ಭಾನುವಾರ, ಜೂನ್ 13, 2021
25 °C

ಲಾಕ್‌ಡೌನ್ ಕಾರಣ ಕಾರ್ಯಕ್ರಮವಿಲ್ಲ: ಕಲೆ ನೆಚ್ಚಿದ್ದವರ ಬದುಕು ದುಸ್ತರ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕಲೆಯನ್ನೇ ಉಸಿರಾಗಿಸಿಕೊಂಡು ನಾಡಿನ ಶ್ರೀಮಂತ ಕಲಾ ಪರಂಪರೆ ಉಳಿಸಿ–ಬೆಳೆಸುವ ಜಾನಪದ, ನಾಟಕ ಕಲಾವಿದರ ಬದುಕು ಕೊರೊನಾ ಕಂಟಕದಿಂದಾಗಿ ಮೂರಾಬಟ್ಟೆಯಾಗಿದೆ. ಲಾಕ್‍ಡೌನ್‍ನಿಂದಾಗಿ ಕಲಾ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಅವರು ಕಂಗಲಾಗಿದ್ದು, ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಒಂದಿಷ್ಟು ಜಮೀನು ಹೊಂದಿರುವ ಮಧ್ಯಮ ವರ್ಗದ ಹವ್ಯಾಸಿ ಕಲಾವಿದರು ಬದುಕು ಒಂದಡೆಯಾದರೆ, ಯಾವುದೇ ಆಸ್ತಿ ಇಲ್ಲದೇ ಕಲೆಯನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿರುವ ಕಲಾವಿದರ ಬದುಕಿನ ಮೇಲೆ ಕೋವಿಡ್ ಕರಿನೆರಳು ಬಿದ್ದಿದೆ. ಕುಟುಂಬ ನಿರ್ವಹಣೆಗೆ ಹೆಣಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತೀವ್ರ ತೊಂದರೆ: ತಾಲ್ಲೂಕಿನ ಹಳ್ಳಿಗಳಲ್ಲಿ ವೈಭವದ ಜಾತ್ರೆ ಹಾಗೂ ಪರಂಪರೆಯ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗ್ರಾಮಸ್ಥರು ಕಲಾತಂಡಗಳನ್ನು, ಬಯಲಾಟ ತಂಡಗಳನ್ನು ಆಹ್ವಾನಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಗೀಗೀ ಪದ, ಚೌಡಕಿ ಪದ, ಡೊಳ್ಳಿನ ಪದ, ಭಜನಾ ಪದ, ಸಣ್ಣಾಟ, ಪಾರಿಜಾತ ಮೊದಲಾದ ತಂಡಗಳು ಕಲಾ ಪ್ರದರ್ಶನ ನೀಡಿ, ಬಂದ ಅಲ್ಪ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾನಪದ ವಾದ್ಯ ಕಲೆಗಳಾದ ಕರಡಿ ಮಜಲು, ಹಲಗೆ ವಾದನ, ತಾಸೆ ವಾದನ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಸಂಭಾಳ ವಾದನ, ಖಣಿವಾದನ ನುಡಿಸಿ ಹಬ್ಬಕ್ಕೆ ಮೆರಗು ನೀಡಿ ಆ ಆದಾಯದಲ್ಲಿ ಉಪಜೀವನ ನಡೆಸುತ್ತಿದ್ದರು.

ಲಾಕ್‍ಡೌನ್‍ನಿಂದಾಗಿ ಮದುವೆ, ಧಾರ್ಮಿಕ ಕಾರ್ಯಗಳು ನಿಂತು ಹೋಗಿವೆ. ವಾದ್ಯಗಳು ದೂಳು ತಿನ್ನುತ್ತಾ ಮೂಲೆ ಸೇರಿವೆ. ದೊಡ್ಡ ದೊಡ್ಡ ಜಾತ್ರೆಗಳಲ್ಲಿ ಒಂದೂರಿನಿಂದ ಇನ್ನೊಂದೂರಿಗೆ ಕ್ಯಾಂಪ್ ಹಾಕಿ ವೃತ್ತಿ ನಾಟಕ ಕಂಪನಿಗಳವರು ತಿಂಗಳಗಟ್ಟಲೆ ನಾಟಕ ಪ್ರದರ್ಶನ ನೀಡುತ್ತಿದ್ದರು. ಕೊರೊನಾದಿಂದ ಬಣ್ಣದ ಲೋಕ ರಂಗ ಪರೆದೆಯಿಂದ ಹಿಂದೆ ಸರಿದಿದೆ. ಬಂಡವಾಳ ಹೂಡಿದ ಕಂಪನಿ ಮಾಲೀಕರು ದಿಕ್ಕು ತೋಚದೆ ಅಸಹಾಯಕರಾದರೆ, ಕಲಾವಿದರ ಬದುಕು ಶೋಚನೀಯವಾಗಿದೆ.

ಅಕಾಡೆಮಿ ರಚನೆಗೆ ಆಗ್ರಹ: ‘ಸರ್ಕಾರದ ಯೋಜನೆಗಳ ಪ್ರಚಾರ, ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಜಾಗೃತಿಗೆ ಬೀದಿನಾಟಕ ಕಲಾತಂಡಗಳು ಶ್ರಮಿಸುತ್ತಿದ್ದವು. ಸರ್ಕಾರಿ ಕಾರ್ಯಕ್ರಮಗಳು ನಿಂತು ಹೋಗಿರುವುದರಿಂದ ಬೀದಿನಾಟಕ ಕಲಾತಂಡಗಳು ಬೀದಿ ಪಾಲಾಗಿವೆ. ಯೋಜನೆಗಳನ್ನು ಪ್ರಚಾರ ಮಾಡಲು ಕಲಾ ತಂಡಗಳನ್ನು ಬಳಸಿಕೊಳ್ಳುವ ಸರ್ಕಾರ, ಬೀದಿನಾಟಕ ಆಕಾಡೆಮಿ ರಚಿಸಬೇಕು. ಮುಂಬರುವ ದಿನಗಳಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ವಿವಿಧ ಇಲಾಖೆಗಳ ಮೂಲಕ ಜಾಗೃತಿ ಕಾರ್ಯಕ್ರಗಳಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ರಾಜ್ಯ ಬೀದಿನಾಟಕ ಒಕ್ಕೂಟ ಬೆಳಗಾವಿ ವಿಭಾಗದ ಸಂಚಾಲಕ ಭರತ ಕಲಾಚಂದ್ರ ಒತ್ತಾಯಿಸುತ್ತಾರೆ.

3 ತಿಂಗಳಿನಿಂದ ಮಾಸಾಶನವೂ ಬಂದಿಲ್ಲ: ‘ಸರ್ಕಾರದ ಆಹ್ವಾನದ ಮೇರೆಗೆ ಉತ್ಸವಗಳಲ್ಲಿ ಕಲಾ ಪ್ರದರ್ಶನ ನೀಡಿ, ದೊರೆಯುವ ಗೌರವಧನದಿಂದ ಕಲಾವಿದರು ಬದುಕಿನ ಬಂಡಿ ಎಳೆಯುತ್ತಿದ್ದರು. ಆದರೆ, ಲಾಕ್‍ಡೌನ್‍ನಿಂದಾಗಿ ಸರ್ಕಾರದಿಂದ ಎಲ್ಲ ಉತ್ಸವಗಳು, ಜಯಂತಿಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ.

‘ಹಾಡುವವರಿಗೆ ಹಾದಿ ಸಿಗಲಿಲ್ಲ, ವಾದ್ಯ ನುಡಿಸುವವರಿಗೆ ಊರು ಸಿಗಲಿಲ್ಲ’ ಎಂಬ ನಾಣ್ಣುಡಿಯಂತೆ ಕಲೆಯನ್ನೇ ನೆಚ್ಚಿಕೊಂಡಿರುವ ಕಲಾ ಸಮುದಾಯ ದಿಕ್ಕು ತೋಚದಂತಾಗಿದೆ. ಬೇರೆ ವೃತ್ತಿಯಲ್ಲಿ ನೈಪುಣ್ಯ ಹೊಂದಿರದ ಕಲಾವಿದರು ಜೀವನ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ. ಮೂರು ತಿಂಗಳುಗಳಿಂದ ಕಲಾವಿದರಿಗೆ ಮಾಸಾಶನವನ್ನೂ ನೀಡುತ್ತಿಲ್ಲ’ ಎಂದು ಬಂಬಲವಾಡದ ಕಲಾವಿದ ಬಾಳಪ್ಪ ಕುಂಬಾರ ಅಳಲು ತೋಡಿಕೊಂಡರು.

***

58 ವರ್ಷ ಮೀರಿದ ಕಲಾವಿದರಿಗೆ ₹ 2 ಸಾವಿರ ಮಾಸಾಶನ ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಸಾಧ್ಯವೇ?. ಈ ಮೊತ್ತವನ್ನು ₹ 5 ಸಾವಿರಕ್ಕೆ ಹೆಚ್ಚಿಸಬೇಕು.
-ಭರತ ಕಲಾಚಂದ್ರ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು