲ್ಲವೇ? ಕೋವಿಡ್–19 ನಿರ್ವಹಣೆಯಲ್ಲಿ ಆಗಿರುವ ವೈಫಲ್ಯಗಳನ್ನು ಮುಚ್ಚಿ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಾಂಜಾ ವಿಚಾರದಲ್ಲಿ ಸಲೆಬ್ರಿಟಿಗಳನ್ನು ಟಾರ್ಗೆಟ್ ಮಾಡುತ್ತಿವೆ’ ಎಂದು ಆರೋಪಿಸಿದರು.

‘ಕಾನೂನು ಬಾಹಿರ ಚಟುವಟಿಕೆಗಳೇನೇ ನಡೆದರೂ ಅದನ್ನು ಅಲ್ಪಸಂಖ್ಯಾತ ನಾಯಕರೇ ಮಾಡಿದ್ದು ಎಂದು ಬಿಂಬಿಸುವುದು ಬಿಜೆಪಿಯರಿಗೆ ಫ್ಯಾಷನ್‌  ಆಗಿಬಿಟ್ಟಿದೆ’ ಎಂದು ಟೀಕಿಸಿದರು.

‘ಅಲ್ಪಸಂಖ್ಯಾತರನ್ನು ಟಾರ್ಗೆಟ್‌ ಮಾಡುವುದೇ ಬಿಜೆಪಿಯ ಮೂಲ ಉದ್ದೇಶ. ಅದು 1923ರಿಂದಲೂ ನಡೆದುಕೊಂಡು ಬಂದಿದೆ. ಅದರ ವಿರುದ್ಧ ಹೋರಾಟಕ್ಕಾಗಿಯೇ ಕಾರ್ಯಕರ್ತರನ್ನು ಸಜ್ಜು ಮಾಡುತ್ತಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು